ಗ್ರಾಮ ಪಂಚಾಯ್ತಿ ಚುನಾವಣೆ: ಗದಗದಲ್ಲಿ ಚಿಹ್ನೆಗಳನ್ನು ಕಂಡು ಚಿಂತಾಕ್ರಾಂತರಾದ ಅಭ್ಯರ್ಥಿಗಳು; ವಿಚಿತ್ರವಾಗಿದೆ ಕಾರಣ!

ರಾಜ್ಯಾದ್ಯಂತ ಈಗ ಗ್ರಾಮಪಂಚಾಯಿತಿ ಚುನಾವಣೆಯ ತಯಾರಿ ನಡೆಯುತ್ತಿದ್ದು, ಈ ಬಾರಿ ಹಲವು ಕಾರಣಗಳಿಂದ ಗದಗ ಗ್ರಾಮಪಂಚಾಯಿತಿ ಚುನಾವಣೆ ಸುದ್ದಿಯ ಕೇಂದ್ರಬಿಂದುವಾಗಿದೆ. 
ಗ್ರಾಮಪಂಚಾಯ್ತಿ ಚುನಾವಣೆ (ಸಾಂಕೇತಿಕ ಚಿತ್ರ)
ಗ್ರಾಮಪಂಚಾಯ್ತಿ ಚುನಾವಣೆ (ಸಾಂಕೇತಿಕ ಚಿತ್ರ)
Updated on

ಗದಗ: ರಾಜ್ಯಾದ್ಯಂತ ಈಗ ಗ್ರಾಮಪಂಚಾಯಿತಿ ಚುನಾವಣೆಯ ತಯಾರಿ ನಡೆಯುತ್ತಿದ್ದು, ಈ ಬಾರಿ ಹಲವು ಕಾರಣಗಳಿಂದ ಗದಗ ಗ್ರಾಮಪಂಚಾಯಿತಿ ಚುನಾವಣೆ ಸುದ್ದಿಯ ಕೇಂದ್ರಬಿಂದುವಾಗಿದೆ. 

ಗದಗ ಗ್ರಾಪಪಂಚಾಯಿತಿಯ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಹೇಗೆ ಡಿಜಿಟಲ್ ಪರಿಕಲ್ಪನೆ ಮೊರೆ ಹೋಗಿದ್ದಾರೆ ಎಂಬುದನ್ನು ಮೊನ್ನೆಯಷ್ಟೇ ಓದಿದ್ದಿರಿ, ಈಗ ಅಭ್ಯರ್ಥಿಗಳು ಗ್ರಾಮಫೋನ್, ಡೋರ್ ಲಾಚ್ ಚಿಹ್ನೆಯನ್ನು ತೆಗೆದುಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಚಿಹ್ನೆ ಇರುವುದಕ್ಕೆ ಅಸಮಾಧಾನವನ್ನೂ ವ್ಯಕ್ತಪಡಿಸುತ್ತಿದ್ದಾರೆ. 

ಚಿಹ್ನೆಯಲ್ಲೇನಿದೆ ಅಂತಹದ್ದು ಎಂದು ನೀವು ಕೇಳಬಹುದು, ಈ ಅಭ್ಯರ್ಥಿಗಳನ್ನು ಕೇಳಿದರೆ, ವಿಚಿತ್ರವಾದ ಅಚ್ಚರಿಯಾಗುವಂತಹ ಕಾರಾಣಗಳನ್ನು ಹೇಳುತ್ತಾರೆ. ಸ್ಥಳೀಯ ಆಡು ಭಾಷೆಯಲ್ಲಿ ಗ್ರಾಮಫೋನ್ ಎಂದರೆ, ಖಾಲಿ ಭಾರವಸೆಗಳನ್ನು ನೀಡುವವನು  ಎಂದರ್ಥವಂತೆ, ಇನ್ನು ಡೋರ್ ಲಾಕ್ ಎಂದರೆ ಅಭಿವೃದ್ಧಿ ಕಾಮಗಾರಿಗಳಿಗೆ ಬಾಗಿಲು ಮುಚ್ಚಿರುವುದು ಎಂದು ಅರ್ಥವಿದೆ ಎನ್ನುತ್ತಾರೆ. ಟೋಪಿ ಚಿಹ್ನೆ ಎಂದರೆ ಮೋಸ ಮಾಡುವುದು, ಬ್ಯಾಸ್ಕೆಟ್ ಎಂದರೆ ಅತಿ ಆಸೆಯುಳ್ಳವನು, ಮೆಣಸಿನಕಾಯಿ ಎಂದರೆ ಅತ್ಯಂತ ಒರಟು ಎಂಬೆಲ್ಲಾ ಅರ್ಥಗಳಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ನೀಡಲಾಗಿರುವ ಚಿಹ್ನೆಗಳ ಬಗ್ಗೆ ಅಭ್ಯರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. 

ಕೆಲವೊಂದು ಚಿಹ್ನೆಗಳು ತಮ್ಮ ಪ್ರಚಾರ, ಚುನಾವಣಾ ತಂತ್ರಗಾರಿಕೆಗೆ ಮುಳುವಾಗಬಹುದು ಎಂದು ಅಭ್ಯರ್ಥಿಗಳು ನಂಬಿರುವುದಾಗಿ ಹೇಳಿದ್ದಾರೆ ಉಪ ಆಯುಕ್ತ ಸುಂದರೇಶ್ ಬಾಬು ಎನ್. ಕರ್ನಾಟಕ ಪಂಚಾಯತ್ ರಾಜ್ (ಚುನಾವಣಾ ನೀತಿ ಸಂಹಿತೆ) 1993 ರ ರೂಲ್ 21 ರ ಪ್ರಕಾರ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನೀಡಲಾಗಿದೆ. ಇದನ್ನು ಅಭ್ಯರ್ಥಿಗಳು ತೆಗೆದುಕೊಳ್ಳಬೇಕು. ಪ್ರಚಾರಕ್ಕಿಂತ ಚಿಹ್ನೆಯ ಬಗ್ಗೆಯೇ ಅಭ್ಯರ್ಥಿಗಳು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎನ್ನುತ್ತಾರೆ ಉಪ ಆಯುಕ್ತರು.

ರೋಣ ತಾಲೂಕಿನ ಶಿರೋಲ್ ನ ಗ್ರಾಮಸ್ಥ ವೀರೇಶ್ ಪತ್ತಾರ್ ಅಭ್ಯರ್ಥಿಗಳ ಆತಂಕದ ಬಗ್ಗೆ ಮಾತನಾಡಿದ್ದು, ನಗರ ಪ್ರದೇಶದಲ್ಲಿ ಜನರು ಚಿಹ್ನೆಗಳಿಗೆ ಹೆಚ್ಚು ಮಹತ್ವ ನೀಡುವುದಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಚಿಹ್ನೆಯನ್ನು ನೀಡುವುದನ್ನೇ ಕಾಯುವ ಜನರು ನಕಾರಾತ್ಮಕ ಚಿಹ್ನೆ ಪಡೆಯುವ ದುರದೃಷ್ಟವಂತನನ್ನು ಗೇಲಿ ಮಾಡಲು ಪ್ರಾರಂಭಿಸುತ್ತಾರೆ.

ಒಂದು ವೇಳೆ ಆ ಅಭ್ಯರ್ಥಿ ಸೋತರೆ, ಸೋಲಿನ ಹೊಣೆಯಲ್ಲಾ ಚಿಹ್ನೆಯದ್ದೇ!!!. ಒಂದು ವೇಳೆ ಓರ್ವ ಅಭ್ಯರ್ಥಿಗೆ ಹೆಲ್ಮೆಟ್ ಚಿಹ್ನೆಯಾಗಿ ದೊರೆತು ಆತ ಸೋತರೆ, "ಹೆಲ್ಮೆಟ್ ಅಭ್ಯರ್ಥಿಯ ತಲೆ ಉಳಿಸಲು ವಿಫಲವಾಯಿತು" ಎನ್ನುವ ಮಾತುಗಳು... ದಾಕ್ಷಿಯ ಚಿಹ್ನೆ ಪಡೆದಿರುವ ವ್ಯಕ್ತಿ ಸೋತರೆ ಅದನ್ನು ಹುಳಿ ದ್ರಾಕ್ಷಿ ಎನ್ನಲು ಪ್ರಾರಂಭಿಸುತ್ತಾರೆ. ಆದ್ದರಿಂದ ಇವೆಲ್ಲಾ ಮಾತುಗಳು ಬರಲೇಬಾರದು ಅಂತಹ ಚಿಹ್ನೆಯನ್ನು ಅಭ್ಯರ್ಥಿಗಳು ಹುಡುಕಲು ಯತ್ನಿಸುತ್ತಾರೆ" ಎನ್ನುತ್ತಾರೆ ಪತ್ತಾರ್

ಹಾಗಂತ ಎಲ್ಲಾ ಚಿಹ್ನೆಗಳನ್ನೂ ಜನ ನಕಾರಾತ್ಮಕವಾಗಿಯೇ ನೋಡುವುದಿಲ್ಲ. ಸೈಕಲ್ ಚಿಹ್ನೆ ದೊರೆತರೆ ಯಶಸ್ಸಿನ ಪೆಡಲ್ ಎಂದು ಭಾವಿಸುತ್ತಾರೆ, ಟಾರ್ಚ್ ದೊರೆತರೆ ಕತ್ತಲೆ ದೂರ ಮಾಡುವುದು ಎನ್ನುತ್ತಾರೆ. ವಿಚಿತ್ರವೆಂದರೆ ಹೆಡ್ ಫೋನ್ ಗಳಿಗೆ ಅತ್ಯುತ್ತಮ ಸಕಾರಾತ್ಮಕ ಅಭಿಪ್ರಾಯವಿದ್ದು, ಹೆಡ್ ಫೋನ್ ನ್ನು ಸಮಸ್ಯೆಗಳನ್ನು ಆಲಿಸುವವ ಎಂದು ಭಾವಿಸುತ್ತಾರೆ. ಆದರೆ ಅಭ್ಯರ್ಥಿಗಳ ಇಷ್ಟದಂತೆ ಚುನಾವಣಾ ಆಯೋಗ ಚಿಹ್ನೆಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com