ತುಮಕೂರು ಗ್ರಾಮ ಪಂಚಾಯಿತಿ ಅಭ್ಯರ್ಥಿ ಗಂಗಮ್ಮ ತಾನು ಚುನಾವಣೆಯಲ್ಲಿ ಸೋತರೆ ಮಾಡಬೇಕಿರುವ ಕೆಲಸಗಳ ಪಟ್ಟಿ ಹೀಗಿದೆ ನೋಡಿ!
ಬೆಂಗಳೂರು: ತುಮಕೂರು ಜಿಲ್ಲೆ ಹೆಬ್ಬೂರು ಗ್ರಾಮಪಂಚಾಯಿತಿ ಕಲ್ಕೆರೆ ಗ್ರಾಮದ ಅಭ್ಯರ್ಥಿಯೊಬ್ಬರು ಮತದಾರರಲ್ಲಿ ಮಾಡಿರುವ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನ ಸೆಳೆದಿದೆ.
ಹೆಬ್ಬೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ದೊಡ್ಡಗುಣಿ ಮತ್ತು ಕಲ್ಕೆರೆ ಮಹಿಳಾ ಅಭ್ಯರ್ಥಿ ಎಚ್.ಗಂಗಮ್ಮ, ಕಲ್ಕೆರೆಯಲ್ಲಿ ಇಬ್ಬರು ಪುರುಷರು ಮತ್ತು ದೊಡ್ಡಗುಣಿಯಲ್ಲಿ ಐವರು ಪುರುಷ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದಾರೆ. ಇವರೆಲ್ಲಾ ಜನರಲ್ ಕ್ಯಟಗರಿ ಅಭ್ಯರ್ಥಿಗಳಾಗಿದ್ದಾರೆ.
ಗೆದ್ದರೆ ತಾವು ಮಾಡುವ ಕೆಲಸಗಳ ಬಗ್ಗೆ ಪಟ್ಟಿ ಮಾಡಿದ್ದಾರೆ, ತಿಮ್ಮರಾಯಸ್ವಾಮಿ ದೇವಾಸ್ಥಾನದ ದೇವಾದಾಯ ಇನಾಮ್ ಜಮೀನನ್ನು ಮೂಲ ಖಾತೆಯಂತೆ ದೇವರ ಹೆಸರಿಗೆ ಖಾತೆ ಮಾಡಿಸುವುದು, ಅರಳಿಕಟ್ಟೆ ಕಟ್ಟಿಸುವುದು, ನಕ್ಷೆಯಂತೆ ರಸ್ತೆ ಮಾಡಿಸುವುದು, ಮಳೆ ನೀರು ಸರಾಗವಾಗಿ ಹರಿಯುವಂತೆ ಚರಂಡಿ ಮಾಡಿಸುವ ಭರವಸೆ ನೀಡಿದ್ದಾರೆ.
ಸೋತರೆ ಮಾಡುವ ಕೆಲಸಗಳು ಇಂತಿವೆ, ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರೇಷನ್ ಕಾರ್ಡ್ ರದ್ದು ಮಾಡುವುದು, ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು ಹಣ ಪಡೆಯುತ್ತಿರುವ 40 ಕುಟುಂಬಗಳ ವೇತನ ಯೋಜನೆ ಹಣ ನಿಲ್ಲಿಸುವುದು, ಸರ್ವೆ ನಂ 86 ರಲ್ಲಿ ಹಳೇ ದಾಖಲೆಯಂತೆ ಸ್ಮಶಾನ ನಿರ್ಮಿಸುವುದು, 11 ಕುಟುಂಬಗಳು ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸುವುದಾಗಿ ಪಟ್ಟಿ ಮಾಡಿದ್ದಾರೆ.
ಗಂಗಮ್ಮ ನೀಡಿರುವ ಭರವಸೆ ನೋಡಿ ಹಲವರು ಆಕೆ ಸೋಲಲಿ ಎಂದು ಬಯಸಿದ್ದಾರೆ, ಸ್ಥಾನಗಳ ಹರಾಜಿನ ಮೂಲಕ ತಮ್ಮನ್ನು ಸರ್ವಾನುಮತದಿಂದ ಚುನಾಯಿಸಲು ಪ್ರಯತ್ನಿಸಿದ ಕೆಲವು ಜನರ ಊಳಿಗಮಾನ್ಯ ಮನಸ್ಥಿತಿಯ ವಿರುದ್ಧ ಗಂಗಮ್ಮ ಸ್ಪರ್ಧೆಯು ಸಾಂಕೇತಿಕವಾಗಿದೆ.
10ನೇ ತರಗತಿ ವ್ಯಾಸಂಗ ಮಾಡಿರುವ ಗಂಗಮ್ಮ ಅವರಿಗೆ ಇಬ್ಬರು ಮಕ್ಕಳಿದ್ದು, ಆಕೆಯ ಪತಿ ಕಲ್ಕೆರೆ ಶ್ರೀನಿವಾಸ್ ಲೋಕಸಭೆ ಚುನಾವಣೆಯಲ್ಲಿ ಮೂರು ಬಾರಿ ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ. ಮೊದಲ ಹಂತದ ಮತದಾನ ಮಂಗಳವಾರ ನಡೆಯಲಿದೆ.


