ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಹಂಚಿಕೆ: ಸಿಎಂ ಯಡಿಯೂರಪ್ಪ ಮುಂದಿನ ಸವಾಲು 

ತಮ್ಮ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಖಾತೆಯನ್ನೇನೋ ಹಂಚಿಕೆ ಮಾಡಿದ್ದಾರೆ. ಆದರೆ ಅಲ್ಲಿಗೇ ಅವರ ಕೆಲಸ ಮುಗಿದಿಲ್ಲ. ಅವರ ಮುಂದಿನ ಸವಾಲು ಯಾವ ಸಚಿವರಿಗೆ ಯಾವ ಜಿಲ್ಲೆಯ ಉಸ್ತುವಾರಿ ನೀಡುವುದು ಎಂದು.
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಹಂಚಿಕೆ: ಸಿಎಂ ಯಡಿಯೂರಪ್ಪ ಮುಂದಿನ ಸವಾಲು 

ಬೆಂಗಳೂರು: ತಮ್ಮ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಖಾತೆಯನ್ನೇನೋ ಹಂಚಿಕೆ ಮಾಡಿದ್ದಾರೆ. ಆದರೆ ಅಲ್ಲಿಗೇ ಅವರ ಕೆಲಸ ಮುಗಿದಿಲ್ಲ. ಅವರ ಮುಂದಿನ ಸವಾಲು ಯಾವ ಸಚಿವರಿಗೆ ಯಾವ ಜಿಲ್ಲೆಯ ಉಸ್ತುವಾರಿ ನೀಡುವುದು ಎಂದು.


ರಾಜ್ಯ ಸಚಿವ ಸಂಪುಟಕ್ಕೆ ಹೊಸದಾಗಿ  10 ಮಂದಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಸಂಪುಟದಲ್ಲಿ ಸಚಿವರ ಸಂಖ್ಯೆ 28ಕ್ಕೇರಿದೆ. ಈ ಮೊದಲು 17 ಸಚಿವರು ಪ್ರಮಾಣವಚನ ಸ್ವೀಕರಿಸಿ ಒಂದು ತಿಂಗಳ ನಂತರ ಯಡಿಯೂರಪ್ಪ ಅವರಿಗೆಲ್ಲಾ ಜಿಲ್ಲಾ ಉಸ್ತುವಾರಿ ಸ್ಥಾನ ಹಂಚಿಕೆ ಮಾಡಿದ್ದರು. ಕೆಲವು ಸಚಿವರುಗಳಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿತ್ತು.


ಇವರಲ್ಲಿ ಹಲವರು ಕೆಲವು ನಿರ್ದಿಷ್ಟ ಜಿಲ್ಲೆಗಳ ಉಸ್ತುವಾರಿಗಳನ್ನು ಕೇಳಿದ್ದರೂ ಸಿಕ್ಕಿರಲಿಲ್ಲ. ಆಗ ಸ್ವತಃ ಮುಖ್ಯಮಂತ್ರಿಗಳೇ ಅವರನ್ನೆಲ್ಲಾ ಸಮಾಧಾನಗೊಳಿಸಿದ್ದರು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಶಾಸಕರಾಗಿರುವ ಆರೋಗ್ಯ ಸಚಿವ ಬಿ ಶ್ರೀರಾಮುಲು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಕೇಳಿದ್ದರು. ಆದರೆ ಸಿಎಂ ಕೊಟ್ಟಿರಲಿಲ್ಲ. ವಿಜಯನಗರ ಕ್ಷೇತ್ರದ ಶಾಸಕ ನೂತನ ಸಚಿವ ಆನಂದ್ ಸಿಂಗ್ ಕೂಡ ಬಳ್ಳಾರಿ ಮೇಲೆ ಕಣ್ಣು ಹಾಕಿದ್ದಾರೆ.


ಬಳ್ಳಾರಿಯನ್ನು ವಿಭಜಿಸಿ ಪ್ರತ್ಯೇಕ ಜಿಲ್ಲೆ ಮಾಡಿ ಎಂಬ ಒತ್ತಾಯ ಕೂಡ ಕೇಳಿಬಂದಿತ್ತು. ಆದರೆ ಸಿಎಂ ಯಡಿಯೂರಪ್ಪ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಇದರರ್ಥ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಒಬ್ಬ ಸಚಿವರಿಗೆ ನೀಡಲಾಗುತ್ತಿದ್ದು ಅದು ಆನಂದ್ ಸಿಂಗ್ ಅವರಿಗೆ ಸಿಗುವ ಸಾಧ್ಯತೆಯಿದೆ.


ಇನ್ನು ಹಾವೇರಿ ಜಿಲ್ಲೆಯವರಾದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಇದೀಗ ಅದೇ ಜಿಲ್ಲೆಯವರಾದ ಬಿ ಸಿ ಪಾಟೀಲ್ ಸಚಿವರಾಗಿದ್ದಾರೆ. ಬಿ ಸಿ ಪಾಟೀಲ್ ಕೂಡ ಹಾವೇರಿ ಜಿಲ್ಲಾ ಉಸ್ತುವಾರಿ ಕೊಡಿ ಎಂದು ಕೇಳುವ ಸಾಧ್ಯತೆಯಿದೆ. ಬೆಳಗಾವಿ ಜಿಲ್ಲೆಯ ಉಸ್ತುವಾರಿಯನ್ನು ಜಗದೀಶ್ ಶೆಟ್ಟರ್ ವಹಿಸಿಕೊಂಡಿದ್ದು ಜಿಲ್ಲೆಯಿಂದ ಈಗ ನಾಲ್ವರು ಸಚಿವರಾಗಿದ್ದಾರೆ. ಸಮತೋಲನ ಕಾಪಾಡಲು ಸಚಿವರುಗಳು ಬೇರೆ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವಂತೆ ಯಡಿಯೂರಪ್ಪನವರು ಹೇಳುವ ಸಾಧ್ಯತೆಯಿದೆ. ಆದರೆ ಈ ಜಿಲ್ಲಾ ಉಸ್ತುವಾರಿ ಸಚಿವ ಹೊಣೆ ಹಂಚಿಕೆ ಮಾಡುವುದು ಸವಾಲಿನ ಕೆಲಸ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com