ಮೇಲ್ಮನೆಯಲ್ಲಿ ಅನರ್ಹರ 'ಸದ್ದು'
ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಅನರ್ಹರೆಂದು ಕರೆಸಿಕೊಂಡ ಬಳಿಕ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಚುನಾವಣೆಯಲ್ಲಿ ಗೆದ್ದು ಯಡಿಯೂರಪ್ಪ ಸಂಪುಟ ಸೇರಿದರೂ ಅನರ್ಹರು ಎಂಬ ಪದ ಈ ಶಾಸಕರನ್ನು ಬಿಡುತ್ತಿಲ್ಲ.
ಇಷ್ಟುನಗಳ ಕಾಲ ವಿಪಕ್ಷಗಳ ಟೀಕೆಗೆ ಸದಾ ಗುರಿಯಾಗುತ್ತಿದ್ದ ಅನರ್ಹ ಪದ ಇದೀಗ ಸದನದಲ್ಲಿಯೂ ಸದ್ದು ಮಾಡಿ ಗದ್ದಲ ಎಬ್ಬಿಸಲಾರಂಭಿಸಿದೆ.ಮೇಲ್ಮನೆಯಲ್ಲಿ ಬುಧವಾರ ಅನರ್ಹರು, ಅನರ್ಹರ ಸರ್ಕಾರ ಎಂಬ ಮಾತು ಆಡಳಿತ- ಪ್ರತಿಪಕ್ಷಗಳ ನಡುವೆ ಭಾರೀ ಗದ್ದಲಕ್ಕೆ ಕಾರಣವಾಯಿತು.
ಕಾನೂನು ಸುವ್ಯವಸ್ಥೆ ನಿಲುವಳಿ ಸೂಚನೆ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್‌ನ ಆರ್ ಬಿ ತಿಮ್ಮಾಪುರ ಮಾತನಾಡಿ, ರಾಜ್ಯದಲ್ಲಿ ಗೋಲಿಬಾರ್ ಮಾಡಿದ ಯಾವ ಸರ್ಕಾರವೂ ಉಳಿದಿಲ್ಲ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಐವಾನ್ ಡಿಸೋಜಾ, ಈಗಿನ ಸರ್ಕಾರ ಸಹ ಉಳಿಯುವುದಿಲ್ಲ. ಈಗಾಗಲೇ ಕೆಲವರು ಯಡಿಯೂರಪ್ಪ ವಿರುದ್ಧ ಸಭೆ ಸೇರಿದ್ದಾರೆ ಎಂದರು.
ಡಿಸೋಜಾ ಮಾತಿಗೆ ಧ್ವನಿಗೂಡಿಸಿದ ನಾರಾಯಣ್ ಸ್ವಾಮಿ, ಹೌದೌದು, ಈ ಸರ್ಕಾರ ಹೆಚ್ಚು ದಿನ ಇರುವುದಿಲ್ಲ. ಇದು ಅನರ್ಹ ಸರ್ಕಾರ, ಅನರ್ಹರ ಸರ್ಕಾರ. ಹದಿನೇಳು ಅನರ್ಹರು ಬಿಜೆಪಿಗೆ ಹೋಗಿದ್ದಕ್ಕಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಕುಟುಕಿದರು.
ಸದನದಲ್ಲಿ ಅನರ್ಹ ಪದ ಪ್ರಯೋಗವಾಗುತ್ತಲೇ ಸಿಡಿಮಿಡಿಗೊಂಡ ಸಚಿವರಾದ ಬಿ.ಸಿಪಾಟೀಲ್ ಮತ್ತು ಎಸ್. ಟಿ ಸೋಮಶೇಖರ್ ಏರುಧ್ವನಿಯಲ್ಲಿ ವಿರೋಧ ತೋರಲಾರಂಭಿಸಿದರು.
"ನಾವು ಉಪಚುನಾವಣೆಯಲ್ಲಿ ಗೆದ್ದು ಬಂದಿದ್ದೇವೆ. ನಮ್ಮ ಸರ್ಕಾರ ಸುಭದ್ರವಾಗಿದೆ. ನಮ್ಮನ್ನು ಅನರ್ಹರು ಎನ್ನಲು ನಿಮಗೆ ಮಾನ ಮರ್ಯಾದೆ ಇಲ್ಲವೇ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿ ಗೆದ್ದು ಬಂದಿದ್ದೇವೆ" ಎಂದು ಸಚಿವ ಸೋಮಶೇಖರ್ ಸ್ಪಷ್ಟೀಕರಣ ನೀಡುತ್ತಿದ್ದಂತೆಯೇ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಈ ವೇಳೆ ಕಾಂಗ್ರೆಸ್ ನ ಪಿ.ಆರ್.ರಮೇಶ್ , ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ 17 ಜನರನ್ನು ವೈರಸ್ ಎಂದಿದ್ದಾರೆ ಎನ್ನುತ್ತಿದ್ದಂತೆಯೇ ರಮೇಶ್ ಮಾತಿಗೆ ಮತ್ತೆ ಗದ್ದಲ ಗಲಾಟೆ ಉಂಟಾಯಿತು.
ಆಗ ಸಚಿವ ಸೋಮಶೇಖರ್ ಮಾತನಾಡಿ, ನಾವು ವೈರಸ್ ಆಗಲಿ, ಏನೇ ಆಗಲಿ ನಿಮಗೇಕೆ? ನೀವು ಸುಮ್ಮನಿರಿ ಎಂದು ಕಾಂಗ್ರೆಸ್ ಸದಸ್ಯರ ವಿರುದ್ಧ ಹರಿಹಾಯ್ದರು. ಆಗ ಮತ್ತೆ ಸದನದಲ್ಲಿ ಕೋಲಾಹಲ ಆರಂಭವಾಯಿತು.
ಕಾಂಗ್ರೆಸ್ ನ ನಾರಾಯಣಸ್ವಾಮಿ ಮತ್ತೆ ಮಾತನಾಡಿ, ನಾವು ನಿಮ್ಮ ಸ್ನೇಹಿತರು ಎಂದು ಕುಟುಕಿದಾಗ ಎಸ್.ಟಿ. ಸೋಮಶೇಖರ್ ಕೋಪ ಮತ್ತೆ ಹೆಚ್ವಾಯಿತು. ಆಗ ನೀವು ಸ್ನೇಹಿತರಲ್ಲ, ನಮ್ಮ ದುಷ್ಮನ್ ಗಳು ಎಂದು ಕಿಡಿಕಾರಿದರು.
ಸೋಮಶೇಖರ್ ಗೆ ಜೊತೆಯಾದ ಬಿ.ಸಿ.ಪಾಟೀಲ್, ನಿಮ್ಮ ಸಹವಾಸವೇ ಬೇಡ ಎಂದೇ ನಿಮ್ಮನ್ನು ಬಿಟ್ಟು ಬಂದಿದ್ದೇವೆ ಎಂದಾಗ ಸದನದಲ್ಲಿ ಮತ್ತೆ ಗದ್ದಲ ಗಲಾಟೆ ಉಂಟಾಯಿತು.
ಮಧ್ಯೆ ಪ್ರವೇಶ ಮಾಡಿದ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ, ಕಡತದಿಂದ ತೆಗೆದುಹಾಕುವಂತೆ ಸೂಚಿಸಿದರು. ಸಭಾಪತಿಗಳ ಮಾತಿನಿಂದ ಎರಡೂ ಕಡೆಯ ಸದಸ್ಯರು ಸುಮ್ಮನಾದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ