ಕೇಂದ್ರದಿಂದ ರಾಜ್ಯದ ತೆರಿಗೆ ಪಾಲು ಕಡಿತ: ವಿಧಾನಸಭೆಯಲ್ಲಿ ಸಿದ್ದರಾಮಯ್ಯ ವಾಗ್ದಾಳಿ

ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ನೀಡಬೇಕಾಗಿರುವ ತೆರಿಗೆ ಪಾಲು ಕಡಿಮೆಯಾಗುತ್ತಿದ್ದು, 2019-20ನೇ ಸಾಲಿನಲ್ಲಿ 17 ಸಾವಿರ ಕೋಟಿ ರೂ. ಕೊರತೆಯಾಗಲಿದೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು: ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ನೀಡಬೇಕಾಗಿರುವ ತೆರಿಗೆ ಪಾಲು ಕಡಿಮೆಯಾಗುತ್ತಿದ್ದು, 2019-20ನೇ ಸಾಲಿನಲ್ಲಿ 17 ಸಾವಿರ ಕೋಟಿ ರೂ. ಕೊರತೆಯಾಗಲಿದೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ. ಇದರ ವಿರುದ್ಧ ರಾಜಕೀಯ ಹೋರಾಟ ಮಾಡಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಹೇಳಿದ್ದಾರೆ.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರವಾಹ ಬಂದಾಗ ಕೇಂದ್ರ ಸರ್ಕಾರದಿಂದ ಒಟ್ಟು 1869 ಕೋಟಿ ರೂ.ಮಂಜೂರಾಗಿತ್ತು.  ಆದರೆ ಇದುವರೆಗೆ 1652 ಕೋಟಿ ರೂ.ಮಾತ್ರ ಬಿಡುಗಡೆಯಾಗಿದೆ. ಇಷ್ಟು ಪರಿಹಾರ ಸಾಕಾ ?  ಇದರಲ್ಲೇ ನೀವು ಸಂತೋಷವಾಗಿದ್ದೀರಾ . 25 ಮಂದಿ ಬಿಜೆಪಿ ಸಂಸದರನ್ನು ರಾಜ್ಯದ ಜನ  ಗೆಲ್ಲಿಸಿದ್ದಾರೆ. ಒಂದು ದಿನವಾದರೂ ಕೂಡ ಈ ಎಲ್ಲಾ ಬಿಜೆಪಿ 25 ಸಂಸದರು ಒಟ್ಟಾಗಿ  ಪ್ರಧಾನಿಯವರನ್ನು ಭೇಟಿಯಾಗಿ ಪರಿಹಾರಕ್ಕೆ ಒತ್ತಾಯಿಸಿದ್ದೀರಾ ? ಇದು ರಾಜ್ಯಕ್ಕೆ  ಅನ್ಯಾಯವಲ್ಲವೇ? ಎಂದು ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದರು.

ಇಡೀ  ದೇಶದಲ್ಲಿ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಕ್ರಮವಾಗಿ ಮೊದಲ  ಮೂರು ಸ್ಥಾನಗಳಲ್ಲಿದೆ. ಆದರೂ ನಮ್ಮ ಪಾಲು ಕೊಡುವಲ್ಲಿ ಅನ್ಯಾಯ ಮಾಡಲಾಗುತ್ತಿದೆ.  ಇದನ್ನು ನಾನು ವಿರೋಧ ಪಕ್ಷದ ನಾಯಕನಾಗಿ ಹೇಳುತ್ತಿಲ್ಲ. ನಮಗೆ ಕೊಟ್ಟಿರುವ ಪಾಲು ಬಹಳ  ಕಡಿಮೆ. ಇದರ ಬಗ್ಗೆ  ಬಿಜೆಪಿ ರಾಜಕೀಯ ಹೋರಾಟ ಮಾಡಿಲ್ಲ ಎಂದು ಟೀಕಿಸಿದರು.

ಕೇಂದ್ರದಿಂದ  ನಿಮಗೆ ಬರಬೇಕಿರುವ ತೆರಿಗೆ ಪಾಲಿನಲ್ಲಿ 17,600 ಕೋಟಿ ರೂ.ಖೋತಾ ಆಗಿದೆ.  ಮುಖ್ಯಮಂತ್ರಿಯವರು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಲ್ಪಸಂಖ್ಯಾತ ನಿಯೋಗದೊಂದಿಗೆ  ಮಾತನಾಡುವಾಗ ಈ ಬಾರಿ 30 ಸಾವಿರ ಕೋಟಿ ರೂ. ತೆರಿಗೆ ಪಾಲು ಕಡಿಮೆಯಾಗಲಿದೆ ಎಂದು  ಹೇಳಿದ್ದಾರೆ ಎಂದು ನಿಯೋಗದಲ್ಲಿದ್ದವರು ತಮಗೆ ತಿಳಿಸಿದ್ದಾರೆ. 

ನಮ್ಮ  ಜಿಎಸ್‌ಟಿ ಪಾಲು 39,000 ಕೋಟಿ ರೂ. ನಿರೀಕ್ಷೆ ಇತ್ತು. ಆದರೆ ಬಂದಿರುವುದು 30 ಸಾವಿರ  ಕೋಟಿ ರೂ.ಮಾತ್ರ. ಇದರಿಂದ 9 ಸಾವಿರ ಕೋಟಿ ನಷ್ಟವಾಗಿದೆ. ಇದು ರಾಜ್ಯಕ್ಕೆ ಆಗಿರುವ  ಅನ್ಯಾಯವಲ್ಲವೇ  ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, 2019-20ನೇ ಸಾಲಿನಲ್ಲಿ ಕೇಂದ್ರ  ನೀಡಲೇಬೇಕಾಗಿದ್ದ ಮೊತ್ತದಲ್ಲಿ  17 ಸಾವಿರ ಕೋಟಿ ಕೊರತೆಯಾಗಲಿದೆ ಎಂದು ಪತ್ರಿಕೆಯೊಂದು  ವರದಿ ಮಾಡಿದೆ. ಒಂದು ವರ್ಷದಲ್ಲಿ 11, 215 ಕೋಟಿ ರೂ. ಕಡಿಮೆಯಾದರೆ ಐದು ವರ್ಷಗಳಲ್ಲಿ  60 ಸಾವಿರ ಕೋಟಿ ರೂ. ಕಡಿಮೆಯಾಗಲಿದೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ?  ಇದು ಸಣ್ಣ ಮೊತ್ತವೇ ?. ಪ್ರತಿ ವರ್ಷ ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ. ಹಾಗಾಗಿ ನಮ್ಮ  ಪಾಲು ಹೆಚ್ಚಾಗಬೇಕು. ಆದರೆ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.

ಈ ಬಗ್ಗೆ  ನಮ್ಮ ಶಾಸಕರು ಅರ್ಥಮಾಡಿಕೊಂಡು ಇದರ ವಿರುದ್ಧ ಧ್ವನಿ ಎತ್ತಬೇಕು. ನಾವು ಕೇಂದ್ರಕ್ಕೆ  ಒಂದು ರೂಪಾಯಿ ಕೊಟ್ಟರೆ 45 ಪೈಸೆ ವಾಪಾಸ್ ಬರುತ್ತದೆ. ಅದೇ ಉತ್ತರ ಪ್ರದೇಶದವರು ಒಂದು  ರೂಪಾಯಿ ಕೊಟ್ಟರೆ ಅವರಿಗೆ 235 ಪೈಸೆ, ಗುಜರಾತ್‌ ಮತ್ತು ಬಿಹಾರಕ್ಕೆ  200 ಚಿಲ್ಲರೆ  ರೂಪಾಯಿ ವಾಪಾಸ್ ಬರುತ್ತದೆ. ನಮಗೆ ಮಾತ್ರ 45 ಪೈಸೆ ಬರುತ್ತಿದೆ. ಇದು ರಾಜ್ಯಕ್ಕೆ  ಅನ್ಯಾಯವಲ್ಲವೇ ? ಇದರ ವಿರುದ್ಧ 
ನಾವು ರಾಜಕೀಯವಾಗಿ ಹೋರಾಡಿಲ್ಲ.  

ಗುಜರಾತ್ ಅಭಿವೃದ್ಧಿ ಹೊಂದಿದ ರಾಜ್ಯವಾಗಿದ್ದರೂ 200ಕ್ಕೂ ಪೈಸೆ ಏಕೆ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದ ಅವರು, ಅಲ್ಲಿ ತೆರಿಗೆ ಸಂಗ್ರಹ ಸರಿಯಾಗಿ ಆಗುತ್ತಿಲ್ಲ ಎಂಬ ಸಮರ್ಥನೆ  ನೀಡಲಾಗುತ್ತಿದೆ, ಆದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಸಮರ್ಪಕವಾಗಿ ತೆರಿಗೆ ಸಂಗ್ರಹ ಮಾಡಬೇಕಿತ್ತು. ಜಿಎಸ್‌ಟಿ, ನೋಟು ಅಮಾನ್ಯೀಕರಣದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com