ಪಾಕ್ ಪರ ಘೋಷಣೆಗೆ ಕಾಂಗ್ರೆಸ್ ತೀವ್ರ ಖಂಡನೆ: ದೇಶಭಕ್ತಿ ಕುರಿತು ಸಿದ್ದರಾಮಯ್ಯ, ಉಗ್ರಪ್ಪ ಹೇಳಿದ್ದೀಗೆ?
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಪಾಕ್ ಪರ ಘೋಷಣೆಗಳು ಜಾಸ್ತಿಯಾಗುತ್ತಿದ್ದು ಇದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಎಸ್ ಉಗ್ರಪ್ಪ ಮತ್ತು ಎಂಬಿ ಪಾಟೀಲ್ ದೇಶಪ್ರೇಮದ ಮಾತುಗಳನ್ನಾಡಿದ್ದಾರೆ.
ದೇಶದ್ರೋಹವನ್ನು ಅತ್ಯಂತ ಗಂಭೀರವಾಗಿ ಸರ್ಕಾರ ಪರಿಗಣಿಸಬೇಕು: ಸಿದ್ದರಾಮಯ್ಯ
ದೇಶದ್ರೋಹ ಅತ್ಯಂತ ಗಂಭೀರವಾಗಿ ಸರ್ಕಾರ ಪರಿಗಣಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ದೇಶದ ವಿರುದ್ಧ ಹೇಳಿಕೆಯಾಗಲೀ ಪಾಕ್ ಪರ ಹೇಳಿಕೆಯಾಗಲೀ ಯಾರೂ ಕೊಡಬಾರದು. ಇಂತಹ ಹೇಳಿಕೆಯನ್ನು ಯಾರೇ ಕೊಟ್ಟರೂ ಅವರನ್ನು ಗಡಿಪಾರು ಮಾಡಬೇಕು. ಕ್ರೂರ ಶಿಕ್ಷೆ ವಿಧಿಸಬೇಕು. ಇದರ ಹಿಂದೆ ಯಾವುದಾದರೂ ಸಂಘಟನೆಗಳಿವೆಯೇ ಎಂಬುದನ್ನು ಗೃಹ ಇಲಾಖೆ ಪತ್ತೆ ಹಚ್ಚಬೇಕು. ಅಮೂಲ್ಯ ಹಿನ್ನೆಲೆ ಬಗ್ಗೆ ತಮಗೆ ಸರಿಯಾಗಿ ಗೊತ್ತಿಲ್ಲ. ಮಾಹಿತಿ ಪಡೆಯುತ್ತಿರುವುದಾಗಿ ಹೇಳಿದರು. ದೇಶದ ವಿಚಾರದಲ್ಲಿ ಒಗ್ಗಟ್ಟು ಇರಬೇಕು.ಒಗ್ಗಟ್ಟು ಒಡೆಯುವ ಕೆಲಸ ಆಗಬಾರದು. ತಾವು ಅಮಾಯಕರು ಎಂದದ್ದು ಮಂಗಳೂರು ಗೋಲಿಬಾರ್ ಕೇಸ್ ನಲ್ಲಿ ಮೃತರಾದರು ಮತ್ತು ಜೈಲಿಗೆ ಸೇರಿದವರ ಬಗ್ಗೆ. ಅದನ್ನು ಕೋರ್ಟ್ ಸಹ ಹೇಳಿದೆ. ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಸರ್ಕಾರ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ ಎಂದು ಸಿದ್ದರಾಮಯ್ಯ ಹೇಳಿದರು.
ಪಾಕಿಸ್ತಾನದ ಮೇಲೆ ಪ್ರೀತಿ ಇದ್ದವರು ಅಲ್ಲಿಗೆ ಹೋಗಲಿ: ಎಂ ಬಿ ಪಾಟೀಲ್
ಪಾಕಿಸ್ತಾನದ ಮೇಲೆ ಪ್ರೀತಿ ಇದ್ದವರು ಪಾಕಿಸ್ತಾನಕ್ಕೆ ಹೋಗಲಿ. ಅದೊಂದು ದರಿದ್ರ ರಾಷ್ಟ್ರ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಅಮೂಲ್ಯ ಲಿಯಾನ್ ಪಾಕಿಸ್ತಾನ ಜಿಂದಾಬಾದ್ ಹೇಳಿಕೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪಾಕಿಸ್ತಾನ ಒಂದು ದರಿದ್ರ ರಾಷ್ಟ್ರ. ಅದರ ಜೊತೆ ಏಕೆ ಹೋಲಿಕೆ ಮಾಡಿಕೊಳ್ಳಬೇಕು? ಅಮೂಲ್ಯಳಿಗೆ ಸಣ್ಣ ವಯಸ್ಸಿರಬೇಕು. ಇಂತವರು ಘೋಷಣೆ ಕೂಗುತ್ತಾರೆ ಎಂದರೆ ಇದರ ಹಿಂದೆ ಯಾರಿದ್ದಾರೆ ನೋಡಬೇಕಿದೆ?. ಇದರ ಹಿನ್ನೆಲೆಯಲ್ಲಿ ಯಾರು ಕೆಲಸ ಮಾಡಿದ್ದಾರೆ ಎನ್ನುವುದನ್ನು ತನಿಖೆ ಮಾಡಬೇಕು. ಕೆಲವು ಹೈದ್ರಾಬಾದ್ ಮೂಲದ ನಾಯಕರೂ ಇಲ್ಲಿದ್ದರು. ಅದರ ಬಗ್ಗೆಯೂ ಗೃಹ ಇಲಾಖೆ ಗಮನ ಹರಿಸಿ ತನಿಖೆ ಮಾಡಬೇಕಿದೆ ಎಂದರು.
ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಅಂಡಮಾನ್ ಜೈಲಿಗೆ ಕಳುಹಿಸಿ: ವಿ ಎಸ್ ಉಗ್ರಪ್ಪ
ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನ ಪರ ಘೋಷಣೆ ಕೂಗಿರುವವರನ್ನು ಅಂಡಮಾನ್ ಸೆಲ್ಯುಲಾರ್ ಜೈಲಿಗೆ ಕಳುಹಿಸಿ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಬಗ್ಗೆ ನಮ್ಗೆ ಹೆಮ್ಮೆ ಇರಬೇಕು. ಯಾವುದೇ ವ್ಯಕ್ತಿ ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನ ಪರ ಜೈಕಾರ ಹಾಕಿರುವುದು ಅಕ್ಷಮ್ಯ ಅಪರಾಧ. ಯಾವುದೇ ಭಾರತೀಯರು ಇದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಆಕೆ ಮಾತನಾಡುವ ಧಾಟಿ ನೋಡಿದರೆ ಯೋಚನೆ ಮಾಡಿಯೇ ಮಾತನಾಡಿದಂತಿದೆ. ಹುಬ್ಬಳ್ಳಿಯಲ್ಲಿ ನಡೆದ ಘಟನೆ ಹಾಗೂ ಬೆಂಗಳೂರಿನಲ್ಲಿ ನಡೆದ ಘಟನೆಗಳನ್ನು ಕಾಂಗ್ರೆಸ್ ಖಂಡಿಸುತ್ತದೆ. ಪೊಲೀಸರು ತಕ್ಷಣ ಸ್ಪಂದಿಸಿ ಆಕೆಯನ್ನು ದಸ್ತಗಿರಿ ಮಾಡಿ, ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರು ಪಡೆದಿರುವುದು ಸ್ವಾಗತಾರ್ಹ. ಈ ರೀತಿಯ ವ್ಯಕ್ತಿಯನ್ನು ಅಂಡಮಾನ್ ಜೈಲಿನಲ್ಲಿ ಇಡುವುದು ಸೂಕ್ತ. ಆಕೆಯ ವಿರುದ್ಧ ಜೀವನ ಪರ್ಯಂತ ಜೈಲಿನಲ್ಲಿ ಉಳಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ