ಜಮೀರ್ ಅಹ್ಮದ್ ಖಾನ್
ಜಮೀರ್ ಅಹ್ಮದ್ ಖಾನ್

ನಾವಿರೋದು ಭಾರತದಲ್ಲಿ, ಪಾಕಿಸ್ತಾನವನ್ನೇಕೆ ಕೇಳಬೇಕು: ಮೋದಿ ವಿರುದ್ಧ ಜಮೀರ್ ಟಾಂಗ್

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಖಂಡಿಸಿ ಮಾಜಿ ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು
Published on

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಖಂಡಿಸಿ ಮಾಜಿ ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು.

ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಮುಖಂಡರು ಭಾಗಿಯಾಗಿ, ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪೌರತ್ವ ಕಾಯ್ದೆಯನ್ನು ಮೊದಲು ವಾಪಸ್ ಪಡೆಯಿರಿ. ನಾವು ಇರುವುದು ಹಿಂದೂಸ್ತಾನದಲ್ಲಿ. ನಾವು ನಮ್ಮ ಪೌರತ್ವವನ್ನ ರುಜುವಾತು ಪಡಿಸಬೇಕಿಲ್ಲ. ನಮ್ಮ ತಾತ, ಮುತ್ತಾತ ಎಲ್ಲರೂ ಇಲ್ಲಿಯೇ ಹುಟ್ಟಿದವರು. ಕಾಯ್ದೆಯ ಹೆಸರಿನಲ್ಲಿ ಧರ್ಮ ಎತ್ತಿಕಟ್ಟೋಕೆ ನಾವು ಬಿಡಲ್ಲ. ಇವತ್ತು ಇಡೀ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ವಿವಿಗಳಲ್ಲೂ ವಿದ್ಯಾರ್ಥಿಗಳು ಧರಣಿ ನಡೆಸ್ತಿದ್ದಾರೆ ಎಂದು ಹೇಳಿದರು.

ಈ ಕಾಯ್ದೆ ವಿರುದ್ಧ ಎಲ್ಲಾ ಕಡೆಯೂ ಹೋರಾಟ ನಡೆಯುತ್ತಿದೆ. ಬಿಜೆಪಿ ಆಡಳಿತವಿರುವ ಕಡೆಯೂ ವಿರೋಧ ವ್ಯಕ್ತವಾಗಿದೆ. ಕಾಯ್ದೆ ಜಾರಿಗೆ ಅವಕಾಶವಿಲ್ಲವೆಂದು ಹೇಳಿದ್ದಾರೆ. ನಿತೀಶ್ ಕುಮಾರ್ ಜಾರಿ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಒಡಿಶಾದಲ್ಲೂ ಕಾಂಗ್ರೆಸ್‍ಯೇತರ ಸರ್ಕಾರವಿದ್ದು ಅಲ್ಲಿಯೂ ಕಾಯ್ದೆಗೆ ವಿರೋಧವಿದೆ. ಸಿದ್ದಗಂಗಾ ಮಠಕ್ಕೆ ಪ್ರಧಾನಿ ಭೇಟಿ ನೀಡಿದ್ದರು, ಮಕ್ಕಳ ಮುಂದೆ ರಾಜಕೀಯ ಹೇಳಿಕೆ ಕೊಟ್ಟಿದ್ದಾರೆ. ಪಾಕಿಸ್ತಾನದ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಚಿಕ್ಕ ಮಕ್ಕಳ ಮೇಲೆ ಇದೆಂಥ ಪರಿಣಾಮ ಬೀರಬಹುದು? ಪ್ರಧಾನಿಯವರಿಗೆ ಎಲ್ಲಿ ಹೇಗೆ ಮಾತನಾಡಬೇಕೆಂದು ಗೊತ್ತಿಲ್ಲ ಎಂದು ಮೋದಿ ವಿರುದ್ಧ ಕಿಡಿಕಾರಿದರು.

ಅಂಬೇಡ್ಕರ್ ಬರೆದಿರುವ ಸಂವಿಧಾನ ನಮ್ಮದು, ಅದರಲ್ಲಿ ಸೆಕ್ಯೂಲರ್ ತತ್ವಕ್ಕೆ ಒತ್ತು ಕೊಟ್ಟಿದ್ದಾರೆ. ಸಂವಿಧಾನಕ್ಕಾದರೂ ಬೆಲೆ ಕೊಡಬೇಕಲ್ಲವೆ? ಅಂಬೇಡ್ಕರ್ ಸಂವಿಧಾನವನ್ನೇ ವಿರೋಧಿಸುವ ಮನಸ್ಸು ನಿಮ್ಮದು. ಬಿಹಾರ, ಒರಿಸ್ಸಾದಲ್ಲೇ ಕಾಯ್ದೆ ತರಲ್ಲ ಎಂದು ಹೇಳಿದ್ದಾರೆ. ಅದರೂ ಪ್ರಧಾನಿಯವರೇ ಕಾಯ್ದೆ ತರುತ್ತೇನೆ ಅನ್ನೋದು ಸರಿಯೇ. ಹುಟ್ಟಿದ ದಾಖಲೆ ಕೊಡಿ ಅಂದರೆ ಎಲ್ಲಿ ತರೋದು. ನನ್ನದೇ ಹುಟ್ಟಿದ ದಾಖಲೆ ಇರಲಿಲ್ಲ. ಮೊದಲು ಮೋದಿಯವರದ್ದು ದಾಖಲೆ ಇದೆಯೇ ಎಂದು ಕೇಳಬೇಕು, ಅವರ ಅಪ್ಪನದು ಆ ನಂತರ ನೋಡೋಣ ಎಂದು ಗುಡುಗಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com