ನಿರಾಣಿ-ಸವದಿ, ಯಾರಿಗೆ ಸಿಗಲಿದೆ ಮಂತ್ರಿಭಾಗ್ಯ; ಸಮುದಾಯಗಳ ಪರ ನಿಂತ ಸ್ವಾಮೀಜಿಗಳು!

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿದೇಶಿ ಪ್ರವಾಸಕ್ಕೆ ತೆರಳುವ ಮುನ್ನವೇ ಸಂಪುಟ ವಿಸ್ತರಣೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಸಂಪುಟ ಸೇರ್ಪಡೆಗೆ ಆಕಾಂಕ್ಷಿಗಳ ಒತ್ತಡ ಇನ್ನಿಲ್ಲದಂತೆ ಹೆಚ್ಚಿದೆ.
ಸಿದ್ದುಸವದಿ- ಮುರುಗೇಶ್ ನಿರಾಣಿ
ಸಿದ್ದುಸವದಿ- ಮುರುಗೇಶ್ ನಿರಾಣಿ

ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿದೇಶಿ ಪ್ರವಾಸಕ್ಕೆ ತೆರಳುವ ಮುನ್ನವೇ ಸಂಪುಟ ವಿಸ್ತರಣೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಸಂಪುಟ ಸೇರ್ಪಡೆಗೆ ಆಕಾಂಕ್ಷಿಗಳ ಒತ್ತಡ ಇನ್ನಿಲ್ಲದಂತೆ ಹೆಚ್ಚಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೇ ಸಂಪುಟ ಸೇರ್ಪಡೆಗೆ ಹಲವರು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದಾರೆ. ಮೊದಲ ಹಂತದ ಸಂಪುಟ ರಚನೆ ವೇಳೆ ಕೆಲವರು ಸಂಪುಟದಲ್ಲಿ ಸ್ಥಾನ ಗಿಟ್ಟಿಸಿರುವ ನೆಮ್ಮದಿಯಲ್ಲಿದ್ದಾರೆ. 

ಬಿಎಸ್‌ವೈ ಅವರ ಬಹುತೇಕ ಆಪ್ತರು ಸಂಪುಟದಿಂದ ಹೊರಗಿದ್ದಾರೆ. ಅವರೆಲ್ಲ ಶತಾಯ,ಗತಾಯ ಸಂಪುಟ ಸೇರ್ಪಡೆ ಸರ್ಕಸ್ ನಡೆಸಿದ್ದಾರೆ.

ಪ್ರಸಕ್ತ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಉಪ ಚುನಾವಣೆಯಲ್ಲಿ ಗೆದ್ದು ಬಂದವರಿಗೆ ಮೊದಲ ಆದ್ಯತೆ ಸಿಗಲಿದೆ ಎನ್ನುವುದು ಸ್ಪಷ್ಟವಾಗಿರುವ ಮಧ್ಯೆಯೇ ಬಿಎಸ್‌ವೈ ಆಪ್ತರು ಬಹಿರಂಗವಾಗಿ ಪೈಪೋಟಿಗೆ ಇಳಿಯದೇ ತೆರೆಮರೆಯಲ್ಲಿ ಒತ್ತಡ ಹಾಕುವ ತಂತ್ರಕ್ಕೆ ಮುಂದಾಗಿದ್ದಾರೆ.

ರಾಜ್ಯದಲ್ಲಿನ ಬಲಾಢ್ಯ ಸಮುದಾಯಗಳ ಸ್ವಾಮೀಜಿಗಳು ತಮ್ಮ ಸಮುದಾಯದ ಜನಪ್ರತಿನಿಧಿಗಳಿಗೆ ಆದ್ಯತೆ ನೀಡಲೇ ಬೇಕು ಎಂದು ಬಹಿರಂಗವಾಗಿಯೇ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. 

ಲಿಂಗಾಯತ ಸಮುದಾಯದ ಹರಿಹರ ಮತ್ತು ಕೂಡಲ ಸಂಗಮ ಪೀಠದ ಸ್ವಾಮೀಜಿಗಳು ಪಂಚಮಸಾಲಿ ಸಮುದಾಯಕ್ಕೆ ಕನಿಷ್ಠ ೨-೩ ಸ್ಥಾನಗಳನ್ನು ಕೊಡಲೇ ಬೇಕು ಎಂದು ಹಠ ಹಿಡಿದಿದ್ದಾರೆ.

ರಾಜ್ಯದ ಮತ್ತೊಂದು ಪ್ರಬಲ ಸಮುದಾಯ ವಾಲ್ಮೀಕಿ ಸಮುದಾಯ. ಈ ಸಮುದಾಯದ ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರಂತೂ ಸಂಪುಟದಲ್ಲಿ ತಮ್ಮ ಸಮುದಾಯ ತಮ್ಮ ಸಮುದಾಯದ ಸಂಪುಟದಲ್ಲಿ ಇನ್ನಷ್ಟು ಆದ್ಯತೆ ಜತೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ. 

ಹೀಗೆ ಆಯಾ ಸಮುದಾಯದ ಮುಖಂಡರುಗಳು ತಮ್ಮ ಸಮುದಾಯದ ಸ್ವಾಮೀಜಿಗಳ ಮೂಲಕ ಸಿಎಂ ಮೇಲೆ ಸತತ ಒತ್ತಡ ಹಾಕುವ ಕೆಲಸ ಮಾಡುತ್ತಿರುವುದು ಬಹಿರಂಗ ಸತ್ಯವಾಗಿದೆ.

ಸಿಎಂ ಆಪ್ತ ಮುರಗೇಶ ನಿರಾಣಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಲೇ ಸಂಪುಟ ಸೇರ್ಪಡೆಗೆ  ಪ್ರಮಾಣ ವಚನ ಸ್ವೀಕಾರದ ಕೊನೆಗಳಿಗೆ ವರೆಗೂ ಪ್ರಯತ್ನಿಸಿದ್ದರು. ಜಿಲ್ಲೆಯಲ್ಲಿ ಗೋವಿಂದ ಕಾರಜೋಳರು ಇವರಿಗಿಂತ ಸಿನಿಯರ್ ಎನ್ನುವ ಕಾರಣಕ್ಕೆ ಮಂತ್ರಿ ಸ್ಥಾನ ವಂಚಿತರಾಗಿದ್ದರು. 

ಇದೀಗ ಹೇಗಾದರೂ ಸರಿ ಸಂಪುಟ ಸೇರ್ಪಡೆ ಬಹಿರಂಗವಾಗಿ ಅಲ್ಲದಿದ್ದರೂ ತೆರೆಮರೆಯಲ್ಲಿ ಶತ ಪ್ರಯತ್ನ ನಡೆಸುತ್ತಿದ್ದಾರೆ. ಹೈಕಮಾಂಡ್ ಮಟ್ಟದಲ್ಲೂ ಪ್ರಯತ್ನಗಳು ನಡೆದಿವೆ.

ಇವರೊಂದಿಗೆ ಪಂಚಮಸಾಲಿ ಸಮುದಾಯಕ್ಕೆ ಸೇರಿರುವ ಬಸನಗೌಡ ಪಾಟೀಲ ಯತ್ನಾಳ್, ಸಿದ್ದು ಸವದಿ ಕೂಡ ಪ್ರಯತ್ನಿಸುತ್ತಿದ್ದಾರೆ. ಅದೃಷ್ಟ ಯಾರಿಗೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ.

ನಿರಾಣಿ ಇಲ್ಲವೆ ಸವದಿ ಇವರಲ್ಲಿ ಯಾರಿಗೆ ಅವಕಾಶ ಸಿಕ್ಕರೂ ಜಿಲ್ಲೆಗೆ ಮತ್ತೊಂದು ಮಂತ್ರಿ ಸ್ಥಾನ ಸಿಕ್ಕಂತಾಗಲಿದೆ. 

ಏನಿದ್ದರೂ ಮೊದಲು ೧೫ ಶಾಸಕರ ಪೈಕಿ ಎಷ್ಟು ಜನರಿಗೆ ಮಂತ್ರಿ ಭಾಗ್ಯ ಲಭಿಸಲಿದೆ ಎನ್ನುವುದರ ಮೇಲೆ ಜಿಲ್ಲೆಗೆ ಇನ್ನೊಂದು ಮಂತ್ರಿಸ್ಥಾನದ ಬಗ್ಗೆ ನಿರ್ಧಾರವಾಗಲಿದೆ. ಎಲ್ಲ ಸಾಧ್ಯಾಸಾಧ್ಯತೆಗಳ ಮಧ್ಯೆ ಸ್ವಾಮೀಜಿಗಳ ಪ್ರಭಾವ ಹೇಗೆ ಕೆಲಸ ಮಾಡಲಿದೆ. ಮೀಗಿಲಾಗಿ ಸಿಎಂ ಸಂಪುಟ ವಿಸ್ತರಣೆಗೆ ಬಿಜೆಪಿ ರಾಷ್ಟಾಧ್ಯಕ್ಷ ಶಾ ಅವರು ಎಷ್ಟರ ಮಟ್ಟಿಗೆ “ಅಸ್ತು” ಎನ್ನುವುದರ ಮೇಲೆ ಎಲ್ಲವೂ ನಿಂತಿದೆ. ಅದೃಷ್ಟ ಖುಲಾಯಿಸಿದಲ್ಲಿ ಜಿಲ್ಲೆಗೆ ಇನ್ನೊಂದು ಸ್ಥಾನದ ಸಾಧ್ಯತೆ ನಿಚ್ಚಳವಾಗಿವೆ.

ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com