ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬಿಎಸ್ ವೈ ಮುಂದೆ ಸಂಪುಟ ಪುನಾರಚನೆಯೆ ದೊಡ್ಡ ಸವಾಲು..!

ವಿಧಾನ ಪರಿಷತ್ತಿಗೆ ಸದಸ್ಯರ ನಾಮಕರಣ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ಮೇಲುಗೈ ಸಾಧಿಸಿದ್ದಾರೆ. ಮುಂದಿನದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸುಸೂತ್ರವಾಗಿ ನಡೆಯುತ್ತಾ?
Published on

ಬೆಂಗಳೂರು: ವಿಧಾನ ಪರಿಷತ್ತಿಗೆ ಸದಸ್ಯರ ನಾಮಕರಣ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೆ ಮೇಲುಗೈ ಸಾಧಿಸಿದ್ದಾರೆ. ಮುಂದಿನದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸುಸೂತ್ರವಾಗಿ ನಡೆಯುತ್ತಾ?

ಸದ್ಯಕ್ಕೆ ಅದೇ ಪ್ರಶ್ನೆ. ತಮ್ಮ ಸರ್ಕಾರ ರಚನೆಯಾಗಲು ಕಾರಣರಾದವರ ಪೈಕಿ ಈಗಾಗಲೇ ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಬಿ.ಸಿ.ಪಾಟೀಲ್, ಡಾ. ಸುಧಾಕರ್, ನಾರಾಯಣ ಗೌಡ, ರಮೇಶ್ ಜಾರಕಿಹೊಳಿ, ಶಿವರಾಮ ಹೆಬ್ಬಾರ್, ಆನಂದ್ ಸಿಂಗ್ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಂಡಿದ್ದಾರೆ. ಇನ್ನುಳಿದಂತೆ ಪ್ರಮುಖರಲ್ಲಿ ಮುನಿರತ್ನ ಪ್ರತಿನಿಧಿಸುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಆಗಬೇಕಿದೆ. ಈ ಎಲ್ಲದರ ನಡುವೆ ಮತ್ತೆ ಸಚಿವ ಸಂಪುಟ ಪುನಾರಚನೆ ಗುಮ್ಮ ಎದ್ದಿದೆ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿರುವ ಸಂದರ್ಭದಲ್ಲಿ ಸಚಿವ ಸಂಪುಟ ಪುನಾರಚನೆ ಆಗಬೇಕೆಂಬ ಕೂಗು ಎದ್ದಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಪೈಕಿ ಹೊಸಕೋಟೆ ಉಪ ಚುನಾವಣೆಯಲ್ಲಿ ಸೋತಿದ್ದ ಎಂ.ಟಿ.ಬಿ.ನಾಗರಾಜ್ ಹಾಗೂ ಉಪ ಚುನಾವಣೆಗೆ ಸ್ಪರ್ಧಿಸದೇ ಇದ್ದ ಆರ್. ಶಂಕರ್ ಅವರನ್ನು ಇತ್ತೀಚೆಗೆ ವಿಧಾನಸಭೆಯಿಂದ ಪರಿಷತ್ ಗೆ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ. ಇದೀಗ ಸಚಿವ ಸಂಪುಟ ಪುನಾರಚನೆ ಅನಿವಾರ್ಯತೆಗೆ ಸಿಲುಕಿರುವ ಮುಖ್ಯಮಂತ್ರಿಗಳು ತಮ್ಮನ್ನು ಬೆಂಬಲಿಸಿದ ಎಚ್ .ವಿಶ್ವನಾಥ್, ಯೋಗೀಶ್ವರ್, ಎಂ.ಟಿ.ಬಿ.ನಾಗರಾಜ್. ಆರ್. ಶಂಕರ್ ಅವರನ್ನು ಮಾತುಕೊಟ್ಟಂತೆ ಸಚಿವರನ್ನಾಗಿ ಮಾಡಲೇಬೇಕಾದ ಅನಿವಾರ್ಯತೆಗೆ ಸಿಕ್ಕಿದ್ದಾರೆ. ಹಾಗೊಂದು ವೇಳೆ ಈ ಯಾರೂ ಸಚಿವರಾಗದೇ ಇದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಸರ್ಕಾರಕ್ಕೆ ಸಮಸ್ಯೆಗಳು ತಲೆದೋರುವ ಸಾಧ್ಯತೆಗಳೇ ಜಾಸ್ತಿ.

ಪರಿಷತ್ ಸದಸ್ಯರಾಗಿ ಆಯ್ಕೆ ಮತ್ತು ನೇಮಕಗೊಂಡಿರುವವರಿಗೆ ಆದ್ಯತೆ ನೀಡಿದ್ದೇ ಆದಲ್ಲಿ ಅದರಿಂದ ಮುಂದೆ ಪಕ್ಷದೊಳಗಿನ ಮೂಲ ನಿವಾಸಿಗಳ ಪ್ರತಿರೋಧವನ್ನು ಮುಖ್ಯಮಂತ್ರಿಗಳು ಎದುರಿಸಬೇಕಾಗಿ ಬರುವುದು ನಿಶ್ಚಿತ. ಅಂತಹ ಪ್ರಸಂಗ ಬಂದರೆ ಈಗ ಸಚಿವರಾಗಿರುವ ಪಕ್ಷದ ಮೂಲ ನಿವಾಸಿಗಳನ್ನು ಕೈಬಿಟ್ಟು ಆ ಜಾಗಕ್ಕೆ ಮತ್ತೆ ಪಕ್ಷದ ಮೂಲ ಶಾಸಕರನ್ನೇ ಸಚಿವರಾಗಿ ಸಂಪುಟಕ್ಕೆ ತೆಗೆದುಕೊಂಡರೂ ಸಮಸ್ಯೆ ತಪ್ಪಿದ್ದಲ್ಲ.

ಮುಂದಿನ ದಿನಗಳಲ್ಲಿ ಈ ಸವಾಲನ್ನು ಯಡಿಯೂರಪ್ಪ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com