ರಾಜ್ಯಸಭಾ ಚುನಾವಣೆ: ಕಾಂಗ್ರೆಸ್- ಜೆಡಿಎಸ್ ಹೆವಿವೈಟ್ ಗಳಿಗೆ ಬಿಜೆಪಿ ಸೆಡ್ಡು; ಭಿನ್ನಮತೀಯ ಚಟುವಟಿಕೆಗೆ ತಿರುಗೇಟು!

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ದೈವಾರ್ಷಿಕ ಚುನಾವಣೆಗೆ ಬಿಜೆಪಿಯಿಂದ ಎರಡು ಹೊಸ ಮುಖಗಳಿಗೆ ಮಣೆ ಹಾಕಿದ್ದು, ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ್ ಗಸ್ತಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ. 
ರಮೇಶ್ ಕತ್ತಿ ಮತ್ತು ಪ್ರಭಾಕರ್ ಕೋರೆ
ರಮೇಶ್ ಕತ್ತಿ ಮತ್ತು ಪ್ರಭಾಕರ್ ಕೋರೆ
Updated on

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ದೈವಾರ್ಷಿಕ ಚುನಾವಣೆಗೆ ಬಿಜೆಪಿಯಿಂದ ಎರಡು ಹೊಸ ಮುಖಗಳಿಗೆ ಮಣೆ ಹಾಕಿದ್ದು, ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ್ ಗಸ್ತಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ. 

ಬಿಜೆಪಿ ರಾಷ್ಟ್ರೀಯ ಚುನಾವಣಾ ಸಮಿತಿ ಈ ಇಬ್ಬರು ಹೆಸರುಗಳನ್ನು ಪ್ರಕಟಿಸಿದ್ದು, ಶಿಕ್ಷಣ ಕ್ಷೇತ್ರದ ಪ್ರಮುಖ ಪ್ರಭಾಕರ ಕೋರೆ, ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ರಾಜ್ಯಸಭಾ ಚುನಾವಣೆಯ ಆಸೆ ಭಗ್ನಗೊಂಡಿದೆ. 

ಕಾಂಗ್ರೆಸ್ ಮತ್ತು ಜೆಡಿಎಸ್ ಖರ್ಗೆ, ಗೌಡರಂತಹ ರಾಜಕೀಯದ ಹಿರಿಯ ಹುಲಿಗಳಿಗೆ, ಹೆವಿ ವೈಟ್ ಗಳಿಗೆ ಮನ್ನಣೆ ನೀಡಿದರೆ ಬಿಜೆಪಿ ಇದಕ್ಕೆ ತಿರುಗೇಟು ನೀಡಿದ್ದು, ಅಪ್ಪಟ ಪಕ್ಷದ ಕಾರ್ಯಕರ್ತರಿಗೆ ಮಣೆ ಹಾಕಿ ಸೆಡ್ಡು ಹೊಡೆದಿದೆ. ನಿಷ್ಠಾವಂತ ಕಾರ್ಯಕರ್ತರನ್ನು ಆಯ್ಕೆ ಮಾಡಿ ಭಿನ್ನಮತೀಯ ಚಟುಟವಟಿ ನಡೆಸುವವರಿಗೆ ತಿರುಗೇಟು ನೀಡಿದೆ. ಶಿಕ್ಷಣ ಸೇರಿದಂತೆ ಯಾವುದೇ ಲಾಬಿಗೆ ಮಣಿಯುವುದಿಲ್ಲ ಎನ್ನುವ ಸಂದೇವನ್ನು ರವಾನಿಸಿದೆ. 

ಈ ಆಯ್ಕೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪ್ರಮುಖ ಪಾತ್ರ ವಹಿಸಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವರಿಗೆ ತಿರುಗೇಟು ನೀಡಿದ್ದಾರೆ.

ಈರಣ್ಣ ಕಡಾಡಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ ಜೂನ್ 1, 1966 ರಲ್ಲಿ ಜನಿಸಿದ್ದು, ಲಿಂಗಾಯಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 1989 ರಿಂದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ. ಅರಭಾವಿ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದ ಅವರು, ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ,
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, 1994 ರಲ್ಲಿ ಅರಭಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. 

2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದಲ್ಲದೇ 2010ರಲ್ಲಿ ಬೆಳಗಾವಿ ಜಿ.ಪಂ.ಅಧ್ಯಕ್ಷರಾದರು. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಅವರು, ಮೊದಲಿನಿಂದಲೂ ಆರ್ಎಸ್ಎಸ್, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಪ್ರಸ್ತುತ ಬಿಜೆಪಿ ವಿಭಾಗೀಯ ಪ್ರಭಾರಿ ಆಗಿದ್ದಾರೆ.  

ಅಶೋಕ ಗಸ್ತಿ ಸವಿತ ಸಮಾಜಕ್ಕೆ ಸೇರಿದವರು. ರಾಯಚೂರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಶೋಕ್ ಗಸ್ತಿ ರಾಯಚೂರು ನಗರಸಭೆಗೆ ಸದಸ್ಯರಾಗಿ, ಬಳ್ಳಾರಿ ವಿಭಾಗೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. 

ಈ ಹಿಂದೆ 2009 ರಲ್ಲಿ ರಾಯಚೂರು ಜಿಲ್ಲಾ ಅಧ್ಯಕ್ಷರಾಗಿದ್ದ ಅವರು, ಇದುವರೆಗೆ ಪ್ರಮುಖ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದ ಅಶೋಕ್ ಗಸ್ತಿ ಬಿಎಲ್, ಸಂತೋಷ್ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com