ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತೀರ್ಮಾನ ಕಾಯ್ದೆಯ ಆತ್ಮವನ್ನೇ ಕೊಲ್ಲಲು ಹೊರಟಂತೆ: ಮುಖ್ಯಮಂತ್ರಿಗೆ ಸಿದ್ದರಾಮಯ್ಯ ಪತ್ರ

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತೀರ್ಮಾನ ಕೈಬಿಡವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ  ಮುಖ್ಯಮಂತ್ರಿ ಯಡಿಯೂರಪ್ಪ
ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ
Updated on

ಬೆಂಗಳೂರು: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತೀರ್ಮಾನ ಕೈಬಿಡವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ತಿದ್ದುಪಡಿ ಹೆಸರಿನಲ್ಲಿ ಕಾಯ್ದೆಯ ಆತ್ಮವನ್ನೇ ಕೊಲ್ಲಲು ಸರ್ಕಾರ ಹೊರಟಿದೆ. ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ನಿರ್ಧಾರವನ್ನು ಕೈಬಿಡದಿದ್ದರೆ ಜನರ ಚಳವಳಿಗೆ ಚಾಲನೆ ನೀಡಲಾಗುವುದು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಎಚ್ಚರಿಸಿದ್ದಾರೆ.

"ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಸಮರ್ಥಿಸಲು ಮುಖ್ಯವಾಗಿ ಮಂಡಿಸುತ್ತಿರುವ ವಾದ ರಾಜ್ಯಕ್ಕೆ ಬಂಡವಾಳದ ಹರಿವು ಹೆಚ್ಚಾಗುತ್ತದೆ ಎಂಬುದಾಗಿದೆ. ವಾಸ್ತವ ಏನೆಂದರೆ ದೇಶಗಳ ಮುಂದಿನ ಭವಿಷ್ಯ ರೂಪುಗೊಳ್ಳುವುದೇ ಜ್ಞಾನ ಆಧಾರಿತ ಆರ್ಥಿಕತೆಯಿಂದ. ನಾಲೆಡ್ಜ್ ಎಕಾನಮಿ ಮೂಲಭೂತ ಸೌಕರ್ಯಗಳನ್ನು ಆಧರಿಸಿ ರೂಪುಗೊಳ್ಳುತ್ತದೆಯೇ ಹೊರತು ಭೂಮಿಯನ್ನು ಆಧರಿಸಿ ಅಲ್ಲ.

"ರಾಷ್ಟ್ರದುದ್ದಕ್ಕು ಕೊರೋನಾ ಸಂಕಷ್ಟ ಆವರಿಸಿಕೊಂಡು ಜನತೆ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡು ಹಠಕ್ಕೆ ಬಿದ್ದ ಹಾಗೆ ಜನ ವಿರೋಧಿಯಾದ ಕಾಯ್ದೆಗಳನ್ನು ತರಲು ಸುಗ್ರೀವಾಜ್ಞೆಗಳ ಮೊರೆ ಹೋಗಲಾಗುತ್ತಿದೆ. ಜನದ್ರೋಹಿಯಾದ ಮತ್ತು ಕಾರ್ಪೊರೇಟ್ ಪರವಾದ ಕಾನೂನುಗಳನ್ನು ತರುತ್ತಿದ್ದೀರಿ. ಸಣ್ಣ ಪ್ರಮಾಣದ ಭೂಮಿಯ ಆಸರೆ ಇದ್ದರೂ ಕೂಡ ರೈತಾಪಿ ಕುಟುಂಬಗಳು ಬಿಕ್ಕಟ್ಟನ್ನು ನಿಭಾಯಿಸುತ್ತವೆ. ಹೊಟ್ಟೆ ಬಟ್ಟೆಗೆ ಆಗುವಷ್ಟಾದರೂ ಬೆಳೆದು ಜೀವ ಉಳಿಸಿಕೊಳ್ಳಲು ಭೂಮಿಯನ್ನು ಆಶ್ರಯಿಸುತ್ತವೆ. ನೀವೀಗ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ನೇರವಾಗಿ ರೈತರ ಹೊಟ್ಟೆಗೆ ಬೆಂಕಿ ಹಾಕಲು ಹೊರಟಿದ್ದೀರಿ. ಉಳುವವನೆ ಹೊಲದ ಒಡೆಯನೆಂಬ ಕಾಗೋಡು ಸತ್ಯಾಗ್ರಹದ ಆಶಯವನ್ನು ನೀವು ಉಳ್ಳವನೇ ಭೂಮಿಯ ಒಡೆಯ ಎಂದು ಬದಲಾಯಿಸಿ ರಾಜ್ಯದ ಚರಿತ್ರೆಯಲ್ಲಿ ಶಾಶ್ವತವಾಗಿ ಖಳನಾಯಕನ ಪಾತ್ರವನ್ನು ವಹಿಸಿಕೊಳ್ಳಲು ಹೊರಟಿದ್ದೀರಿ. ಹಾಗಾಗಲು ಬಿಡದೆ ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ದುರ್ಬಲಗೊಳಿಸದೆ ಕಾಯ್ದೆಯ ಆಶಯಗಳನ್ನು ಇನ್ನಷ್ಟು ಶಕ್ತಗೊಳಿಸಬೇಕೆಂದು ಒತ್ತಾಯಿಸುತ್ತೇನೆ.

"ದಮನಿತ ವರ್ಗಗಳು ಆರ್ಥಿಕ ಚೈತನ್ಯ ಕಳೆದುಕೊಂಡರೆ, ಅಧಿಕಾರದಿಂದ ವಂಚಿತಗೊಂಡರೆ ಶಾಶ್ವತವಾಗಿ ಗುಲಾಮಗಿರಿಯತ್ತ ಸಾಗುತ್ತವೆ. ಈ ದುರುದ್ದೇಶವನ್ನು ಇಟ್ಟುಕೊಂಡೇ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ದಮನಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಆರ್ಥಿಕ ಚೈತನ್ಯವನ್ನು ಕುಗ್ಗಿಸುತ್ತಿದ್ದವು. ಇದೀಗ ಭೂಮಿ ಸಂಬಂಧಿತ, ಕೃಷಿ ಸಂಬಂಧಿತ ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಕೃಷಿ ವಲಯಕ್ಕೆ ಹಣ ಉಳ್ಳವರನ್ನು ಸೇರಿಸಿ ಅವರಿಂದ ರೈತರ ಭೂಮಿ ಕುಸಿಯುವ ಮೂಲಕ ಅನ್ನದಾತರ ಆರ್ಥಿಕ ಚೈತನ್ಯವನ್ನು ಶಾಶ್ವತವಾಗಿ ನಾಶ ಮಾಡುವ ಹುನ್ನಾರ ಆರಂಭವಾಗಿದೆ. 

"ಬಂಡವಾಳಿಗರಲ್ಲಿರುವ ಅಪಾರ ಪ್ರಮಾಣದ ಹಣದಿಂದ ಸಣ್ಣಪುಟ್ಟ ರೈತರ ಭೂಮಿಯನ್ನು ಕಸಿದುಕೊಳ್ಳಲು ಸಾಧ್ಯವಾಗುತ್ತದೆ. ಕೃಷಿಯಲ್ಲಿ ಬಂಡವಾಳಿಗರ ಏಕಸ್ವಾಮ್ಯ (ಮೊನಾಪಲಿ) ಸಾಧಿಸಲಾಗುತ್ತದೆ. ಬಹುಪಾಲು ಜನರು ಸೇರಿ ಉತ್ಪಾದನೆ ಮಾಡಿ ಎಲ್ಲರೂ ಬದುಕುವ ವಾತಾವರಣ ನಿರ್ಮಾಣವಾಗುವುದರ ಬದಲು ಕೆಲವರು ಉತ್ಪಾದನೆ ಮಾಡಿ ಇಡೀ ದೇಶಕ್ಕೆ ಹಂಚುವ ಅಪಾಯಕಾರಿ ದಿನಗಳು ಬರಲಿವೆ. ಇದರಿಂದ ಜನರ ಆಹಾರದ ಹಕ್ಕು ಮೊಟಕಾಗುತ್ತದೆ. ವಿಪರೀತ ನಿರುದ್ಯೋಗ ಸಮಸ್ಯೆ ಪ್ರಾರಂಭವಾಗುತ್ತದೆ.

" ಆದುದರಿಂದ, ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಹೆಸರಿನಲ್ಲಿ ಕಾಯ್ದೆಯ ಆತ್ಮವನ್ನೇ ಕೊಲ್ಲಲು ಹೊರಟಿರುವ ತೀರ್ಮಾನವನ್ನು ತಕ್ಷಣವೇ ಕೈ ಬಿಡಬೇಕು. ಜೊತೆಗೆ ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಈ ಕ್ಷಣದಿಂದ ರದ್ದುಪಡಿಸಬೇಕು. ಮತ್ತು ಕೇಂದ್ರ ಸರ್ಕಾರ ಈ ಎರಡು ಕಾಯ್ದೆಗಳನ್ನು ಕೇಂದ್ರವು ಕೈಬಿಡುವಂತೆ ರಾಜ್ಯ ಸರ್ಕಾರ ಒತ್ತಾಯಿಸಬೇಕೆಂದು ಆಗ್ರಹಿಸುತ್ತೇನೆ. " ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com