ಬೆಂಗಳೂರು: ಹಾಳೂರಿನಲ್ಲಿ ಉಳಿದವನೆ ಗೌಡ ಎಂಬ ಮಾತಿನಂತೆ ಸದಸ್ಯರೇ ಇಲ್ಲದ ಸದನದೊಳಗೆ ಕಾಂಗ್ರೆಸ್ ನ ಪ್ರಕಾಶ್ ರಾಥೋಡ್ ಭಾಷಣ ಮಾಡಿ ಧೀರರಾದರು. ಸದನಕ್ಕೆ ಸದಸ್ಯರು ಬರುವವರೆಗೆ ಮಾತನಾಡಿ ಖಾಲಿಖಾಲಿಯಾಗಿದ್ದ ಮೇಲ್ಮನೆಯ ಕಲಾಪದಲ್ಲಿ ಧ್ವನಿಯಾದರು.
ಮಧ್ಯಾಹ್ನ ಭೋಜನ ವಿರಾಮ ಬಳಿಕ ಮತ್ತೆ ಸದನ ಸಮಾವೇಶಗೊಂಡಾಗ ಕಾಂಗ್ರೆಸ್, ಜೆಡಿಎಸ್ನಿಂದ ತಲಾ ಒಬ್ಬ ಸದಸ್ಯರು, ಬಿಜೆಪಿಯಿಂದ ಮೂವರು ಸಚಿವರಿದ್ದರು. ಕಾಂಗ್ರೆಸ್ನಿಂದ ಹಾಜರಿದ್ದ ಏಕೈಕ ಸದಸ್ಯ ಪ್ರಕಾಶ್ ರಾಥೋಡ್ ಸಂವಿಧಾನದ ಮೇಲೆ ಭಾಷಣ ಮಾಡಲು ಆರಂಭಿಸಿದಾಗ ಎಲ್ಲರೂ ಆಶ್ಚರ್ಯಗೊಂಡರು. ಖಾಲಿಖಾಲಿಯಾಗಿದ್ದ ಆಸನಗಳು, ಒಂದೆರಡು ಸದಸ್ಯರನ್ನುದ್ದೇಶಿಸಿ ಮಾತನಾಡಲು ಎದ್ದುನಿಂತಿದ್ದನ್ನು ನೋಡಿ ಸಚಿವ ಸಿ.ಟಿ.ರವಿ ಮಂಕುತಿಮ್ಮನ್ನ ಕಗ್ಗದ ಸಾಲುಗಳನ್ನು ಉದ್ದರಿಸಿ ಕೀಟಲೆ ಮಾಡಿದರು.
ಪ್ರಕಾಶ್ ರಾಥೋಡ್ ಮಾತನಾಡಿ, ನಮ್ಮ ದೇಶದಲ್ಲಿ 20 ಸಾವಿರ ಜಾತಿಗಳಿದ್ದು ನಾವು 70 ವರ್ಷಗಳ ಕಾಲ ಸಂವಿಧಾನದ ಅಡಿಯಲ್ಲಿ ಬದುಕಲು ವೈವಿಧ್ಯತೆಯಲ್ಲಿ ಏಕತೆಯೇ ಕಾರಣ. ವೈವಿಧ್ಯತೆಯಲ್ಲಿಯೇ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು. ಸಾವಿರಾರು ಜಾತಿಗಳಿದ್ದರೂ ಎಲ್ಲರಿಗೂ ಸಮಾನತೆ ಸಹೋದರತೆ ಸ್ವಾತಂತ್ರ್ಯ ನೀಡಬೇಕಿದೆ. ಕೆಲವರು ಗಾಂಧಿ, ಅಂಬೇಡ್ಕರ್ ಅವರನ್ನು ಟೀಕೆ ಮಾಡುತ್ತಿದ್ದಾರೆ. ಯಾರೇ ಆಗಲೀ ಸ್ವಾತಂತ್ರ ಹೋರಾಟಗಾರರನ್ನು ಟೀಕಿಸಬಾರದು. ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರ ಬಗ್ಗೆ ಹಗುರವಾಗಿ ಮಾತನಾಡುವುದು ಖಂಡನೀಯ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಟೀಕಿಸಿದರು.
ಜಾತಿವ್ಯವಸ್ಥೆಯೇ ರಾಷ್ಟ್ರದ ವ್ಯವಸ್ಥೆ ಎಂದು ಅಂಬೇಡ್ಕರ್ ಹೇಳಿದ್ದರು. ಜಾತಿಜಾತಿಗಳ ನಡುವಿನ ಅಸಮಾನತೆ ರಾಷ್ಟ್ರದ್ರೋಹಿ ಎಂದಿದ್ದರು. ನಮ್ಮನಮ್ಮಲ್ಲಿ ಶತೃತ್ವದಭಾವನೆ ಹುಟ್ಟುಹಾಕುತ್ತಿರುವುದನ್ನು ತಡೆಯಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಮತದಾನದ ಹಕ್ಕು ಇದೆ ಎಂದರು.
ಗಾಂಧೀಜಿಯವರ ಕನಸಿನಂತೆ ಕಾಂಗ್ರೆಸ್ ಸರ್ವರಿಗೂ ಸಮಾನತೆ ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಕ್ಷ ಎತ್ತಿ ಹಿಡಿದಿದೆ. ಆದರೆ ಇನ್ನೂ ಅಸ್ಪೃಶ್ಯತೆ ತಾಂಡವಾಡುತ್ತಿರುವುದು ವಿಪರ್ಯಾಸ. ಸಂಸದರಿಗೆ ದೇವಾಲಯ ನಿಷೇಧವಾಗಿದ್ದು, ಲಂಬಾಣಿ ಸಮುದಾಯದ ತಾವು ಇಂದು ಜನಪ್ರತಿನಿಧಿಯಾಗಲು ಅವಕಾಶ ಕೊಟ್ಟಿದ್ದು ಪ್ರಜಾಪ್ರಭುತ್ವ ವ್ಯವಸ್ಥೆ ಎಂದರು.
ನಮ್ಮಲ್ಲಿರುವ ಲೋಪದೋಷ ಸರಿಮಾಡಬೇಕು ಎಂದು ಪ್ರಕಾಶ್ ರಾಥೋಡ್ ಹೇಳಿದಾಗ ವ್ಯವಸ್ಥೆ ಸರಿಮಾಡಲು ಎಲ್ಲರೂ ಬಂದು ಸದನದಲ್ಲಿ ಕೂರಬೇಕು ಕಲಾಪದಲ್ಲಿ ಭಾಗಿಯಾಗಬೇಕು ಎಂದು ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಹಾಸ್ಯ ಮಾಡಿದರು.
ಸದನಕ್ಕೆ ಸದಸ್ಯರು ಬರುವವರೆಗೂ ಮಾತನಾಡಿ ಮೇಲ್ಮನೆಯಲ್ಲಿ ಪ್ರಕಾಶ್ ರಾಥೋಡ್ ಎಲ್ಲರ ಗಮನ ಸೆಳೆದರು.
ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳು ಹರಿದಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ವಿವಾದಾತಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ಜನವಿರೋಧಿ ಕಾಯಿದೆ. ಇದನ್ನು ತಿರಸ್ಕಾರ ಮಾಡಬೇಕು ಎಂದಾಗ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಧ್ಯಪ್ರವೇಶಿಸಿ, ಇದು ವಿವಾದಾತ್ಮಕ ಕಾಯಿದೆ ಅಲ್ಲ ಎರಡೂ ಮನೆಗಳಲ್ಲಿ ಮನ್ನಣೆ ಪಡೆದು ಪೌರತ್ವ ಕಾಯಿದೆ ತಿದ್ದುಪಡಿ ಜಾರಿಯಾಗಿದೆ ಎಂದರು.
ಸಭಾನಾಯಕರ ಮಾತಿಗೆ ಬಿಜೆಪಿಯ ತೇಜಸ್ವಿನಿ ರಮೇಶ್ ಜೊತೆಯಾದರು. ಈ ವೇಳೆ ಸಚಿವ ಸಿ.ಟಿ.ರವಿ ಮಧ್ಯಪ್ರವೇಶಿಸಿ, ಧಾರ್ಮಿಕ ದೌರ್ಜನ್ಯಕ್ಕೊಳಗಾದವರಿಗೆ ಕಾಯಿದೆ ಅನ್ವಯವಾಗಲಿದೆ. ಪಾಕಿಸ್ತಾನದಲ್ಲಿ ಧಾರ್ಮಿಕ ದೌರ್ಜನ್ಯ ಆಗಿದೆ ಎನ್ನುವುದನ್ನು ನೀವು ಒಪ್ಪುತ್ತೀರಾ. ಪಾಕಿಸ್ತಾನಿಗಳು ಪಾಕಿಸ್ತಾನ ಬೇಡ ಅಖಂಡ ಭಾರತ ಬೇಕು ಎನ್ನಲಿ. ಬಾಂಗ್ಲಾದವರು ಬಾಂಗ್ಲಾ ಬೇಡ ಎನ್ನಲಿ. ಅಖಂಡ ಭಾರತ ಬೇಕು ಎನ್ನಲಿ. ಆಗ ಎಲ್ಲರಿಗೂ ಪೌರತ್ವ ಕೊಡುತ್ತೇವೆ ಎಂದರು.
ಆಗ ಪ್ರಕಾಶ್ ರಾಥೋಡ್, ಇದು ಸಂವಿಧಾನ ವಿರೋಧಿ ಕಾಯಿದೆ. ಇದಕ್ಕೆ ತಿದ್ದುಪಡಿ ತನ್ನಿ. ರಾಜ್ಯಸಭೆಯಲ್ಲಿ ಗೃಹಸಚಿವ ಅಮಿತ್ ಷಾ ಹೇಳಿದಂತೆ ನಡೆದುಕೊಳ್ಳಲಿ ಎಂದರು.
Advertisement