ಶಿರಾ ಉಪಚುನಾವಣೆ: ವೇದಿಕೆಯಲ್ಲೇ ಕುಸಿದು ಬಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ
ತುಮಕೂರು: ಶಿರಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದ ವೇಳೆ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಬಹಿರಂಗ ಪ್ರಚಾರದ ವೇದಿಕೆಯಲ್ಲಿಯೇ ಕುಸಿದು ಬಿದ್ದ ಘಟನೆ ನಡೆಯಿತು.
ಭಾನುವಾರ ಜೆಡಿಎಸ್ ಪಕ್ಷದ ಸಮಾವೇಶ ನಡೆಯುತ್ತಿದ್ದ ವೇದಿಕೆಯಲ್ಲೇ ಕುಸಿದು ಬಿದ್ದ ಅಭ್ಯರ್ಥಿ ಅಮ್ಮಾಜಮ್ಮ (60) ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊನೆ ದಿನದ ಬಹಿರಂಗ ಪ್ರಚಾರದ ಅಂಗವಾಗಿ ಸಮಾವೇಶ ಆಯೋಜನೆ ಮಾಡಲಾಗಿತ್ತು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಅಮ್ಮಾಜಮ್ಮ ಸೆರಗೊಡ್ಡಿ, ನನಗೆ ರಾಜಕೀಯ ಗೊತ್ತಿಲ್ಲ. ರೈತರ ಕಷ್ಟ ತಿಳಿದಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದು ನನ್ನ ಪತಿಯ ಕನಸಾಗಿತ್ತು. ಅದನ್ನು ನನಸು ಮಾಡಲು ಮತನೀಡಿ ಎಂದು ಕೇಳಿದರು.
ದೇವೇಗೌಡರು ಮಾತನಾಡುತ್ತಿದ್ದಾಗ, ಅಮ್ಮಾಜಮ್ಮ ಅವರು ಪಕ್ಕದಲ್ಲಿಯೇ ನಿಂತಿದ್ದರು. ಬೆಳಿಗ್ಗೆಯಿಂದಲೂ ನಡೆದ ರೋಡ್ ಶೋ, ಪ್ರಚಾರ ಸಭೆಗಳಲ್ಲಿ ಅವರು ನಿಂತುಕೊಂಡಿದ್ದರು. ಇದರಿಂದ ಬಳಲಿದ್ದರು.
ಐಬಿ ಸರ್ಕಲ್‌ನಿಂದ ರಾಮಚಂದ್ರಪ್ಪ ಬಯಲು ರಂಗಮಂದಿರದ ತನಕ ಬೃಹತ್ ಜಾಥಾ ನಡೆಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಹಲವಾರು ನಾಯಕರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಸುಮಾರು 2 ಕಿಮೀ ವರೆಗೂ ಬಿಸಿಲಿನಲ್ಲಿ ಪ್ರಚಾರ ನಡೆಸಿದ ಕಾರಣ ಅಮ್ಮಾಜಮ್ಮ ಅಸ್ವಸ್ಥರಾದರು ಎಂದು ಹೇಳಲಾಗಿದೆ.
ಅಮ್ಮಾಜಮ್ಮ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದ ದಿನವೇ ಅವರಿಗೆ ಕೋವಿಡ್ ಸೋಂಕು ತಗುಲಿದ್ದು ಖಚಿತವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮನೆಗೆ ತೆರಳಿದ ಅಮ್ಮಾಜಮ್ಮ ನನಗೆ ತಲೆ ಸುತ್ತು ಬಂದಿತ್ತು, ಇಗ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ