ಆರ್ ಆರ್ ನಗರ ಉಪಚುನಾವಣೆ: ವಿವಾದ ಸೃಷ್ಟಿಸಿದ ಕೇಸರಿ ಮಾಸ್ಕ್!
ಬೆಂಗಳೂರು: ರಾಜ ರಾಜೇಶ್ವರಿ ನಗರ ಉಪ ಚುನಾವಣೆಗೆ ನಿಯೋಜನೆಗೊಂಡಿದ್ದ ಅರೆಸೇನಾ ಪಡೆ ಸಿಬ್ಬಂದಿ ಧರಿಸಿದ್ದ ಕೇಸರಿ ಬಣ್ಣದ ಮಾಸ್ಕ್‌ನ್ನು ಬಿಜೆಪಿ ಕಾರ್ಯಕರ್ತರು ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದ ಘಟನೆ ನಡೆಯಿತು.
ಆರ್. ಆರ್. ನಗರ ವ್ಯಾಪ್ತಿಯ ಕನ್ಯಾಕುಮಾರಿ ಶಾಲೆಯ ಮತಗಟ್ಟೆ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಅರೆಸೇನಾಪಡೆ ಸಿಬ್ಬಂದಿ ಕೇಸರಿ ಬಣ್ಣದ ಮಾಸ್ಕ್ ಹಾಕಿದ್ದರು. ಭದ್ರತಾ ಸಿಬ್ಬಂದಿ ಕೇಸರಿ ಬಣ್ಣದ ಮಾಸ್ಕ್ ಧರಿಸಿದರೇ ಮತದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಜ್ಞಾನಭಾರತಿ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಸ್ಥಿತಿ ಶಾಂತಗೊಳಿಸಿದರು. ಕೇಸರಿ ಬಣ್ಣದ ಮಾಸ್ಕ್ ತೆಗೆಸಿ, ನೀಲಿಬಣ್ಣದ ಸರ್ಜಿಕಲ್ ಮಾಸ್ಕ್ ನೀಡಲಾಯಿತು ಎನ್ನಲಾಗಿದೆ, ಆದರೆ ಆ ರೀತಿ ಯಾವ ಘಟನೆಗಳು ನಡೆದಿಲ್ಲ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂಥಹ ಯಾವುದೇ ಘಟನೆಗಳು ನಡೆದಿಲ್ಲ, ನಾನು ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದೆ, ಎಲ್ಲವೂ ಶಾಂತಿಯುತವಾಗಿ ನಡೆಯಿತು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ