ಆರ್.ಆರ್.ನಗರ ಉಪ ಚುನಾವಣೆ: ಜೆಡಿಎಸ್ ನಿಂದ ಕೃಷ್ಣಮೂರ್ತಿ ಕಣಕ್ಕೆ
ಬೆಂಗಳೂರು: ನವೆಂಬರ್ 3 ರಂದು ನಡೆಯಲಿರುವ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಜೆಡಿಎಸ್ ಜ್ಞಾನಭಾರತಿ ಘಟಕದ ಮುಖ್ಯಸ್ಥ ಕೃಷ್ಣಮೂರ್ತಿ ಹೆಸರನ್ನು ಅಖೈರುಗೊಳಿಸಲಾಗಿದೆ.
ಕಳೆದ ವಾರ ಜೆಡಿಎಸ್ ಶಾಸಕಾಂಗ ಪಕ್ಷದ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಪ್ರಕಾಶ್, ಆರ್ ಆರ್ ನಗರ ಬ್ಲಾಕ್ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ ಮತ್ತು ಜ್ಞಾನಭಾರತಿ ಘಟಕದ ಮುಖ್ಯಸ್ಥ ಕೃಷ್ಣಮೂರ್ತಿ ಸೇರಿದಂತೆ ಮೂವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿತ್ತು. ಅಂತಿಮವಾಗಿ ಆರ್ ಆರ್ ನಗರಕ್ಕೆ ಕೃಷ್ಣಮೂರ್ತಿ ಹೆಸರು ಪ್ರಕಟಿಸಲಾಗಿದೆ.
ಕೃಷ್ಣಮೂರ್ತಿ ಅವರು ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಕೃಷ್ಣಮೂರ್ತಿ ತಂದೆ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದವರು. ಈಗ ಅವರ ಮಗನಿಗೆ ಟಿಕೆಟ್ ಕೊಟ್ಟಿದ್ದೇವೆ. ಕೃಷ್ಣಮೂರ್ತಿ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಮಗೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ಸಮಾನ ವಿರೋಧಿಗಳು. ಎರಡೂ ಪಕ್ಷಗಳ ವಿರುದ್ಧ ನಮ್ಮ ಹೋರಾಟ ಇರುತ್ತದೆ. ಕಳೆದ ಎರಡು ಚುನಾವಣೆಗಳು ಬೇರೆ ಬೇರೆ ರೀತಿ ಆಗಿದೆ. ಈ ಬಾರಿ ಬೇರೆ ರೀತಿ ಚುನಾವಣೆ ಆಗುತ್ತೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ