ಬಿಜೆಪಿ ಮುಕ್ತಗೊಳಿಸುವುದಕ್ಕಾಗಿ ಮತ್ತೊಂದು ಸ್ವಾತಂತ್ರ್ಯ ಹೋರಾಟ: ಡಿ.ಕೆ.ಶಿವಕುಮಾರ್
ಬೆಂಗಳೂರು: ಇತಿಹಾಸ ಸೃಷ್ಟಿಸಿದ್ದು ಕಾಂಗ್ರೆಸ್. ಇತಿಹಾಸವನ್ನು ಕಿತ್ತುಕೊಳ್ಳುವುದು ಬಿಜೆಪಿ. ಅಂದು ಬ್ರಿಟಿಷ್ ರಿಂದ ಮುಕ್ತಿ ಹೊಂದಲು ಹೋರಾಟ ಮಾಡಿದ ಮಾದರಿಯಲ್ಲಿಯೇ ಪ್ರಸಕ್ತ ಬಿಜೆಪಿ ಸರ್ಕಾರಗಳ ವಿರುದ್ಧ ಮತ್ತೆ ಹೋರಾಟ ಮಾಡಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ನಿರ್ದೇಶನ ಮೇರೆಗೆ ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತರುತ್ತಿರುವ ರೈತ ವಿರೋಧಿ, ಕಾರ್ಮಿಕ ವಿರೋಧಿ ತಿದ್ದುಪಡಿ ವಿರುದ್ಧ ಕೆಪಿಸಿಸಿ ನಾಯಕರು ಪ್ರತಿಭಟಿಸಿದರು.
ಹಸಿರು ಶಾಲು ಹೊದ್ದುಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ಬಿಜೆಪಿ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ದೇಶವನ್ನು ಬಿಜೆಪಿ ಮುಕ್ತಗೊಳಿಸುವುದಕ್ಕಾಗಿ ಮತ್ತೊಂದು ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜನವಿರೋಧಿ ಕಾಯಿದೆಗಳನ್ನು ಜಾರಿಗೆ ತರುತ್ತಿದೆ. ಈಗ ಕೊರೋನಾ ಸಂಕಷ್ಟದ ಸಮಯದಲ್ಲಿಯೂ ರೈತರು, ಕಾರ್ಮಿಕರು, ಬಡವರ ಮೇಲೆ ಸುಗ್ರೀವಾಜ್ಞೆಗಳ ಮೂಲಕ ಪ್ರಹಾರ ನಡೆಸುತ್ತಿದೆ ಎಂದರು.
ಸಿಎಂ ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತರ ಪರವಾಗಿ ಇದ್ದೇನೆ ಎಂದು ಬೂಟಾಟಿಕೆ ಮಾಡ್ತಾರೆ. ಆದರೆ ರಾಜ್ಯದ ರೈತರು ನಿಮ್ಮ ಸರ್ಕಾರವನ್ನು ಕಿತ್ತು ಒಗೆಯುತ್ತಾರೆ. ಈ ಕಾನೂನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಗುಡುಗಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್ ,ಎಸ್ ಆರ್ ಪಾಟೀಲ್, ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ, ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಎಂ. ಪಿ. ಉಗ್ರಪ್ಪ, ಧ್ರುವನಾರಾಯಣ್, ಶಾಸಕ ಕೃಷ್ಣ ಬೈರೇಗೌಡ, ಯು ಟಿ ಖಾದರ್, ಮಾಜಿ ಸಚಿವೆ ಉಮಾಶ್ರೀ, ಜಯಮಾಲಾ ಸೇರಿ ಹಲವು ನಾಯಕರು ಭಾಗಿಯಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ