ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ

ಒಪ್ಪಂದ ಆಧಾರಿತ ಕೃಷಿಯ ಮೂಲಕ ರೈತರ ಬದುಕನ್ನು ನಾಶ ಮಾಡಲು ಸರ್ಕಾರ ಅವಕಾಶ ಮಾಡಿಕೊಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಕಾಂಗ್ರೆಸ್ ನಿಯೋಗ
ಕಾಂಗ್ರೆಸ್ ನಿಯೋಗ

ಬೆಂಗಳೂರು: ಒಪ್ಪಂದ ಆಧಾರಿತ ಕೃಷಿಯ ಮೂಲಕ ರೈತರ ಬದುಕನ್ನು ನಾಶ ಮಾಡಲು ಸರ್ಕಾರ ಅವಕಾಶ ಮಾಡಿಕೊಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೈ ನಾಯಕರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತರ ಪರವಾಗಿ ಇದ್ದೇನೆ ಎಂದು ಬೂಟಾಟಿಕೆ ಮಾಡ್ತಾರೆ. ಆದರೆ ರಾಜ್ಯದ ರೈತರು ನಿಮ್ಮ ಸರ್ಕಾರವನ್ನು ಕಿತ್ತು ಒಗೆಯುತ್ತಾರೆ. ಈ ಕಾನೂನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಗುಡುಗಿದರು.

ರೈತನ ಬದುಕು ಸೂರ್ಯ, ಭೂಮಿ, ನೀರನ್ನು ಮಾತ್ರ ಅವಲಂಬಿಸಿದೆ. ರೈತರಿಗೆ ಸರ್ಕಾರಿ ನೌಕರರಿಗೆ ಸಿಗುವಂತೆ ವೇತನವಾಗಲಿ, ಬೋನಸ್ ಆಗಲಿ, ಪಿಂಚಣೆಯಾಗಲಿ, ಕನಿಷ್ಟ ಲಂಚವೂ ಸಿಗುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ರೈತರಿಗೆ ಭೂಮಿ ಕೊಡುವ ಕೆಲಸ ಮಾಡಿದೆ, ಬಿಜೆಪಿ ಸರ್ಕಾರ ಭೂಮಿ ಕಸಿಯುವ ಕೆಲಸ ಮಾಡುತ್ತಿದೆ. ಬಡವರಿಗೆ ನಿವೇಶನ, ಭೂಮಿ ಕೊಡುವುದು, ನ್ಯಾಯಾಧೀಕರಣ  ರಚನೆ ಮಾಡುವುದು ಕಾಂಗ್ರೆಸ್‍ನ ಇತಿಹಾಸವಾದರೆ, ಬಿಜೆಪಿಯದು ಕಿತ್ತುಕೊಳ್ಳುವ ಇತಿಹಾಸ ಎಂದು ಕಿಡಿ ಕಾರಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ,  ಎಸ್.ಆರ್.ಪಾಟೀಲ್, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಯು.ಟಿ.ಖಾದರ್, ಉಮಾಶ್ರೀ, ಕೆಪಿಸಿಸಿ ಕಾಯಾಧ್ಯಕ್ಷ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಸತೀಶ ಜಾರಕಿಹೊಳಿ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ದೃವನಾರಾಯಣ್, ಬಿ.ಕೆ.ಹರಿಪ್ರಸಾದ್, ವಿ.ಎಸ್.ಉಗ್ರಪ್ಪ, ಚಂದ್ರಪ್ಪ, ಶಾಸಕ ಅಜಯ್‍ಸಿಂಗ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆ ನಂತರ ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ ಸೋಮವಾರ ರಾಜ್ಯಪಾಲರಿಗೆ ಮನವಿ ಮಾಡಿದೆ. ಸೋಮವಾರ ಮಧ್ಯಾಹ್ನ ರಾಜ್ಯಪಾಲರ ಬಳಿಗೆ ನಿಯೋಗ ತೆರಳಿದ ಕಾಂಗ್ರೆಸ್‌ ಈ ಸಂಬಂಧ ಮನವಿ ಸಲ್ಲಿಸಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ನಿಯೋಗದಲ್ಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com