15 ದಿನದೊಳಗೆ ಶಿರಾ ಉಪ ಚುನಾವಣಾ ಅಭ್ಯರ್ಥಿ ಘೋಷಣೆ: ನಳಿನ್ ಕುಮಾರ್ ಕಟೀಲ್
ಬೆಳಗಾವಿ: ಹತ್ತರಿಂದ ಹದಿನೈದು ದಿನಗಳಲ್ಲಿ ಶಿರಾ ಉಪ ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಂಗಳವಾರ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣಾ ಕೆಲಸ ಈಗಾಗಲೇ ಆರಂಭವಾಗಿದೆ. ಪಕ್ಷ ಹಾಗೂ ಚುನಾವಣಾ ಸಂಘಟನಾತ್ಮಕ ದೃಷ್ಠಿಯಿಂದ ಸಾಕಷ್ಟು ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಶಿರಾದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ವಾತಾವರಣ ಕಂಡು ಬರುತ್ತಿದ್ದು, ಮುಂದಿನ ಹತ್ತು ಹದಿನೈದು ದಿನಗಳೊಳಗೆ ಟಿಕೆಟ್ ಘೋಷಣೆ ಮಾಡಲಾಗುವುದು ಎಂದರು.
ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಟಿಕೆಟ್ ವಿಚಾರದಲ್ಲಿ ಪಕ್ಷವು ಎಲ್ಲಾ ರೀತಿಯ ಬೆಳವಣಿಗೆಗಳನ್ನು ಗಮನಿಸಿ ತೀರ್ಮಾನ ಮಾಡಲಿದೆ. ಈಗಾಗಲೇ ನಾಲ್ಕೈದು ಆಕಾಂಕ್ಷಿಗಳ ಹೆಸರಿದ್ದು, ಎಲ್ಲವನ್ನೂ ಪರಿಶೀಲನೆ ನಡೆಸುತ್ತಿದ್ದೇವೆ. ಅಂತಿಮವಾಗಿ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದು ನಳಿನ್ ಕುಮಾರ್ ಹೇಳಿದರು.
ಇನ್ನು ನಿನ್ನೆಯ ಬಂದ್‌ಗೆ ಬೆಂಬಲ ಸೂಚಿಸಿ ಕಾಂಗ್ರೆಸ್‌ನವರು ಕಿಚ್ಚು ಹಚ್ಚುವ ಪ್ರಯತ್ನ ಮಾಡಿದ್ದಾರೆ ಎಂದ ಕಟೀಲ್, ಬಂದ್ ವಿಫಲವಾಗಿದೆ, ರಾಜ್ಯದ ಜನರು ಕೇಂದ್ರ, ರಾಜ್ಯ ಸರಕಾರದ ಪರವಾಗಿ ನಿಂತಿದ್ದಾರೆ ಎಂದರು. ಅಲ್ಲದೇ ಕಾಂಗ್ರೆಸ್ ರೈತ ವಿರೋಧಿಯಾಗಿದೆ. ಅಧಿಕಾರ ಕಳೆದುಕೊಂಡಾಗ ಬೆಂಕಿ ಹಚ್ಚುವ ಕಲಸ ಕಾಂಗ್ರೆಸ್ ಹಿಂದೆಯೂ ಮಾಡಿದೆ. ಮುಂದೆಯೂ ಮಾಡುತ್ತಿರುತ್ತೆ ಎಂದು ಕಿಡಿಕಾರಿದರು.


