ಪರಿಷತ್ ನಲ್ಲಿ ಪಾಸಾಗದ ಮಸೂದೆ: ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ; ಹೊಸ ಅಧ್ಯಕ್ಷರ ನೇಮಕ?
ಬೆಂಗಳೂರು: ಬಿಜೆಪಿ ಸರ್ಕಾರದ ಉದ್ದೇಶಿತ ಭೂ ಸುಧಾರಣಾ ತಿದ್ದುಪಡಿ ಕಾಯಿದೆ ವಿಧಾನ ಪರಿಷತ್ ನಲ್ಲಿ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಪರಿಷತ್ ಗೆ ಹೊಸ ಸಭಾಪತಿ ಆಯ್ಕೆ ಮಾಡಲು ಚಿಂತಿಸಿದೆ ಎಂದು ಮೂಲಗಳು ತಿಳಿಸಿವೆ, ಮಸೂದೆ ಪಾಸ್ ಮಾಡಿಕೊಳ್ಳುವ ಉದ್ದೇಶದಿಂದ ಜೆಡಿಎಸ್ ಗೆ ಸಭಾಪತಿ ಸ್ಥಾನ ನೀಡಲು ಬಿಜೆಪಿ ಸಿದ್ಧವಿದೆ ಎಂದು ಹೇಳಲಾಗುತ್ತಿದೆ.
ಅಧ್ಯಕ್ಷರ ಅಧಿಕಾರಾವಧಿ ಮುಗಿಯುವ ಮೊದಲು ಹೊಸ ಅಧ್ಯಕ್ಷ ಅಥವಾ ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಸ್ತಾಪವನ್ನು ಬಿಜೆಪಿ ಮಾಡಬೇಕಾದರೇ ಬಿಜೆಪಿಗೆ ಬಹುಮತ ಇರಬೇಕು, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಬಿಜೆಪಿಗೆ ಅಗತ್ಯ ಸಂಖ್ಯೆ ಸಿಗುತ್ತದೆ.
ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಾಲಿ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ನೇಮಿಸಲಾಗಿತ್ತು, ಹೀಗಾಗಿ ಸಭಾಪತಿಗಳು ಕಾಂಗ್ರೆಸ್ ಪರವಾಗಿದ್ದಾರೆ, ಹೀಗಾಗಿ ಮಸೂದೆ ಪಾಸು ಮಾಡಲು ಅವಕಾಶ ನೀಡಲಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಎಪಿಎಂಸಿ ತಿದ್ದುಪಡಿ ಕಾಯಿದೆ, ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯಿದೆ,ಕೈಗಾರಿಕಾ ಮಸೂದೆ, ವಿಧಾನಸಭೆಯಲ್ಲಿ ಅಂಗೀಕಾರಗೊಂಡಿವೆ, ಆದರೆ ಪರಿಷತ್ ನಲ್ಲಿ ವಿಫಲವಾಗಿವೆ.
ವಿಧಾನ ಪರಿಷತ್ ನಲ್ಲಿದ್ದ 40 ಎಂ ಎಲ್ ಸಿಗಳಿದ್ದರು, ಈ ವೇಳೆ ಕೈಗಾರಿಕಾ ಮಸೂದೆಯನ್ನು ಮತಕ್ಕೆ ಹಾಕಲಾಯಿತು.ಮಸೂದೆಗೆ ಪರವಾಗಿ 14 ಮತಗಳು ಹಾಗೂ ಮಸೂದೆ ವಿರೋಧಿಸಿ ಜೆಡಿಎಸ್ ಸದಸ್ಯರು ಸೇರಿದಂತೆ ಒಟ್ಟು 26 ಸದಸ್ಯರು ವಿರೋಧವಾಗಿ ಮತ ಚಲಾಯಿಸಿದರು, ಮಧ್ಯರಾತ್ರಿ 1 ಗಂಟೆವರೆಗೂ ಚರ್ಚೆ ನಡೆಯಿತು.
ಶೀಘ್ರದಲ್ಲೇ ಸಿಎಂ ಯಡಿಯೂರಪ್ಪ ಅವರು ಸಭೆ ನಡೆಸಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಿದ್ದಾರೆ. ಸದ್ಯ ಕೌನ್ಸಿಲ್ ನಲ್ಲಿ 71 ಸದಸ್ಯರಿದ್ದು, ಕಾಂಗ್ರೆಸ್-29, ಜೆಡಿಎಸ್ 17 ಮತ್ತು ಬಿಜೆಪಿ 27 ಸದಸ್ಯರಿದ್ದಾರೆ.ಉಳಿದ ಸೀಟುಗಳಿಗೆ ಅಕ್ಟೋಬರ್ 28 ರಂದು ಚುನಾವಣೆ ನಡೆಯಲಿದೆ.
ಸಭಾಪತಿ ಆಯ್ಕೆ ಸಂಬಂಧ ಜೆಡಿಎಸ್ ಪಕ್ಷವನ್ನು ಸಂಪರ್ಕಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಬಿಜೆಪಿ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ