ಗ್ರಾಮ ಪಂಚಾಯತ್ ಎರಡನೇ ಹಂತದ ಮತದಾನ ಪ್ರಗತಿಯಲ್ಲಿ, ಮಧ್ಯಾಹ್ನ 1 ಗಂಟೆ ವೇಳೆಗೆ ಸರಾಸರಿ ಶೇ. 52ರಷ್ಟು ಮತದಾನ 

ರಾಜ್ಯದ 2,709 ಗ್ರಾಮ ಪಂಚಾಯತ್ ಗಳಿಗೆ ಎರಡನೇ ಹಂತದ ಚುನಾವಣೆಗೆ ಮತದಾನ ಪ್ರಗತಿಯಲ್ಲಿದೆ. ಮೊದಲ ಆರು ಗಂಟೆಯಲ್ಲಿ ಸರಾಸರಿ ೫೨ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.
ಮತಗಟ್ಟೆಗಳ ಮುಂದೆ ಮತದಾರರು ನಿಂತಿರುವುದು
ಮತಗಟ್ಟೆಗಳ ಮುಂದೆ ಮತದಾರರು ನಿಂತಿರುವುದು

ಬೆಂಗಳೂರು: ರಾಜ್ಯದ 2,709 ಗ್ರಾಮ ಪಂಚಾಯತ್ ಗಳಿಗೆ ಎರಡನೇ ಹಂತದ ಚುನಾವಣೆಗೆ ಮತದಾನ ಪ್ರಗತಿಯಲ್ಲಿದೆ. ಮೊದಲ ಆರು ಗಂಟೆಯಲ್ಲಿ ಸರಾಸರಿ ೫೨ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ದಾವಣಗೆರೆ ಜಿಲ್ಲೆಯ ಮೂರು ತಾಲೂಕಿನ ೧೦೧ ಗ್ರಾಮ ಪಂಚಾಯತಿಗಳಲ್ಲಿ ಮಧ್ಯಾಹ್ನ ೧ ಗಂಟೆ ವೇಳೆಗೆ ಶೇಕಡವಾರು ೪೨.೬೨ ರಷ್ಟು ಹಕ್ಕು ಚಲಾವಣೆಯಾಗಿದೆ ಎಂದು ತಿಳಿದುಬಂದಿದೆ.

ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮ ಪಂಚಾಯಿತಿ ಮತಗಟ್ಟೆಯೊಂದರಲ್ಲಿ ಅಭ್ಯರ್ಥಿಯ ಚಿಹ್ನೆ ಬದಲಾಗಿದ್ದು, ಅಲ್ಲಿನ ಮತದಾನವನ್ನು ಇದೇ 29ಕ್ಕೆ ಮುಂದೂಡಲಾಗಿದೆ. ಕಲಾದಗಿ ಗ್ರಾಮ ಪಂಚಾಯತ್‌ನ ವಾರ್ಡ್ ನಂ.11ರ ಮತಗಟ್ಟೆ ಸಂಖ್ಯೆ 51ರಲ್ಲಿನ ಬ್ಯಾಲೆಟ್ ಪೇಪರ್ ಗಳಲ್ಲಿ ಈ ಎಡವಟ್ಟು ಕಂಡು ಬಂದಿದ್ದು, ಅಲ್ಲಿನ ಮತದಾನ ಸ್ಥಗಿತಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಆದೇಶಿಸಿದ್ದಾರೆ.

ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಯಲ್ವಾರ್ ಗ್ರಾಮದಲ್ಲಿ ಇಂದು ಮದುವೆಯಾದ ನವ ದಂಪತಿ ಕಲ್ಯಾಣ ಮಂಟಪದಿಂದ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿ ಗಮನ ಸೆಳೆದರು.

ಶಿವಮೊಗ್ಗ ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇಕಡಾ 46.47ರಷ್ಟು ಮತದಾನವಾಗಿದೆ. ಬಾಗಲಕೋಟೆಯಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇಕಡಾ 55.04ರಷ್ಟು ಮತದಾನವಾಗಿದೆ, ಗದಗ ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶೇಕಡಾ 44.51ರಷ್ಟು, ವಿಜಯಪುರದಲ್ಲಿ ಶೇಕಡಾ 34.53ರಷ್ಟಾಗಿದೆ. 

ಹಲವು ಮತಗಟ್ಟೆಗಳಿಗೆ ಅಶಕ್ತರು, ಅಂಗವಿಕಲರು, ವಯೋವೃದ್ಧರು ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿರುವ ಮತದಾನ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ಸಂಜೆ 5ರಿಂದ 6 ಗಂಟೆವರೆಗೆ ಕೋವಿಡ್ ಸೋಂಕಿತರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com