ಸರಳ-ಸಜ್ಜನ ರಾಜಕಾರಣಿ ಧರ್ಮೇಗೌಡ: ಸರಪನಹಳ್ಳಿಯಿಂದ ವಿಧಾನ ಪರಿಷತ್ ಉಪಸಭಾಪತಿವರೆಗೆ 3 ದಶಕಗಳ ಪಯಣ

ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಈ ಅನಿರೀಕ್ಷಿತ ಸಾವು ರಾಜ್ಯ ರಾಜಕಾರಣದಲ್ಲಿ ಆಘಾತ ಉಂಟು ಮಾಡಿದೆ, ಎಲ್ಲಾ ಪಕ್ಷಗಳ ನಾಯಕರೊಂದಿಗೂ ಧರ್ಮೇಗೌಡ ಉತ್ತಮ ಬಾಂಧವ್ಯ ಹೊಂದಿದ್ದರು.
ಧರ್ಮೇಗೌಡ
ಧರ್ಮೇಗೌಡ

ಬೆಳಗಾವಿ: ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಈ ಅನಿರೀಕ್ಷಿತ ಸಾವು ರಾಜ್ಯ ರಾಜಕಾರಣದಲ್ಲಿ ಆಘಾತ ಉಂಟು ಮಾಡಿದೆ, ಎಲ್ಲಾ ಪಕ್ಷಗಳ ನಾಯಕರೊಂದಿಗೂ ಧರ್ಮೇಗೌಡ ಉತ್ತಮ ಬಾಂಧವ್ಯ ಹೊಂದಿದ್ದರು.

1985 ರಲ್ಲಿ ಬಿಲಿಕಳ್ಳಹಳ್ಳಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜಕೀಯ ಪ್ರವೇಶಿಸಿದ ಧರ್ಮೇಗೌಡ ಹಿಂತಿರುಗಿ ನೋಡಿಯೇ ಇಲ್ಲ, ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಿದ್ದರೂ ಜೆಡಿಎಸ್ ಪಕ್ಷಕ್ಕೆ ಇಡೀ ಕುಟುಂಬವೇ ನಿಷ್ಠೆಯಿಂದಿತ್ತು. ಅವರ ತಂದೆ ಲಕ್ಷ್ಮಯ್ಯ 1983 ರಲ್ಲಿ ಮೊದಲ ಬಾರಿಗೆ ಬೀರೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ 1985 ಮತ್ತು 1994 ರಲ್ಲಿಯೂ ಶಾಸಕರಾಗಿ ಗೆದ್ದಿದ್ದರು.

ಇದೇ ವೇಳೆಗೆ ರಾಜಕೀದಲ್ಲಿ ಸಕ್ರಿಯವಾಗಿದ್ದ ಧರ್ಮೇಗೌಡ ಪಂಚಾಯಿತಿ ಮತ್ತು ಚಿಕ್ಕಮಗಳೂರು ಭಾಗದ ಸಹಕಾರ ಕ್ಷೇತ್ರದಲ್ಲಿ ತಮ್ಮ ತಂದೆಯ ಮಾರ್ಗದರ್ಶನದಂತೆ ನಡೆಯುತ್ತಿದ್ದರು.ತಳಮಟ್ಟದಲ್ಲಿ ಜನಪ್ರಿಯ ನಾಯಕರಾಗಿ, ಅವರು ಎರಡು ಬಾರಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಲು ಗ್ರಾಮೀಣ ಜನರ ಬೆಂಬಲ ಕಾರಣವಾಗಿತ್ತು. ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ಅಧ್ಯಕ್ಷ, ಬಿಳೇಕಲ್ಲಹಳ್ಳಿ ಎಂಪಿಸಿಎಸ್ ಅಧ್ಯಕ್ಷರಾಗಿ, ಹಾಸನ ಹಾಲು ಒಕ್ಕೂಟದ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯ ಅಧ್ಯಕ್ಷರಾಗಿ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ, ಚಿಕ್ಕಮಗಳೂರು ಜನತಾ ಬಜಾರ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ, ವಿಮಾ ಸಹಕಾರ ಸಂಘದ ನಿರ್ದೇಶಕ, ರಾಜ್ಯ ಕೈಗಾರಿಕಾ  ಬ್ಯಾಂಕ್ ನಿರ್ದೇಶಕ, ಹೊಸದಿಲ್ಲಿಯ ಕ್ರಿಬ್ಕೊ ಸಂಸ್ಥೆ ನಿರ್ದೇಶಕ, ನ್ಯಾಫೆಡ್ ಸಂಸ್ಥೆ ನಿರ್ದೇಶಕ, ಇಂಡಿಯನ್ ಪೊಟಾಷ್ ಲಿಮಿಟೆಡ್ ನಿರ್ದೇಶಕ, ಎನ್‍ಸಿಡಿಸಿ ನಿರ್ದೇಶಕರಾಗಿ ರಾಜ್ಯ,  ರಾಷ್ಟ್ರ ಮಟ್ಟದಲ್ಲಿ ರೈತರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಮಾಡಿದ್ದರು.

ಬೀರೂರು ವಿಧಾನಸಭಾ ಕ್ಷೇತ್ರದಿಂದ ಜನತಾ ದಳದಿಂದ ಒಂದು ಬಾರಿ ಶಾಸಕರಾಗಿದ್ದರು. ನಂತರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸಿ.ಟಿ.ರವಿ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಬೀರೂರು ಕ್ಷೇತ್ರ ಮಾಯವಾದ ಮೇಲೆ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಸಾಕಷ್ಟು ಪರದಾಡಿದ್ದರು. ಜೆಡಿಎಸ್-ಕಾಂಗ್ರೆಸ್
ಮೈತ್ರಿ ಸರಕಾರ ರಚನೆಯಾದ ನಂತರ ಕುಮಾರಸ್ವಾಮಿ ಎಸ್.ಎಲ್.ಧರ್ಮೇಗೌಡ ಅವರನ್ನು ವಿಧಾನ ಪರಿಷತ್‍ಗೆ ನೇಮಕ ಮಾಡಿದ್ದರು. ನಂತರ ಉಪ ಸಭಾಪತಿ ಸ್ಥಾನವೂ ದಕ್ಕಿತ್ತು. ಅವರ ಸಹೋದರ ಎಸ್ ಎಲ್ ಭೋಜೆಗೌಡರನ್ನು ಚಿಕ್ಕಮಗಳೂರಿನ ಶಿಕ್ಷಕರ ಕ್ಷೇತ್ರದಿಂದ ಎಂಎಲ್ಸಿಯಾಗಿ ಆಯ್ಕೆ ಮಾಡಿದರು.

ವಿವಿಧ ಪಕ್ಷಗಳ ಮುಖಂಡರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರಿಂದ ಅವರನ್ನು ವಿಧಾನ ಪರಿಷತ್ ಉಪ ಸಭಾಪತಿಯಾಗಿ ನೇಮಕ ಮಾಡಲು ಸಾಧ್ಯವಾಗಿತ್ತು. ಸಮ್ಮಿಶ್ರ ಸರ್ಕಾರದ ಪತನದ ನಂತರವೂ ಅವರನ್ನು ಅದೇ ಹುದ್ದೆಯಲ್ಲಿ ಉಳಿಸಿಕೊಳ್ಳಲಾಯಿತು. ಧರ್ಮಗೌಡರೊಂದಿಗಿನ ಅವರ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡ ಎಂಎಲ್ ಸಿ ಬಸವರಾಜ್ ಹೊರಟ್ಟಿ, ಅವರು ಸಹಕಾರಿ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ ಮತ್ತು ಹಲವಾರು ದಶಕಗಳವರೆಗೆ ತಳಮಟ್ಟದಲ್ಲಿ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದರು ಎಂದು ಹೇಳಿದ್ದಾರೆ.

ಇತ್ತೀಚೆಗೆ ಪರಿಷತ್ ನಲ್ಲಿ ನಡೆದ ಘಟನೆಯಿಂದ ಅವರು ವಿಚಲಿತರಾಗಿದ್ದರು, ಅವರ ಸಾವಿನ ಸಂಬಂಧ ತನಿಖೆ ನಡೆಸಬೇಕು ಎಂದು ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ, ಇನ್ನೂ ಡೆತ್ ನೋಟ್ ನಲ್ಲಿ ಏನಿದೆ ಎಂಬುದನ್ನು ಸರ್ಕಾರ ಬಹಿರಂಗ ಪಡಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com