ಚರ್ಚೆಗೆ ಅವಕಾಶ ನೀಡದ ರಾಕ್ಷಸ  ಸರ್ಕಾರ ಇದು: ಸ್ಪೀಕರ್ ವಿರುದ್ಧ ಸಿದ್ದರಾಮಯ್ಯ ಕಿಡಿ

ಕೊರೋನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಒಂಭತ್ತು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳುತ್ತಾರೆ. ಮತ್ತೊಂದು ಕಡೆ ಸಾರಿಗೆ ಬಸ್‌ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಕೊರೋನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಒಂಭತ್ತು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳುತ್ತಾರೆ. ಮತ್ತೊಂದು ಕಡೆ ಸಾರಿಗೆ ಬಸ್‌ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ಸರ್ಕಾರ ಇದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಆದ್ದರಿಂದ ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಆಗ್ರಹಿಸಿದರು.

ಶೂನ್ಯವೇಳೆಯಲ್ಲಿ ಎಚ್.ಕೆ.ಪಾಟೀಲ್ ವಿಷಯ ಪ್ರಸ್ತಾಪಿಸಲು ಎದ್ದು ನಿಂತು, ಕೊರೋನಾ ವಿಷಯದಲ್ಲಿ ನಿಲುವಳಿ ಸೂಚನೆಯಡಿ ಚರ್ಚಿಸಲು ವಿರೋಧ ಪಕ್ಷದ ನಾಯಕರು ಹಾಗೂ ತಾವು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದೆವು. 

ಆದರೆ ಸರಿಯಾದ ಸಮಯಕ್ಕೆ ನೋಟಿಸ್ ತಲುಪಿಸಲು ಸಾಧ್ಯವಾಗಿಲ್ಲ. ಆದರೆ ನೋಟಿಸ್ ಸರಿಯಾದ ಸಮಯಕ್ಕೆ ಬಂದಿಲ್ಲ ಎಂಬ ಕಾರಣ ಮುಂದಿಟ್ಟು ಚರ್ಚೆಗೆ ಅವಕಾಶ ನೀಡದಿರುವುದು ಸರಿಯಲ್ಲ ಎಂದು ಹೇಳಿದರು.

ಕೊರೋನಾ ರಾಜ್ಯದಲ್ಲಿ ವೇಗವಾಗಿ ಹಬ್ಬುತ್ತಿದೆ. ಇದು ಜನರ ಜೀವನದ ಪ್ರಶ್ನೆ, ಸದನ ನಡೆಯುತ್ತಿರುವಾಗ ಇದನ್ನು ಪ್ರಸ್ತಾಪ ಮಾಡದೆ ಇನ್ನೆಲ್ಲಿ ಪ್ರಸ್ತಾಪ ಮಾಡಬೇಕು, ಈಗಾಗಲೇ ರಾಜ್ಯದಲ್ಲಿ ಸೋಂಕಿತ ಸಂಖ್ಯೆ 30 ದಾಟಿದೆ. ಇಂತಹ ವಿಷಯಗಳಲ್ಲಿ ನಿಯಮವನ್ನು ಮುಂದಿಟ್ಟು ಚರ್ಚೆಗೆ ಅವಕಾಶ ನೀಡದಿರುವುದು ಸರಿಯಲ್ಲ. ಜನರ ಸಮಸ್ಯೆ ಬಿಗಡಾಯಿಸಿರುವಾಗ ನಿಯಮಾವಳಿಗಳನ್ನು ನೋಡಲು ಆಗುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಟ್ಯಾಕ್ಸಿ, ಆಟೋ ರಿಕ್ಷಾ ಚಾಲಕರು ಬೇಕಾಬಿಟ್ಟಿ ವಸೂಲಿ ಮಾಡುತ್ತಿದ್ದಾರೆ. ಈ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಸಚಿವರಾದ ಜೆ.ಸಿ.ಮಾಧುಸ್ವಾಮಿ, ಜಗದೀಶ್ ಶೆಟ್ಟರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ನಿಯಮಗಳ ಪ್ರಕಾರವೇ ಸದನ ನಡೆಯಬೇಕು ಎಂದು ಹೇಳಿದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಮಾತನಾಡಿ, ನಿಯಮಗಳ ಪ್ರಕಾರ ಪ್ರಸ್ತಾಪಿಸಬೇಕು, ನಿಯಮಗಳ ಪ್ರಕಾರ ಸದನ ನಡೆಯುತ್ತದೆ. ಆದ್ದರಿಂದ ಈ ಬಗ್ಗೆ ಪ್ರಸ್ತಾಪಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗಂಭೀರತೆಯ ಬಗ್ಗೆ ವಿಷಯದಲ್ಲಿ ಯಾರಲ್ಲೂ ಭಿನ್ನಾಭಿಪ್ರಾಯವಿಲ್ಲ. ಸಭಾಧ್ಯಕ್ಷನಾಗಿ ನಿಯಮಗಳ ಬಗ್ಗೆ ನಡೆಸಿಕೊಳ್ಳಬೇಕಾಗಿತ್ತು. ತಮ್ಮನ್ನು ಭೇಟಿಯಾಗಿ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ಕೋರಬಹುದಿತ್ತು. ಏನೂ ನೋಟಿಸ್‌ ಕೊಡದೆ ಏಕಾಏಕಿ ಎದ್ದುನಿಂತು ಹೇಳಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಚರ್ಚೆಗೆ ಅವಕಾಶ ನೀಡದ ಸರ್ಕಾರ ಏಕೆ ಬೇಕು? ಇದೊಂದು ರಾಕ್ಷಸ ಸರ್ಕಾರ ಎಂದು ಕಾಂಗ್ರೆಸ್ ಸದಸ್ಯ ರಾಮಲಿಂಗಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸದಸ್ಯರಾದ ದಿನೇಶ್ ಗುಂಡೂರಾವ್ ಸೇರಿ ಇತರ ಸದಸ್ಯರು ಕೂಡ ಇದಕ್ಕೆ ಧ್ವನಿಗೂಡಿಸಿದರು. ಆದರೆ ಸ್ಪೀಕರ್ ಅವಕಾಶ ನಿರಾಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com