ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವವರೆಗೂ ಹೋರಾಟ ಮಾಡುತ್ತೇನೆ: ರಮೇಶ್ ಜಾರಕಿಹೊಳಿ

ನನಗೆ ಸಿ.ಪಿ.ಯೋಗೇಶ್ವರ್ ತುಂಬಾ ಪರಿಚಯ ಹಾಗೂ ಆತ್ಮೀಯರು. ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ಹೋರಾಟ ಮಾಡುತ್ತೇನೆ. ಕೊನೆಯವರೆಗೂ ಅವರ ಪರ ಬ್ಯಾಟಿಂಗ್ ಮಾಡುತ್ತೇನೆ.

Published: 25th November 2020 02:59 PM  |   Last Updated: 25th November 2020 02:59 PM   |  A+A-


Ramesh jarkiholi

ರಮೇಶ್ ಜಾರಕಿಹೊಳಿ

Posted By : Lingaraj Badiger
Source : UNI

ಬೆಂಗಳೂರು: ನನಗೆ ಸಿ.ಪಿ.ಯೋಗೇಶ್ವರ್ ತುಂಬಾ ಪರಿಚಯ ಹಾಗೂ ಆತ್ಮೀಯರು. ಅವರಿಗೆ ಮಂತ್ರಿ ಸ್ಥಾನ ಕೊಡಿಸಲು ಹೋರಾಟ ಮಾಡುತ್ತೇನೆ. ಕೊನೆಯವರೆಗೂ ಅವರ ಪರ ಬ್ಯಾಟಿಂಗ್ ಮಾಡುತ್ತೇನೆ. ಆದರೆ ಸಚಿವ ಸ್ಥಾನ ನೀಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟಿದ್ದು. ಪಕ್ಷದ ಕೆಲವು ಶಾಸಕರು ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಅವರ ಪರವಾಗಿ ನಾನು ಕೆಲಸ ಮಾಡುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಹೇಳಿದ್ದಾರೆ.

ಸದಾಶಿವ ನಗರದ ತಮ್ಮ ನಿವಾಸದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹಾಗೂ ಬಿಜೆಪಿ ಹಿರಿಯ ನಾಯಕ ಪ್ರಭಾಕರ ಕೋರೆಯನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ಆದರೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಹಿತ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ ಎಂದು ಪರೋಕ್ಷವಾಗಿ ಮೂಲ ಬಿಜೆಪಿ ಶಾಸಕರಿಗೆ ತಿರುಗೇಟು ನೀಡಿದ್ದಾರೆ.
 
ರಮೇಶ್ ಜಾರಕಿಹೊಳಿ ಮೂಲ ಬಿಜೆಪಿಗರಿಗಿಂತ ಹೆಚ್ಚು ಸ್ಟ್ರಾಂಗ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನೇನು ಅಷ್ಟು ಶಕ್ತಿವಂತನಲ್ಲ. ಮಾಧ್ಯಮದವರೇ ಸೇರಿಕೊಂಡು ನನ್ನನ್ನು ಸ್ಟ್ರಾಂಗ್ ಮಾಡಿದ್ದೀರಿ. ನೀರಾವರಿ ಸಚಿವ ನಾನು, ನೀರಾವರಿ ಸಮಸ್ಯೆಗಳ ಬಗ್ಗೆ ಚರ್ಚಿಸಲು ಶಾಸಕರು ಬರ್ತಾರೆ ಅಷ್ಟೇ. ನಾನು ಉಪ ಮುಖ್ಯಮಂತ್ರಿ ಸ್ಥಾನವನ್ನು ಎಂದೂ ಕೇಳಿಲ್ಲ. ಮುಂದೆಯೂ ಕೇಳುವುದಿಲ್ಲ. ಮುಖ್ಯಮಂತ್ರಿಗಳು ನನಗೆ ವಿಶ್ವಾಸದಿಂದ ನೀರಾವರಿ ಖಾತೆ ಕೊಟ್ಟಿದ್ದಾರೆ. ಇದರಲ್ಲೇ ನಾನು ಬಹಳ ಸಂತೋಷದಿಂದ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಭಾಕರ್ ಕೋರೆ, ಜಿಲ್ಲೆಯ ನೀರಾವರಿ ಕಾಮಗಾರಿಗಳ ಬಗ್ಗೆ ಚರ್ಚಿಸಲು ರಮೇಶ್ ಜಾರಕಿಹೊಳಿ ಭೇಟಿ ಮಾಡಿದ್ದೇನೆ. ಯಾವ ರಾಜಕೀಯ ವಿಷಯಗಳ ಬಗ್ಗೆಯೂ ಅವರ ಜೊತೆ ಚರ್ಚೆ ಮಾಡಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಉತ್ತರಿಸಿದ ಅವರು, ನಾನು ಇನ್ನೂರಾಜಕೀಯದಿಂದ ನಿವೃತ್ತಿಯಾಗಿಲ್ಲ. ಪಕ್ಷ ನನಗೆ ಜವಾಬ್ದಾರಿ ಕೊಟ್ಟರೆ ನಾನು ನಿಭಾಯಿಸುತ್ತೇನೆ ಎಂದು ಹೇಳುವ ಮೂಲಕ ತಾವೂ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂಬುದನ್ನು ತಿಳಿಸಿದರು.

ಮರಾಠಿ ಪ್ರಾಧಿಕಾರದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ ಮರಾಠಿಗರು ಕನ್ನಡ ಮಾತನಾಡುತ್ತಿದ್ದಾರೆ. ಭಾಷೆ ಬೇರೆ ಜಾತಿ ಬೇರೆ. ರಮೇಶ್ ಜಾರಕಿಹೊಳಿ ಪುತ್ರ ಬೆಳಗಾವಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ವಿಷಯ ತಮಗೆ ಗೊತ್ತಿಲ್ಲ. ಸೋನಿಯಾ ಗಾಂಧಿ ಬೇಕಿದ್ದರೆ ಬಿಜೆಪಿಗೆ ಬರ್ತಾರೆ. ಆದರೆ ಪ್ರಕಾಶ್ ಹುಕ್ಕೇರಿ ಮಾತ್ರ ಬಿಜೆಪಿ ಗೆ ಬರೋದಿಲ್ಲ ಎಂದು ಪ್ರಭಾಕರ ಕೋರೆ ಹಾಸ್ಯ ಚಟಾಕಿ ಹಾರಿಸಿದರು.


Stay up to date on all the latest ರಾಜಕೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp