ಬೆಳಗಾವಿ ಲೋಕಸಭೆ, ಬಸವಕಲ್ಯಾಣ- ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಮತದಾನ ಪ್ರಗತಿಯಲ್ಲಿ

ಬೆಳಗಾವಿ ಲೋಕಸಭಾ ಕ್ಷೇತ್ರ, ಬೀದರ್ ನ ಬಸವಕಲ್ಯಾಣ ಮತ್ತು ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಬೆಳಗ್ಗೆ 7 ಗಂಟೆಗೆ ಉಪ ಚುನಾವಣೆಯ ಮತದಾನ ಆರಂಭವಾಗಿದೆ.
ಬೆಳಗಾವಿಯಲ್ಲಿ ತಮ್ಮ ಹಕ್ಕು ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಮತ್ತು ಸಾರ್ವಜನಿಕರು
ಬೆಳಗಾವಿಯಲ್ಲಿ ತಮ್ಮ ಹಕ್ಕು ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಮತ್ತು ಸಾರ್ವಜನಿಕರು
Updated on

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರ, ಬೀದರ್ ನ ಬಸವಕಲ್ಯಾಣ ಮತ್ತು ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಬೆಳಗ್ಗೆ 7 ಗಂಟೆಗೆ ಉಪ ಚುನಾವಣೆಯ ಮತದಾನ ಆರಂಭವಾಗಿದೆ.

ಇಂದು ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ಮತದಾನ ನಡೆಯಲಿದೆ. ಬೆಳಗ್ಗೆಯಿಂದ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಲು ಪ್ರಾರಂಭಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2 ಸಾವಿರದ 566 ಮತಗಟ್ಟೆಗಳನ್ನು ತೆರೆಯಲಾಗಿದ್ದು, 11 ಸಾವಿರದ 290 ಜನ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 41 ಸಾವಿರದ 535 ಮತದಾರರಿದ್ದು, 12 ಸಾವಿರದ 290 ವಿಶೇಷಚೇತನರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ. 7 ಸಾವಿರದ 925 ಸೇವಾ ಮತದಾರರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 18 ಲಕ್ಷದ 07 ಸಾವಿರದ 250 ಮತದಾರರಿದ್ದಾರೆ. ಅವರಲ್ಲಿ 9 ಲಕ್ಷದ 08 ಸಾವಿರದ 103 ಪುರುಷ ಮತ್ತು 8 ಲಕ್ಷದ 99 ಸಾವಿರದ 091 ಮಹಿಳಾ ಮತದಾರರಾಗಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಕೊರೋನಾ ಹೆಚ್ಚುವರಿ ಹಿನ್ನೆಲೆಯಲ್ಲಿ ಹೆಚ್ಚುವರಿ 62 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು 326 ಮತಗಟ್ಟೆಗಳ ಪೈಕಿ 95 ಸೂಕ್ಷ್ಮ ಮತ್ತು 23 ಸಾಮಾನ್ಯ ಮತಗಟ್ಟೆಗಳಾಗಿವೆ. ಬಸವಕಲ್ಯಾಣ ಕ್ಷೇತ್ರದಲ್ಲಿ 1 ಲಕ್ಷದ 14 ಸಾವಿರದ 794 ಮಹಿಳಾ ಮತದಾರರು, 1 ಲಕ್ಷದ 24 ಸಾವಿರದ 984 ಪುರುಷ ಮತದಾರರಿದ್ದಾರೆ. ಇತರೆ ನಾಲ್ವರು ಮತದಾರರು ಸೇರಿ ಈ ಕ್ಷೇತ್ರದಲ್ಲಿ ಒಟ್ಟು 2 ಲಕ್ಷದ 39 ಸಾವಿರದ 782 ಮತದಾರರಿದ್ದಾರೆ. 

ಚುನಾವಣಾ ಕರ್ತವ್ಯದಲ್ಲಿ ಒಟ್ಟು 1,568 ಸಿಬ್ಬಂದಿಯಿದ್ದು ಭದ್ರತೆಗೆ 20 ಪಿಎಸ್ ಐಗಳು, 5 ಸಿಪಿಐ, 2 ಡಿವೈಎಸ್ ಪಿಗಳನ್ನು ನಿಯೋಜಿಸಲಾಗಿದೆ. 50 ಹೋಂ ಗಾರ್ಡ್ಸ್, ಪ್ಯಾರಾ ಮಿಲಿಟರಿ ಫೋರ್ಸ್, ಡಿಆರ್ ತುಕುಡಿ, 6 ಕೆಎಸ್ ಆರ್ ಪಿ ತುಕುಡಿ ಸೇರಿದಂತೆ ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಟ್ಟು 40 ಮತಗಟ್ಟೆಗಳಲ್ಲಿ 50 ಮೈಕ್ರೋ ವೀಕ್ಷಕರ ನೇಮಕ ಮಾಡಲಾಗಿದ್ದು 163 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಂಗ್ರೆಸ್ ನ ಮಲ್ಲಮ್ಮ ನಾರಾಯಣರಾವ್ ಮತ್ತು ಬಿಜೆಪಿಯ ಶರಣು ಸಲಗಾರ ಸೇರಿ 12 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 

ರಾಯಚೂರಿನ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸಹ ಮತದಾನ ಪ್ರಗತಿಯಲ್ಲಿದೆ. ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಕೋವಿಡ್ ಪ್ರಕರಣಗಳು ಹೆಚ್ಚಾಗಿರುವುದರಿಂದ ಮತದಾರರು ಅಂತರ ಕಾಯ್ದುಕೊಂಡು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಬೇಕಿದೆ. ಮತದಾನ ಅವಧಿಯನ್ನು ಒಂದು ಗಂಟೆ ಕಾಲ ಹೆಚ್ಚಿಸಲಾಗಿದೆ.

ಬೆಳಗಾವಿಯ ಸದಾಶಿವ ನಗರ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ನನ್ನ ಪರವಾಗಿ ಪ್ರಚಾರ ಮಾಡಿದ್ದು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು. ಅವರೊಂದಿಗೆ ಅವರ ಪುತ್ರಿಯರಾದ ಶ್ರದ್ಧಾ ಅಂಗಡಿ ಮತ್ತು ಡಾ ಸ್ಫೂರ್ತಿ ಪಾಟೀಲ ಕೂಡ ಇದ್ದರು.

ಮಾಸ್ಕ್ ಬದಲು ಸೀರೆ ಪಲ್ಲು, ಶಾಲು: ಎಲ್ಲೆಡೆ ಕೊರೋನಾ ವೈರಸ್ ಇರುವುದರಿಂದ ಮಾಸ್ಕ್ ಹಾಕಿಕೊಂಡು ಹೊರಗೆ ಓಡಾಡಬೇಕೆಂಬುದು ಕಡ್ಡಾಯ. ಆದರೆ ಬೆಳಗಾವಿ ಜಿಲ್ಲೆಯ ತಮ್ಮರಗುಡಿ ಗ್ರಾಮದ ಸರ್ಕಾರಿ ಶಾಲೆಗೆ ಮತ ಚಲಾಯಿಸಲು ಬಂದ ಮತದಾರರು ಸೀರೆಯ ಸೆರಗು ಮತ್ತು ಶಾಲುಗಳನ್ನು ಬಾಯಿ, ಮೂಗಿಗೆ ಮುಚ್ಚಿಕೊಂಡು ಬಂದಿದ್ದರು. ಗ್ರಾಮಾಂತರ ಪ್ರದೇಶದ ಹಲವು ಮತಗಟ್ಟೆಗಳಲ್ಲಿ ಇದೇ ರೀತಿಯ ವಾತಾವರಣ ಕಂಡುಬಂತು. 

ಮೇ 2ರಂದು ಫಲಿತಾಂಶ ಪ್ರಕಟವಾಗಲಿದ್ದು ಸೋಲು, ಗೆಲುವಿನ ಲೆಕ್ಕಾಚಾರ ಕುತೂಹಲಕ್ಕೆ ತೆರೆಬೀಳಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com