ಇನ್ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಆತ್ಮತೃಪ್ತಿಯಿಂದ ನಿವೃತ್ತಿಯಾಗುತ್ತಿದ್ದೇನೆ: ವಿ ಶ್ರೀನಿವಾಸ್ ಪ್ರಸಾದ್ ಘೋಷಣೆ

ಸಕ್ರಿಯ ರಾಜಕಾರಣಕ್ಕೆ ಚಾಮರಾಜನಗರ ಕ್ಷೇತ್ರದ ಸಂಸದ ವಿ ಶ್ರೀನಿವಾಸ್ ಪ್ರಸಾದ್ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನನ್ನ ಮಾತಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ.
ವಿ ಶ್ರೀನಿವಾಸ್ ಪ್ರಸಾದ್(ಸಂಗ್ರಹ ಚಿತ್ರ)
ವಿ ಶ್ರೀನಿವಾಸ್ ಪ್ರಸಾದ್(ಸಂಗ್ರಹ ಚಿತ್ರ)

ಮೈಸೂರು: ಸಕ್ರಿಯ ರಾಜಕಾರಣಕ್ಕೆ ಚಾಮರಾಜನಗರ ಕ್ಷೇತ್ರದ ಸಂಸದ ವಿ ಶ್ರೀನಿವಾಸ್ ಪ್ರಸಾದ್ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ನನ್ನ ಮಾತಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ವಿಶೇಷವಾಗಿ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿರುವ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಹುಟ್ಟಿದ ದಿನವಾದ ಇಂದು ಅಂದರೆ ಆಗಸ್ಟ್ 6ರಂದು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ನನ್ನ ಆತ್ಮತೃಪ್ತಿಯಿಂದಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತಿದ್ದೇನೆ, ಈ ಬಗ್ಗೆ ಬೇಸರವಿಲ್ಲ, ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, 14 ಬಾರಿ ಚುನಾವಣೆಯಲ್ಲಿ ನಿಂತು ನನಗೆ ಸಾಕು ಅನಿಸಿದೆ. ನಾಲ್ಕು ವರ್ಷದ ಹಿಂದೆಯೇ ನಾನು ನಿವೃತ್ತಿ ಬಯಸಿದ್ದೆ. ಆದರೆ ರಾಜಕೀಯ ಬೆಳವಣಿಗೆಗಳು ಬೇರೆ ತಿರುವು ಪಡೆದ ಕಾರಣ ಸ್ಪರ್ಧೆ ಮಾಡಬೇಕಾಯಿತು. ಈಗ ನಾನು ಚುನಾವಣಾ ರಾಜಕೀಯದಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದೇನೆ, ನನ್ನ ನಿರ್ಧಾರವನ್ನು ಬದಲಿಸುವುದೂ ಇಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಕಾಂಗ್ರೆಸ್​ ಪಕ್ಷದ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಇನ್ನು ಕೆಲವು ನಾಯಕರೊಂದಿಗೆ ಮನಸ್ತಾಪ ಉಂಟಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ವಿ.ಶ್ರೀನಿವಾಸ ಪ್ರಸಾದ್ ಚಾಮರಾಜನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದರು.

ಇದು ನನ್ನ ಅಂತಿಮ ನಿಲುವು ಯಾವುದೇ ಕಾರಣಕ್ಕೂ ಇನ್ನು ಮುಂದೆ ನಾನು ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ. ಈ‌ ಮಾತಿನಿಂದ ಹಿಂದೆ ಸರಿಯುವುದೂ ಇಲ್ಲ ಎಂದು ಹೇಳಿದ್ದಾರೆ. ನಾನು ಆತ್ಮತೃಪ್ತಿಯಿಂದ ನಿವೃತ್ತಿಯಾಗುತ್ತಿದ್ದೇನೆ. 50 ವರ್ಷದ ನನ್ನ ರಾಜಕೀಯ ಜೀವನದ ಪುಸ್ತಕ ಬಿಡುಗಡೆಯಾಗಲಿದ್ದು, ಅದರಲ್ಲಿ ನನ್ನ ರಾಜಕೀಯ ಜೀವನದ ಎಲ್ಲಾ ಏಳು ಬೀಳುಗಳನ್ನು ದಾಖಲಿಸಿದ್ದೇನೆ ಎಂದು ಸಹ ಪ್ರಕಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com