ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ಬರಬೇಕಿದ್ದ ಹಣ ತಡೆಹಿಡಿದಿದ್ದು ನಿಜ: ಸಿದ್ದರಾಮಯ್ಯ

15ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ ಕರ್ನಾಟಕಕ್ಕೆ ಬರಬೇಕಿದ್ದ 5495 ಕೋಟಿ ರೂ.ಗಳನ್ನು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ತಡೆ ಹಿಡಿದಿದ್ದು ನಿಜ. ಇದು ಆಯೋಗವೇ ನೀಡಿದ ಮಾಹಿತಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
Updated on

ಬೆಂಗಳೂರು:  15ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ ಕರ್ನಾಟಕಕ್ಕೆ ಬರಬೇಕಿದ್ದ 5495 ಕೋಟಿ ರೂ.ಗಳನ್ನು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ತಡೆ ಹಿಡಿದಿದ್ದು ನಿಜ. ಇದು ಆಯೋಗವೇ ನೀಡಿದ ಮಾಹಿತಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಆಯೋಗ ಶಿಫಾರಸು ಮಾಡಿದ ಅನುದಾನದಲ್ಲಿ ಒಂದೇ ಒಂದು ರೂಪಾಯಿ ಕರ್ನಾಟಕಕ್ಕೆ ಕೊಟ್ಟಿಲ್ಲ. ಕೊಟ್ಟಿದ್ದರೆ ದಾಖಲೆ ತೋರಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

ರಾಜಾಜಿನಗರ ವಿಧಾನಸಭೆ ಕ್ಷೇತ್ರದ ಮಂಜುನಾಥ ನಗರದಲ್ಲಿ ಶನಿವಾರ ದಿನಸಿ ಕಿಟ್‍ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಿದ್ದರಾಮಯ್ಯ ಅವರು ಮಾತನಾಡಿದರು.

ನಿರ್ಮಲಾ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ದೇಶದ ಹಣಕಾಸು ಸಚಿವರಾಗಿ ಅವರು ತವರು ರಾಜ್ಯಕ್ಕೇ ಅನುದಾನ ಕೊಡುವುದಿಲ್ಲ ಎಂದರೆÀ ಕೇಂದ್ರದಲ್ಲಿ ಮಂತ್ರಿಯಾಗಲು ಅವರಿಗೆ ಯೋಗ್ಯತೆ ಇದೆಯೇ ? ಎಂದು ಪ್ರಶ್ನಿಸಿದರು.

ಹಣಕಾಸು ಆಯೋಗ ಶಿಫಾರಸು ಮಾಡಿದ ಪ್ರಕಾರ ರಾಜ್ಯಕ್ಕೆ ಹಣ ಕೊಟ್ಟಿದ್ದಾರೆ ಅದು ರಾಜ್ಯ ಸರ್ಕಾರದ ಭೊಕ್ಕಸ ಸೇರಿದ್ದರೆ ಕೊರೊನಾದ ಸಂಕಷ್ಟದ ಕಾಲದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಡವರಿಗಾಗಿ ಖರ್ಚು ಮಾಡಬಹುದಿತ್ತು.

ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್ ಮೇಲೆ ತೆರಿಗೆ 3.45 ರೂ. ಇತ್ತು. ಈಗ 31.84 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಪೆಟ್ರೋಲ್ ಮೇಲಿನ ತೆರಿಗೆ 9.20 ರೂ.ಗಳಿಂದ. 32.98 ರೂ. ಗಳಿಗೆ ಏರಿಕೆಯಾಗಿದೆ. ನಿರ್ಮಲಾ ಸೀತಾರಾಮನ್ ಅವರೇ ನೀವು ಕೇಂದ್ರ ಹಣಕಾಸು ಸಚಿವರು. ಏರಿಕೆ ಮಾಡಿರುವ ತೆರಿಗೆಯನ್ನು ನೀವೇ ಕಡಿಮೆ ಮಾಡಿ ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದರು.

ಅಡಿಗೆ ಅನಿಲದ ಬೆಲೆ 414 ರೂ. ಗಳಿಂದ 850 ರೂ.ವರೆಗೆ ಹೋಗಿದೆ. ನಿರ್ಮಲಾ ಅವರೇನೋ ಮಂತ್ರಿ. ಅವರಿಗೆ ಜನಸಾಮಾನ್ಯರು ಹಾಗೂ ಬಡವರ ಕಷ್ಟ ಅರ್ಥವಾಗುವುದೇ ಎಂದರು.

ಬಜೆಟ್ ಪುಸ್ತಕ ತೆಗೆದು ನೋಡಲಿ ರಾಜ್ಯ ಸರ್ಕಾರ ಈವರೆಗೆ ಒಂದೂವರೆ ಲಕ್ಷ ಕೋಟಿ ಸಾಲ ಮಾಡಿದೆ. ಆದರೆ, ಲಾಕ್‍ಡೌನ್ ಸಂದರ್ಭದಲ್ಲಿ ಬಡವರಿಗೆ ಏನೂ ಕೊಡಲಿಲ್ಲ. ಬರೀ ಸುಳ್ಳು ಘೋಷಣೆ ಮಾಡುವ ನರೇಂದ್ರ ಮೋದಿ, ಯಡಿಯೂರಪ್ಪ ಅವರುಬಣ್ಣದ ಮಾತುಗಳಿಂದ ಜನರನ್ನು ಮರಳು ಮಾಡುತ್ತಾರೆ ಎಂದು ಹೇಳಿದರು.

ದೇಶದ ಜಿಡಿಪಿ, ಆರ್ಥಿಕ ಪರಿಸ್ಥಿತಿ ಕುರಿತು ಮೋದಿಯವರು ಎಂದಾದರೂ ಮಾತನಾಡಿದ್ದಾರೆಯೇ ? ಜಿಡಿಪಿ ಬೆಳವಣಿಗೆ-7.7 ರಷ್ಟಿದೆ. ಇದರಿಂದ ದೇಶ 25 ವರ್ಷಗಳಷ್ಟು ಹಿಂದೆ ಹೋಗಿದೆ. ಅದನ್ನು ಸರಿ ಮಾಡಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೇ ಹೊರತು ಬೇರೆ ಯಾರಿಂದಲೂ ಸಾಧ್ಯವಿಲ್ಲ.

ನಮ್ಮ ಸರ್ಕಾರ ಇದ್ದಾಗ ಬಡವರಿಗೆ ತಲಾ ಏಳು ಕೆ.ಜಿ. ಅಕ್ಕಿ, ನೀಡಲಾಗುತ್ತಿತ್ತು. ಈಗ 2 ಕೆ.ಜಿ.ಗೆ ಇಳಿಸಿದ್ದಾರೆ. ನಮ್ಮ ಸರ್ಕಾರ ಇದ್ದಿದ್ದರೆ ಹತ್ತು ಸಾವಿರ ರೂ. ಮತ್ತು ಹತ್ತು ಕೆ.ಜಿ. ಅಕ್ಕಿ ಕೊಡುತ್ತಿದ್ದೆವು. ಕೇರಳ ಸರ್ಕಾರ 26 ಸಾವಿರ ಕೋಟಿ ರೂ. ಕೊರೊನಾ ಪ್ಯಾಕೇಜ್ ಘೋಷಣೆ ಮಾಡಿದೆ. ತಮಿಳುನಾಡು ಸರ್ಕಾರ ಬಡವರಿಗೆ ತಲಾ ನಾಲ್ಕು ಸಾವಿರ ರೂ. ಪರಿಹಾರ ನೀಡುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರ ಲೂಟಿ ಮಾಡುತ್ತಿದ್ದಾರೆಯೇ ಹೊರತು ಬಡವರಿಗೆ ನೆರವಾಗುತ್ತಿಲ್ಲ. ಇನ್ನದರೂ ಅವರು ಹಣ ದೋಚುವುದನ್ನು ಬಿಟ್ಟು ಅವರು ಜನರ ಕಡೆಗೆ ನೋಡಲಿ ಎಂದರು.

ವಿಜಯೇಂದ್ರ ಹಣ ಲೂಟಿ ಮಾಡುತ್ತಾರೆ. ಅವರೇ ಶ್ರೀರಾಮುಲು ಆಪ್ತ ಸಹಾಯಕನ ವಿರುದ್ಧ ದೂರು ನೀಡುತ್ತಾರೆ. ಮಂತ್ರಿಗಳು, ಅವರ ಪಿಎಗಳು, ಯಡಿಯೂರಪ್ಪ ಮತ್ತವರ ಮಗ ಎಲ್ಲರೂ ಸೇರಿ ಹಣ ದೋಚುತ್ತಿದ್ದಾರೆ.

ರಾಜಾಜಿನಗರ ಕ್ಷೇತ್ರದ ಶಾಸಕರು ಸುರೇಶ್ ಕುಮಾರ್. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಅವರೇ. ಆಕ್ಸಿಜನ್ ಇಲ್ಲದೆ ಅಲ್ಲಿಯ ಆಸ್ಪತ್ರೆಯಲ್ಲಿ 35 ಮಂದಿ ಸಾವಿಗೀಡಾದರು. ಉಸ್ತುವಾರಿ ಮಂತ್ರಿಯಾಗಿ ಆಕ್ಸಿಜನ್ ಕೊಡಿಸಲು ಅವರಿಂದ ಆಗಲಿಲ್ಲ. ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ ಮೂವರು ಮಾತ್ರ ಸತ್ತಿದ್ದಾರೆ ಎಂದು ಆರೋಗ್ಯ ಮಂತ್ರಿ ಹೇಳುವಾಗ ಸುರೇಶ್ ಕುಮಾರ್ ಕಣ್ಣುಬಿಟ್ಟುಕೊಂಡು ನೋಡುತ್ತಿದ್ದರು ಎಂದು ಸಿದ್ದರಾಮಯ್ಯ ಅವರು ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಸಲೀಂ ಅಹಮದ್, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಸಂಸದರಾದ ನಾಸೀರ್ ಹುಸೇನ್, ಚಂದ್ರಶೇಖರ್, ಶಾಸಕ ರಿಜ್ವಾನ್ ಹರ್ಷದ್, ಪಾಲಿಕೆ ಮಾಜಿ ಮೇಯರ್ ಪದ್ಮಾವತಿ, ಮಾಜಿ ಸದಸ್ಯ ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com