ಬೆಳಗಾವಿಯಲ್ಲಿ ಮುಂಗಾರು ಅಧಿವೇಶನ ನಡೆಸದಿದ್ದರೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೂಗು ಜೋರಾಗಲಿದೆ: ಜೆಡಿಎಸ್ ನಾಯಕ ಎಚ್ಚರಿಕೆ

ಸುವರ್ಣ ವಿಧಾನ ಸೌಧದಲ್ಲಿ ವಿಧಾನಸಭೆ ಮುಂಗಾರು ಅಧಿವೇಶನ ನಡೆಸದಿದ್ದರೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೂಗು ಜೋರಾಗಲಿದೆ ಎಂದು ಜೆಡಿಎಸ್ ಹಿರಿಯ ನಾಯಕ ಅಶೋಕ್ ಪೂಜಾರಿ ಹೇಳಿದ್ದಾರೆ.
ಜೆಡಿಎಸ್ ನಾಯಕ ಅಶೋಕ್ ಪೂಜಾರಿ
ಜೆಡಿಎಸ್ ನಾಯಕ ಅಶೋಕ್ ಪೂಜಾರಿ

ಬೆಳಗಾವಿ: ಸುವರ್ಣ ವಿಧಾನ ಸೌಧದಲ್ಲಿ ವಿಧಾನಸಭೆ ಮುಂಗಾರು ಅಧಿವೇಶನ ನಡೆಸದಿದ್ದರೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಕೂಗು ಜೋರಾಗಲಿದೆ ಎಂದು ಜೆಡಿಎಸ್ ಹಿರಿಯ ನಾಯಕ ಅಶೋಕ್ ಪೂಜಾರಿ ಹೇಳಿದ್ದಾರೆ.

ಉತ್ತರ ಕರ್ನಾಟಕ ಭಾಗದ ಜನರ ಆಸೆ, ಆಕಾಂಕ್ಷೆಗಳು ಮತ್ತು ಬೇಡಿಕೆಗಳನ್ನು ಸರ್ಕಾರ ಪದೇ ಪದೇ ನಿರ್ಲಕ್ಷ್ಯ ಮಾಡುತ್ತಾ ಬಂದಿದೆ ಎಂದು ನಿನ್ನೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ ಅವರು, ನಿಗದಿತ ಅವಧಿಯಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಮೂಲಕ ಬೆಳಗಾವಿಯನ್ನು ಮತ್ತೊಂದು ಶಕ್ತಿ ಕೇಂದ್ರವಾಗಿ ಬೆಳೆಸಲು ಸರ್ಕಾರ ಯತ್ನಿಸಬೇಕು ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುವರ್ಣ ವಿಧಾನ ಸೌಧ ಕಟ್ಟಿರುವ ಉದ್ದೇಶವೇನು ಎಂದು ಕೇಳಿದ ಅವರು, ಉತ್ತರ ಕರ್ನಾಟಕದ ಭಾಗದ ಜನರ ಪ್ರಮುಖ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಬೆಳಗಾವಿಯಲ್ಲಿ ಕಟ್ಟಲಾಯಿತಲ್ಲವೇ, ಅದನ್ನೀಗ ಏಕೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.

ಕಳೆದ ಮೂರು ವರ್ಷಗಳಿಂದ ಇಲ್ಲಿ ಅಧಿವೇಶನ ನಡೆದಿಲ್ಲ, ಅಧಿಕಾರ ವಿಕೇಂದ್ರೀಕರಣಕ್ಕೆ ಸುವರ್ಣ ವಿಧಾನ ಸೌಧದಲ್ಲಿ ವಿಧಾನ ಮಂಡಲ ಕಲಾಪ ನಡೆಸುವ ಅವಶ್ಯಕತೆಯಿದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಭಾಗದ ಎಲ್ಲಾ ಜನ ಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಮುಂಗಾರು ಅಧಿವೇಶನ ನಡೆಸಲು ಮತ್ತು ನಿಗದಿತ ಸಮಯಗಳಲ್ಲಿ ಇಲ್ಲಿ ಕೂಡ ಅಧಿವೇಶನ ನಡೆಸುವುದು ರೂಢಿ ಮಾಡಬೇಕೆಂದು ಒತ್ತಾಯಿಸಬೇಕೆಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಮುಂಗಾರು ಅಧಿವೇಶನವನ್ನು ಸರ್ಕಾರ ನಡೆಸದಿದ್ದರೆ ಆಗಸ್ಟ್ ನಲ್ಲಿ ರಾಜಕೀಯ ಹೋರಾಟವನ್ನು ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ತಮ್ಮ ಪ್ರತಿಭಟನೆಗೂ ಸರ್ಕಾರ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ಕೂಗು ಅನಿವಾರ್ಯ ಎಂದು ಸಹ ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com