ಬೆಂಗಳೂರು: ಯಾವುದೇ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ಚುನಾವಣೆಯನ್ನು ಎದುರಿಸಲು ಸಿದ್ಧವಿದೆ. ಆದರೆ ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಸಾಧ್ಯತೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
"ಬಿಜೆಪಿಯಲ್ಲಿ ಸಿಎಂ ಬದಲಾವಣೆಯ ಬಗ್ಗೆ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಭ್ರಷ್ಟ ಮುಖ್ಯಮಂತ್ರಿಯಿಂದ ರಾಜೀನಾಮೆ ಪಡೆಯುತ್ತಿರುವುದು ಒಳ್ಳೆಯದು" ಎಂದು ಹೇಳಿದ್ದಾರೆ.
ಬಿಜೆಪಿ ಆಂತರಿಕ ಬಿಕ್ಕಟ್ಟನ್ನು ನಿಭಾಯಿಸುವುದಕ್ಕೆ ವಿಫಲವಾದಲ್ಲಿ ಚುನಾವಣೆಗೆ ಕಾಂಗ್ರೆಸ್ ಸಿದ್ಧವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಿದ್ದರಾಮಯ್ಯ "ಯಾವುದೇ ಸಮಯದಲ್ಲಿ ಚುನಾವಣೆ ಎದುರಿಸುವುದಕ್ಕೆ ಕಾಂಗ್ರೆಸ್ ಸಿದ್ಧವಿದೆ. ಆದರೆ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ನಿರ್ಗಮಿಸಿದರೆ ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ, ಚುನಾವಣೆ ಯಾವಾಗ ಬೇಕಾದರೂ ಬರಲಿ ಎದುರಿಸಲು ನಾವು ಸಿದ್ದವಿದ್ದೇವೆ ಎಂದು ಮಾಜಿ ಸಿಎಂ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ನಾಯಕತ್ವದ ಬದಲಾವಣೆಯ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದ ಆಡಿಯೋ ವೈರಲ್ ಆಗತೊಡಗಿದ್ದು, ಸಿಎಂ ಬದಲಾವಣೆ ಸಾಧ್ಯತೆ ದಟ್ಟವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
"ರಾಜ್ಯದಲ್ಲಿ ಬಿಜೆಪಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲಿದೆ ಎಂದು ನಾನು ಈ ಹಿಂದೆಯೂ ಹೇಳಿದ್ದೆ. ಆದರೆ ಇದನ್ನು ಯಾರೂ ನಂಬಿರಲಿಲ್ಲ. ನನಗೆ ಈ ಬಗ್ಗೆ ಪ್ರಾರಂಭದಿಂದಲೂ ಮಾಹಿತಿ ಇತ್ತು. ಯಡಿಯೂರಪ್ಪ ಹಾಗೂ ಅವರ ಪುತ್ರ ಇಬ್ಬರೂ ಭ್ರಷ್ಟರು. ಯಡಿಯೂರಪ್ಪನವರದ್ದು ಭ್ರಷ್ಟಾಚಾರ ಸರ್ಕಾರ" ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
Advertisement