ನಾಯಕತ್ವ ಬದಲಾವಣೆ: ಯಡಿಯೂರಪ್ಪನರ ಉತ್ತರಾಧಿಕಾರಿ ಯಾರು? ಕಾದು ನೋಡುವ ತಂತ್ರದಲ್ಲಿದೆಯೇ ಹೈಕಮಾಂಡ್? 

ಜುಲೈ 26 ಇಂದು ಸೋಮವಾರಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾಗುತ್ತಿದೆ. ರಾಜ್ಯ ಸರ್ಕಾರದಲ್ಲಿ ಆಗಾಗ ನಾಯಕತ್ವ ಬದಲಾವಣೆಯ ಕೂಗು ಕೇಳಿಬರುತ್ತಲೇ ಇರುತ್ತದೆ. 
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
Updated on

ನವದೆಹಲಿ: ಜುಲೈ 26 ಇಂದು ಸೋಮವಾರಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾಗುತ್ತಿದೆ. ರಾಜ್ಯ ಸರ್ಕಾರದಲ್ಲಿ ಆಗಾಗ ನಾಯಕತ್ವ ಬದಲಾವಣೆಯ ಕೂಗು ಕೇಳಿಬರುತ್ತಲೇ ಇರುತ್ತದೆ. ಹಾಗಾದರೆ ಯಡಿಯೂರಪ್ಪನವರ ನಂತರ ಅವರ ಉತ್ತರಾಧಿಕಾರಿ ಯಾರು ಮುಖ್ಯಮಂತ್ರಿ ಹುದ್ದೆಗೆ ಎಂಬ ಮಾತುಗಳು ಕೇಳಿಬರುತ್ತಿರುವಾಗ ಕೇಂದ್ರದ ವರಿಷ್ಠರು ಕೆಲವರ ಹೆಸರನ್ನು ಗುರುತಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈಶಾನ್ಯ ಭಾರತ ಮತ್ತು ಗೋವಾ ರಾಜ್ಯಗಳ ಪ್ರವಾಸ ಮುಗಿಸಿ ದೆಹಲಿಗೆ ಹಿಂತಿರುಗಿದ ಕೇಂದ್ರ ನಾಯಕರಾದ ಅಮಿತ್ ಶಾ ಮತ್ತು ಜೆ ಪಿ ನಡ್ಡಾ ಆರ್ ಎಸ್ ಎಸ್ ನಾಯಕರೊಂದಿಗೆ ಚರ್ಚಿಸಿ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಅಂತಿಮಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿಯಲ್ಲಿ 75 ವರ್ಷಕ್ಕಿಂತ ಮೇಲಿನವರಿಗೆ ಪ್ರಮುಖ ಸಚಿವ, ಮುಖ್ಯಮಂತ್ರಿ ಇತ್ಯಾದಿ ಹುದ್ದೆಗಳನ್ನು ನೀಡುವುದಿಲ್ಲ ಎಂಬ ನಿಯಮವಿದೆ. ಅದರ ಪ್ರಕಾರ ಬಿ ಎಸ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಬೇಕಿದೆ.

ಒಟ್ಟಾರೆ ನಡೆಯುತ್ತಿರುವ ಬೆಳವಣಿಗೆಯಲ್ಲಿ ಕಾದು ನೋಡುವ ತಂತ್ರವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಲಿಂಗಾಯತ ಶ್ರೀಗಳು ನೀಡುತ್ತಿರುವ ಬೆಂಬಲವನ್ನು ತಾಳ್ಮೆಯಿಂದ ಕಾದು ನೋಡುತ್ತಿದ್ದಾರೆ. ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನಮಾನ ಸಿಗುವುದು ಯಡಿಯೂರಪ್ಪನವರ ಸದ್ಯದ ಆದ್ಯತೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ವರಿಷ್ಠರ ಮನಸ್ಸಿನಲ್ಲಿ ಸದ್ಯ ಆರು ಹೆಸರುಗಳಿವೆ, ಅವುಗಳೆಂದರೆ ಬಿ ಎಲ್ ಸಂತೋಷ್(ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ), ಸಿ ಎನ್ ಅಶ್ವಥ ನಾರಾಯಣ(ಉಪ ಮುಖ್ಯಮಂತ್ರಿ), ಸಿ ಟಿ ರವಿ(ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ), ಮುರುಗೇಶ್ ನಿರಾಣಿ ಮತ್ತು ಬಸವರಾಜ್ ಬೊಮ್ಮಾಯಿ(ಇಬ್ಬರೂ ರಾಜ್ಯ ಸಚಿವರು). ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂದು ನಿರ್ಧರಿಸಲಿದ್ದಾರೆ. ಉತ್ತರಾಖಂಡ್ ನ ಪುಷ್ಕರ್ ಸಿಂಗ್ ದಾಮಿಯವರ ಮಾರ್ಗದಲ್ಲಿಯೇ ಕರ್ನಾಟಕದಲ್ಲಿ ಕೂಡ ಸಿಎಂ ಅಭ್ಯರ್ಥಿಯನ್ನು ಅಚ್ಚರಿಯಾಗಿ ವರಿಷ್ಠರು ಆಯ್ಕೆಮಾಡಿದರೂ ಅಚ್ಚರಿಯೇನಿಲ್ಲ.

ಜೆಡಿಎಸ್ ಗೆ ಒಕ್ಕಲಿಗ ಮೂಲದ ಬೆಂಬಲ ಇರುವಂತೆ ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಬೆಂಬಲವನ್ನು ಕಳೆದುಕೊಳ್ಳಲು ಬಿಜೆಪಿಗೆ ಮನಸ್ಸಿಲ್ಲ. ನಿನ್ನೆ ಮುರುಗೇಶ್ ನಿರಾಣಿಯವರು ದೆಹಲಿಗೆ ಹೋಗಿದ್ದರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರು ದೆಹಲಿಗೆ ಹೊರಟಿದ್ದವರು ಕೊನೆ ಕ್ಷಣದಲ್ಲಿ ರದ್ದುಪಡಿಸಿ ಕರ್ನಾಟಕದಲ್ಲಿಯೇ ಉಳಿದುಕೊಂಡಿದ್ದಾರೆ. ಯಡಿಯೂರಪ್ಪನವರ ಉತ್ತರಾಧಿಕಾರಿಯನ್ನು ನೇಮಿಸಲು ಬಿಜೆಪಿ ವರಿಷ್ಠರು ಸಮಯಾವಕಾಶ ತೆಗೆದುಕೊಳ್ಳುತ್ತಿರುವುದಂತೂ ಸತ್ಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com