ಡ್ಯಾಮೇಜ್ ಕಂಟ್ರೋಲ್ ಗೆ 'ಸೈನಿಕ' ಮುಂದು?: ನಿರ್ಮಲಾನಂದ ಶ್ರೀಗಳ ಭೇಟಿ ಮಾಡಿದ ಯೋಗೇಶ್ವರ್, ದೆಹಲಿಯಲ್ಲಿ ಬೀಡುಬಿಟ್ಟ ವಿಜಯೇಂದ್ರ
ಬೆಂಗಳೂರು: ನಾನು ನೀಡಿರುವ ಹೇಳಿಕೆ ಇಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತದೆ, ಸಂಚಲನ ಸೃಷ್ಟಿಸುತ್ತದೆ ಎಂದು ಭಾವಿಸಿರಲಿಲ್ಲ, ನನ್ನ ವಿರುದ್ಧ ಕೆಲ ಸ್ನೇಹಿತರು ಮಾತನಾಡಿದ್ದಾರೆ, ಅವರ ಮಾತುಗಳಿಂದ ನನಗೆ ನೋವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಇಂದು ಬೆಳಗ್ಗೆ ರಾಮನಗರದ ಹೊರವಲಯದಲ್ಲಿರುವ ಬಿಜಿಎಸ್ ಶಾಖಾಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮದು ರಾಷ್ಟ್ರೀಯ ಪಕ್ಷ, ಇಲ್ಲಿ ರಾಷ್ಟ್ರ ನಾಯಕರು ಎಲ್ಲವನ್ನೂ ತೀರ್ಮಾನಿಸುತ್ತಾರೆ, ನನ್ನ ಒಂದು ಹೇಳಿಕೆಯನ್ನು ತೆಗೆದುಕೊಂಡು ವಿಭಿನ್ನ ರೀತಿಯಲ್ಲಿ ಚರ್ಚೆಗಳು ನಡೆಯುತ್ತಲೇ ಇದೆ, ದಿನಬೆಳಗಾದರೆ ನನ್ನ ವಿಷಯ ಮಾಧ್ಯಮಗಳಲ್ಲಿ ನೋಡಿ ನನಗೆ ಬೇಸರವಾಗಿ ಹೋಗಿದೆ. ಯಾಕೆ ಹೀಗೆ ಆಗುತ್ತಿದೆ ಎಂದು ಸೂಕ್ಷ್ಮವಾಗಿ ಯೋಚಿಸುತ್ತಿದ್ದೇನೆ ಎಂದರು.
ಇದು ಬಲಾಬಲ ಪ್ರದರ್ಶನ ಕಣವಲ್ಲ, ಯಾರೋ ನಾಲ್ವರು ಸ್ನೇಹಿತರು ನನ್ನ ವಿರುದ್ಧ ಮಾತನಾಡಿದ್ದಾರೆ, ಇದು ನನಗೆ ತೀವ್ರ ಬೇಸರವಾಗಿದೆ, ಅವರಿಂದ ಯಾರು ಮಾತನಾಡಿಸುತ್ತಿದ್ದಾರೆ ಎಂದು ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಉತ್ತರ ಕೊಡುವ ಸಮಯ ಬರುತ್ತದೆ, ಮಾತನಾಡಲು ಬಹಳಷ್ಟು ವಿಷಯಗಳಿವೆ, ಆದರೆ ಈಗ ಆಗುತ್ತಿಲ್ಲ ಎಂದರು.
ನಾನು ಪಕ್ಷದ ಚೌಕಟ್ಟಿನಲ್ಲಿದ್ದೇನೆ, ಈಗ ಏನೂ ಮಾತನಾಡುವುದಿಲ್ಲ, ಹಲವು ಕಾರಣಕ್ಕೆ ನಾವು ದೆಹಲಿಗೆ ಹೋಗುತ್ತೇವೆ. ಅದರಲ್ಲೇನೂ ವಿಶೇಷವಿಲ್ಲ, ನಮ್ಮದು ರಾಷ್ಟ್ರೀಯ ಪಕ್ಷ, ಏನೇ ವಿಷಯಗಳಿದ್ದರೂ ನಮ್ಮ ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇವೆ, ನನ್ನ ವಿರುದ್ಧ ಸಹಿ ಸಂಗ್ರಹದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು.
ಡ್ಯಾಮೇಜ್ ಕಂಟ್ರೋಲ್ ಗೆ 'ಸೈನಿಕ' ಮುಂದು?: ನಾಯಕತ್ವ ಬದಲಾವಣೆ ಕುರಿತು ಸಿ ಪಿ ಯೋಗೇಶ್ವರ್ ಹೇಳಿಕೆ ನೀಡಿದ್ದು ರಾಜ್ಯ ರಾಜಕೀಯದಲ್ಲಿ ಹೈ ವೋಲ್ಟೇಜ್ ಚಟುವಟಿಕೆಗಳಿಗೆ ಕಾರಣವಾಗಿದ್ದು ಹಲವು ಬೆಳವಣಿಗೆಗಳು ನಡೆದವು. ನಿನ್ನೆ ಹಲವು ಮಠಾಧೀಶರು ಯೋಗೇಶ್ವರ್ ವಿರುದ್ಧ ಮಾತನಾಡಿ ಸಹಿ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದ ಯೋಗೇಶ್ವರ್ ಸಚಿವ ಸ್ಥಾನಕ್ಕೆ ಕುತ್ತು ಉಂಟಾಗುತ್ತದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ನಿರ್ಮಲಾನಂದನಾಥ ಸ್ವಾಮಿಗಳ ಸಹಾಯ ಪಡೆದು ಮಠಾಧೀಶರ ಮುಖಾಂತರ ಸಂಧಾನ ಮಾಡಿ ಡ್ಯಾಮೇಜ್ ಕಂಟ್ರೋಲ್ ಗೆ ಯೋಗೇಶ್ವರ್ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂದು ಮಾತನಾಡುವ ವೇಳೆ ಯೋಗೇಶ್ವರ್ ಇನ್ನೂ ನಾಲ್ವರು ಸ್ವಾಮೀಜಿಗಳನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.
ಮೆಗಾಸಿಟಿ ಯೋಜನೆಯಲ್ಲಿ ಅಕ್ರಮವಾಗಿಲ್ಲ: ಇನ್ನು ಮೆಗಾಸಿಟಿ ಯೋಜನೆಯಲ್ಲಿ ಅಕ್ರಮ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದು ನನ್ನಿಂದ ಯಾವುದೇ ಅಕ್ರಮ ನಡೆದಿಲ್ಲ ಎಂದಿದ್ದಾರೆ.
ದೆಹಲಿಯಲ್ಲಿ ಬಿ ವೈ ವಿಜಯೇಂದ್ರ: ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವಾಗ ದೆಹಲಿಗೆ ಅವರ ಪುತ್ರ ಬಿ ವೈ ವಿಜಯೇಂದ್ರ ದೆಹಲಿಯಲ್ಲಿ ಬೀಡುಬಿಟ್ಟಿದ್ದು ಇಂದು ಬಿಜೆಪಿ ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ದೆಹಲಿ ನಾಯಕರನ್ನು ಭೇಟಿ ಮಾಡಿ ಸಿಎಂ ಬಿಎಸ್ ವೈ ಕಾರ್ಯವೈಖರಿಯನ್ನು ಮನದಟ್ಟು ಮಾಡಿ ರಣತಂತ್ರ ಹೆಣೆಯಲು ಮುಂದಾಗಿದ್ದಾರೆ, ದೆಹಲಿಯಲ್ಲಿ ಸಿ.ಪಿ.ಯೋಗೇಶ್ವರ್ ವಿರುದ್ಧ ದಾಳ ಉರುಳಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೈಕಮಾಂಡ್ ಬಳಿ ಶಾಸಕರ ನಿಲುವನ್ನು ಮನದಟ್ಟು ಮಾಡಿ ಸಿಎಂ ಬದಲಾವಣೆ ಕೂಗಿಗೆ ಬ್ರೇಕ್ ಹಾಕುವ ತಂತ್ರವನ್ನು ವಿಜಯೇಂದ್ರ ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ.

