ಬಿ ಎಸ್ ಯಡಿಯೂರಪ್ಪ ಪೂರ್ಣಾವಧಿ ಸಿಎಂ ಚರ್ಚೆ, ನಾಯಕತ್ವ ಬದಲಾವಣೆ ಕೂಗು ಸದ್ಯಕ್ಕೆ ಶಮನ: ಆದರೆ ಇದು ಬೂದಿ ಮುಚ್ಚಿದ ಕೆಂಡವೇ?

ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಬಂದು ಹೋದ ನಂತರ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು, ಚರ್ಚೆ ಸದ್ಯಕ್ಕೆ ತಣ್ಣಗಾದಂತೆ ಕಂಡುಬಂದರೂ ಮುಂದೆ ಇನ್ನೆರಡು ವರ್ಷಗಳ ಕಾಲ 2023ರ ವಿಧಾನಸಭೆ ಚುನಾವಣೆಯವರೆಗೆ ಪರಿಸ್ಥಿತಿ ಹೀಗೆಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
Updated on: 

ಬೆಂಗಳೂರು: ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಬಂದು ಹೋದ ನಂತರ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು, ಚರ್ಚೆ ಸದ್ಯಕ್ಕೆ ತಣ್ಣಗಾದಂತೆ ಕಂಡುಬಂದರೂ ಮುಂದೆ ಇನ್ನೆರಡು ವರ್ಷಗಳ ಕಾಲ 2023ರ ವಿಧಾನಸಭೆ ಚುನಾವಣೆಯವರೆಗೆ ಪರಿಸ್ಥಿತಿ ಹೀಗೆಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಅರುಣ್ ಸಿಂಗ್ ಅವರು ಬಂದು ಹೋದ ನಂತರ ಮುಖ್ಯಮಂತ್ರಿ ಯಡಿಯೂರಪ್ಪನವರು ಸದ್ಯಕ್ಕೆ ನಿರಾಳರಾದಂತೆ ಕಂಡುಬಂದರೂ ಕೂಡ ಇದು ದೀರ್ಘಸಮಯದವರೆಗೆ ಹೀಗೆಯೇ ಇರಬಹುದು ಎಂಬ ವಾತಾವರಣ ಬಿಜೆಪಿಯಲ್ಲಿ ಇಲ್ಲ. ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕೆಲವು ನಾಯಕರು ನಾಯಕತ್ವ ಬದಲಾವಣೆಗೆ ನಿರಂತರ ಒತ್ತಡ ಹಾಕದೆ ಇರಲಾರರು. ಅರುಣ್ ಸಿಂಗ್ ಅವರು ಬಂದು ಹೋಗಿ ಹೈಕಮಾಂಡ್ ಗೆ ವರದಿ ನೀಡಿದ ಮೇಲೆ ಯಡಿಯೂರಪ್ಪನವರನ್ನು ಬಂದು ಭೇಟಿ ಮಾಡುವಂತೆ ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಯಡಿಯೂರಪ್ಪನವರ ಸಂಪುಟದ ಹಿರಿಯ ಸಹೋದ್ಯೋಗಿಯೊಬ್ಬರು ಹೇಳುವ ಪ್ರಕಾರ, ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ. ಅಂದರೆ ಕೋವಿಡ್ ಪರಿಸ್ಥಿತಿ ಮುಂದೆ ಏನಾಗುತ್ತದೋ ಎಂದು ಆತಂಕ, ಅನಿಶ್ಚಿತತೆ ಇರುವುದರಿಂದ ನಾಯಕತ್ವದ ಬದಲಾವಣೆ ಪ್ರಶ್ನೆ ಇನ್ನು ಮೂರ್ನಾಲ್ಕು ತಿಂಗಳು ಉದ್ಭವಿಸದು. ಆದರೆ ಮುಂದೆ ಆರು ತಿಂಗಳಲ್ಲಿ ನಾಯಕತ್ವ ಬದಲಾವಣೆಯನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ.

2023ರ ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕು ಎಂದು ಹೈಕಮಾಂಡ್ ಸ್ಪಷ್ಟವಾಗಿ ತಿಳಿದಿದೆ. ಆದರೆ ನಾಯಕತ್ವ ಬದಲಾವಣೆಗೆ ಈಗ ಸೂಕ್ತ ಸಮಯವಲ್ಲ, ಸರಿಯಾದ ಸಮಯದಲ್ಲಿ ಎಲ್ಲವೂ ನಡೆಯುತ್ತದೆ ಎನ್ನುತ್ತಾರೆ ಅವರು.

ಹಾಗಾದರೆ ಯಡಿಯೂರಪ್ಪ ಬದಲಿ ನಾಯಕರು ಯಾರು ಎಂಬ ಪ್ರಶ್ನೆಗೆ ಬಿಜೆಪಿಯಲ್ಲಿ ಸದ್ಯಕ್ಕೆ ಕೇಳಿಬರುತ್ತಿರುವ ಹೆಸರುಗಳು ಕೇಂದ್ರದ ಸಚಿವರುಗಳಾದ ಪ್ರಹ್ಲಾದ್ ಜೋಷಿ, ಡಿ ವಿ ಸದಾನಂದ ಗೌಡ ಅಥವಾ ಮತ್ತೊಬ್ಬ ಪ್ರಬಲ ನಾಯಕನಿರಬಹುದು ಎನ್ನುತ್ತಾರೆ ಅವರು.

ಯಡಿಯೂರಪ್ಪನವನ್ನು ಪಕ್ಷದಿಂದ ನಿರ್ಗಮಿಸುವಾಗ ವರಿಷ್ಠರು ಬರಿಕೈಯಲ್ಲಂತೂ ಕಳುಹಿಸುವುದಿಲ್ಲ, ಅವರಿಗೆ ಗೌರವಾನ್ವಿತ ಹುದ್ದೆ ನೀಡಿ ಮರ್ಯಾದೆ, ಗೌರವಗಳಿಂದಲೇ ಕಳುಹಿಸಿಕೊಡಲಿದೆ. ಇಲ್ಲದಿದ್ದರೆ ಕರ್ನಾಟಕದಲ್ಲಿ ಲಿಂಗಾಯತ ಮತಗಳು ಕೈತಪ್ಪಿಹೋಗುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com