ಸಂಪುಟ ಸೇರಲು ಲಾಬಿ: ದೆಹಲಿಯಲ್ಲಿ ಬಿಜೆಪಿ, ಆರ್ ಎಸ್ ಎಸ್ ಮುಖಂಡರನ್ನು ಭೇಟಿಯಾದ ಜಾರಕಿಹೊಳಿ

ಸಂಪುಟ ಸೇರಲು ಲಾಬಿ ನಡೆಸುತ್ತಿರುವ ಮಾಜಿ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಮಂಗಳವಾರ ಸಂಜೆ ದೆಹಲಿಯಲ್ಲಿ ಅನೇಕ ಬಿಜೆಪಿ ಹಾಗೂ ಆರ್ ಎಸ್ ಎಸ್ ಮುಖಂಡರನ್ನು ಭೇಟಿಯಾದರು.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ
Updated on

ಬೆಳಗಾವಿ: ಸಂಪುಟ ಸೇರಲು ಲಾಬಿ ನಡೆಸುತ್ತಿರುವ ಮಾಜಿ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಮಂಗಳವಾರ ಸಂಜೆ ದೆಹಲಿಯಲ್ಲಿ ಅನೇಕ ಬಿಜೆಪಿ ಹಾಗೂ ಆರ್ ಎಸ್ ಎಸ್ ಮುಖಂಡರನ್ನು ಭೇಟಿಯಾದರು. ಸಿಡಿ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆಯುವ ಮೂಲಕ ಸಂಪುಟಕ್ಕೆ ಮರಳಲು ಸಹಾಯ ಮಾಡುವಂತೆ ಅವರು ದೆಹಲಿಯ ಪಕ್ಷದ ನಾಯಕತ್ವಕ್ಕೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಥವಾ ರಾಜ್ಯದಲ್ಲಿನ ಪಕ್ಷದ ಮುಖಂಡರಲ್ಲಿ ನಂಬಿಕೆ ಇಲ್ಲದ ಕಾರಣ ದೆಹಲಿಗೆ ದೌಡಾಯಿಸಿದ್ದು, ಆದಷ್ಟು ಬೇಗ ಸಂಪುಟಕ್ಕೆ ಮರು ಸೇರ್ಪಡೆ ಮಾಡುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿರುವುದಾಗಿ ಜಾರಕಿಹೊಳಿ ಅವರ ಆಪ್ತ ಮೂಲಗಳು ತಿಳಿಸಿವೆ.

ರಾಜಧಾನಿಯಲ್ಲಿ ಹಿರಿಯ ಆರ್ ಎಸ್ ಎಸ್ ಮುಖಂಡರೊಬ್ಬರ ನಿವಾಸದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದ ಜಾರಕಿಹೊಳಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಮೂವರು ಬಿಜೆಪಿ ಮುಖಂಡರು ದ್ರೋಹ ಮಾಡಿದ್ದು, ಅವರಿಗೆ ಪಾಠ ಕಲಿಸುವುದಾಗಿ ಹೇಳಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವರದಿಯನ್ನು ತಳ್ಳಿ ಹಾಕಿದ ಜಾರಕಿಹೊಳಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದರು.

ಫಡ್ನವೀಸ್ ಭೇಟಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಜಾರಕಿಹೊಳಿ ನೀಡಲಿಲ್ಲ ಆದರೆ, ಮರಳಿ ಸಂಪುಟ ಸೇರಲು ಪಕ್ಷದ ಸಹಾಯ ಪಡೆಯುವವರೆಗೂ ಅವರು ತಮ್ಮ ಪ್ರಯತ್ನ ನಿಲ್ಲಿಸುವುದಿಲ್ಲಎಂದು ಮೂಲಗಳು ಹೇಳಿವೆ. ಸಿಡಿ ಕೇಸ್ ಸದ್ಯದಲ್ಲಿಯೇ ರದ್ದಾಗುವ ಸಾಧ್ಯತೆಯಿದ್ದು, ಜಾರಕಿಹೊಳಿ ದೆಹಲಿಯಲ್ಲಿ ಕೆಲವು ಪಕ್ಷದ ಉನ್ನತ ನಾಯಕರನ್ನು ಭೇಟಿಯಾಗುವ ಸಾಧ್ಯತೆಯಿದೆ. ಇನ್ನೂ ಕೆಲವೇ ದಿನಗಳಲ್ಲಿ ಸಿಡಿ ಕೇಸ್ ವಿಚಾರಣೆ ಹೈಕೋರ್ಟ್ ನಲ್ಲಿ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಆಫರೇಷನ್ ಕಮಲದ ಮೂಲಕ 17 ಅನ್ಯ ಪಕ್ಷದ ಶಾಸಕರನ್ನು ತಂದು ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ನೆರವಾದ ಜಾರಕಿಹೊಳಿ, ಫಡ್ನವೀಸ್ ಸೇರಿದಂತೆ ಹಲವು ಬಿಜೆಪಿ ಮುಖಂಡರೊಂದಿಗೆ ಸಂಪರ್ಕ ಹೊಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com