'ನೀವು ಕೊರೋನಾ ವೈರಸ್ ಗಿಂತಲೂ ಡೇಂಜರ್, ಯೋಗ್ಯತೆ ಇದ್ದರೆ ಪಕ್ಷದಲ್ಲಿ ಇರಿ, ಇಲ್ಲದಿದ್ದರೆ ತೊಲಗಿ': ಮಾಜಿ ಸಚಿವ ವಿಶ್ವನಾಥ್ ವಿರುದ್ಧ ಕಿಡಿ 

ಮಾಜಿ ಸಚಿವ ಬಿಜೆಪಿಯ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಇಂತಹ ಕೊರೋನಾ ಸಂಕಷ್ಟ ಕಾಲದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಟೀಕಿಸಿದ್ದಾರೆ.
ಹೆಚ್ ವಿಶ್ವನಾಥ್ ಮತ್ತು ಎಸ್ ಆರ್ ವಿಶ್ವನಾಥ್ (ಸಂಗ್ರಹ ಚಿತ್ರ)
ಹೆಚ್ ವಿಶ್ವನಾಥ್ ಮತ್ತು ಎಸ್ ಆರ್ ವಿಶ್ವನಾಥ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಮಾಜಿ ಸಚಿವ ಬಿಜೆಪಿಯ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಇಂತಹ ಕೊರೋನಾ ಸಂಕಷ್ಟ ಕಾಲದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಪಕ್ಷಕ್ಕೆ ದ್ರೋಹವನ್ನುಂಟುಮಾಡುವ ಕೆಲಸ ಮಾಡುತ್ತಿರುವ ಅವರು ಮಾನ ಮರ್ಯಾದೆ ಇದ್ದರೆ ಬಿಜೆಪಿ ಬಿಟ್ಟು ತೊಲಗಲಿ ಎಂದು ಯಲಹಂಕ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೋವಿಡ್ ಸೋಂಕು ನಿರ್ಮೂಲನೆಗೆ, ರಾಜ್ಯದ ಜನತೆಯ ಪರವಾಗಿ ಈ ಕಷ್ಟದ ಕಾಲದಲ್ಲಿ ಅವಿರತವಾಗಿ ಕೊರೋನಾ ನಿರ್ಮೂಲನೆಗೆ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಬೆನ್ನು ತಟ್ಟುವ, ಸಲಹೆ ನೀಡುವ ಕೆಲಸ ಮಾಡುವುದು ಬಿಟ್ಟು ವಿಶ್ವನಾಥ್ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮನೆಯಲ್ಲಿ ಕುಳಿತುಕೊಂಡು ಮುಖ್ಯಮಂತ್ರಿಯವರನ್ನು ದೂರುವ ಕೆಲಸವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಹೊರಗಡೆ ಬಂದು ಕ್ರಿಯಾತ್ಮಕ ಕೆಲಸಗಳಲ್ಲಿ ಭಾಗಿಯಾಗಿದ್ದಾರೆಯೇ, ಮುಖ್ಯಮಂತ್ರಿಗಳು ಕೊರೋನಾ ಬಂದಾಗಲೂ ಆಸ್ಪತ್ರೆಯಲ್ಲಿದ್ದುಕೊಂಡು ಕೋವಿಡ್ ಸಂಬಂಧ ಕೆಲಸ ಮಾಡಿದ್ದಾರೆ. ಹೀಗಿರುವಾಗ ಬಾಯಿಗೆ ಬಂದಂತೆ ಮಾತನಾಡುವುದು ವಿಶ್ವನಾಥ್ ಅವರ ಹುಟ್ಟುಗುಣವೆಂದು ಕಾಣುತ್ತದೆ ಎಂದು ಆರೋಪಿಸಿದ್ದಾರೆ.

ಮೂಲೆಗುಂಪು ಆಗುತ್ತಿದ್ದ ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಸ್ಥಾನ ಕೊಟ್ಟು ಪಕ್ಷದಲ್ಲಿ ಸ್ಥಾನಮಾನ ಕೊಟ್ಟವರು ಯಡಿಯೂರಪ್ಪನವರು, ಹೀಗಿರುವಾಗ ಮುಖ್ಯಮಂತ್ರಿಗಳ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದು ಎಷ್ಟು ಸರಿ, ನಿಮಗೆ ಯೋಗ್ಯತೆ ಇದ್ದರೆ ಪಕ್ಷದಲ್ಲಿ ಇರಿ, ಇಲ್ಲದಿದ್ದರೆ ನಿಮ್ಮಂಥವರ ಅವಶ್ಯಕತೆ ನಮಗಿಲ್ಲ, ದಯವಿಟ್ಟು ಪಕ್ಷವನ್ನು ಬಿಟ್ಟು ತೊಲಗಿ ಎಂದು ಸವಾಲು ಹಾಕಿದರು.

ನಿಮ್ಮ ತಿಕ್ಕಲುತನ ಪಕ್ಷಕ್ಕೆ ಮುಜುಗರ ತರುತ್ತಿದೆ, ಸಾಧ್ಯವಾದರೆ ಜನರಿಗೆ, ಪಕ್ಷಕ್ಕೆ ಒಳ್ಳೆಯ ಕೆಲಸ ಮಾಡಿ, ವಿರೋಧ ಪಕ್ಷದವರು ಕೂಡ ನಿಮಗೆ ಛೀಮಾರಿ ಹಾಕುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ನೀವು ಕೋವಿಡ್ ವೈರಸ್ ಗಿಂತಲೂ ಡೇಂಜರ್, ನಿಮಗೆ ಮಾನ ಮರ್ಯಾದೆ ಇದ್ದರೆ ಪಕ್ಷವನ್ನು ಬಿಟ್ಟು ಟೀಕೆ ಮಾಡಿ, ನಿಮ್ಮಂತವರಿಂದಲೇ ಪಕ್ಷಗಳು ಹಾಳಾಗುವುದು ಎಂದು ಎಸ್ ಆರ್ ವಿಶ್ವನಾಥ್ ಕಟುವಾಗಿ ಟೀಕಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com