ಕೆಲ ನಿಯಮಗಳಿಗೆ ಅಪವಾದ ಇರುವುದಿಲ್ಲ ಎಂಬ ತರ್ಕ ಪಂಡಿತನ ವಾದ ಗೊತ್ತೇ: ಸಿದ್ದರಾಮಯ್ಯ ಮಾತು ನಂಬಿಕೆಗೆ ಯೋಗ್ಯವೇ?

ಎಲ್ಲ ನಿಯಮಗಳಿಗೂ ಅಪವಾದವಿರುತ್ತದೆ. ಇದೊಂದು ನಿಯಮ. ಹೀಗಾಗಿ ಕೆಲವು ನಿಯಮಗಳಿಗೆ ಅಪವಾದ ಇರುವುದಿಲ್ಲ ಎಂಬ ತರ್ಕ ಪಂಡಿತನ ವಾದ ಗೊತ್ತೇ? ಈ ಸಿದ್ದರಾಮಯ್ಯ ಅವರ ಕತೆಯೂ ಹೀಗೆಯೇ ಆಗಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಭಾರತೀಯ ಜನತಾ ಪಕ್ಷ  ಲೇವಡಿ ಮಾಡಿದೆ, ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಆತ್ಮವಂಚಕ ಸಿದ್ದರಾಮಯ್ಯ ಅವರ ಮಾತು ನಂಬಿಕೆಗೆ ಯೋಗ್ಯವೇ ಎಂದು ಪ್ರಶ್ನಿಸಿದೆ.

ಎಲ್ಲ ನಿಯಮಗಳಿಗೂ ಅಪವಾದವಿರುತ್ತದೆ. ಇದೊಂದು ನಿಯಮ. ಹೀಗಾಗಿ ಕೆಲವು ನಿಯಮಗಳಿಗೆ ಅಪವಾದ ಇರುವುದಿಲ್ಲ ಎಂಬ ತರ್ಕ ಪಂಡಿತನ ವಾದ ಗೊತ್ತೇ? ಈ ಸಿದ್ದರಾಮಯ್ಯ ಅವರ ಕತೆಯೂ ಹೀಗೆಯೇ ಆಗಿದೆ. ದಲಿತರು ಸಿಎಂ ಆದರೆ ಸ್ವಾಗತ. ನಾನೂ ಒಬ್ಬ ದಲಿತ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಆತ್ಮವಂಚಕ ಸಿದ್ದರಾಮಯ್ಯ ಅವರ ಮಾತು ನಂಬಿಕೆಗೆ ಯೋಗ್ಯವೇ? ಈ ಹಿಂದೆ ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿ ಎರಡು ಕಡೆ ಚುನಾವಣೆಗೆ ನಿಂತರು. ಈಗ ದಲಿತರು ಸಿಎಂ ಆದರೆ ಸ್ವಾಗತ ಎನ್ನುತ್ತಿದ್ದಾರೆ. ಇವರನ್ನು ನಂಬಿದರೆ ದಲಿತರಿಗೆ ಮತ್ತೊಂದು ಮಹಾ ಅನ್ಯಾಯ ಎದುರಾಗುವುದರಲ್ಲಿ ಸಂಶಯವಿಲ್ಲ ಎಂದು ಟ್ವೀಟ್ ಮಾಡಿದೆ.

ಸಿದ್ದರಾಮಯ್ಯ ಅವರಿಗೆ ದಲಿತ ಪರ ಕಾಳಜಿ ಇದ್ದರೆ ದಲಿತರೇ ಮುಖ್ಯಮಂತ್ರಿ ಎಂದು ಘೋಷಿಸಿ ಎಂದು ನಾವು ಆಗ್ರಹಿಸಿದ್ದೆವು. ಆದರೆ ಇಲ್ಲಿಯೂ ಸಿದ್ದರಾಮಯ್ಯ ಬುರುಡೆ ಬಿಟ್ಟಿದ್ದಾರೆ. ದಲಿತರು ಸಿಎಂ ಆದರೆ ಸ್ವಾಗತವಂತೆ. ಆದರೆ ಅವರೂ ದಲಿತರಂತೆ ಹಾಗಾದರೆ, ಸಿದ್ದರಾಮಯ್ಯ ಏನು ಹೇಳಿದಂತಾಯ್ತು ಎಂದು ಪ್ರಶ್ನಿಸಿದೆ.

ಸಿದ್ದರಾಮಯ್ಯನವರೇ, ನೀವು ಪರೋಕ್ಷವಾಗಿ ಏನನ್ನು ಸ್ಥಾಪಿಸಲು ಹೊರಟಿದ್ದೀರಿ? ದಲಿತ ಸಿಎಂ ಆದರೆ ಖುಷಿ, ನಾನು ದಲಿತನೇ" ಎಂದು ಹೇಳುವ ಮೂಲಕ ಮತ್ತೊಮ್ಮೆ ನಾನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಪಾದಿಸಿದಂತಾಯ್ತು. ನಿಮ್ಮ ಈ ಸ್ವಾರ್ಥ ಜನರಿಗೆ ಅರ್ಥವಾಗುವುದಿಲ್ಲ ಎಂದು ಭಾವಿಸಿದ್ದೀರಾ? ಎಂದು ಬಿಜೆಪಿ ಹರಿಹಾಯ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com