ಸಿಎಂ ಬೊಮ್ಮಾಯಿಗೆ ಪ್ರತಿಷ್ಠೆಯ ಕಣವಾಗಿರುವ ಹಾನಗಲ್ ಉಪ ಚುನಾವಣೆ: ಬಂಡಾಯರೊಂದಿಗೆ ಚರ್ಚೆ, ಮನವೊಲಿಕೆಗೆ ಯತ್ನ

ಅಕ್ಟೋಬರ್ 30ರಂದು ನಡೆಯಲಿರುವ ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಗೆ ಇನ್ನು ಕೇವಲ ಮೂರು ವಾರ ಬಾಕಿಯಷ್ಟೆ. ತಮ್ಮ ತವರು ಜಿಲ್ಲೆ ಹಾವೇರಿಯಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರವಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಇದು ಪ್ರತಿಷ್ಠೆಯ ಕಣವಾಗಿದೆ.
ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Updated on

ದಾವಣಗೆರೆ: ಅಕ್ಟೋಬರ್ 30ರಂದು ನಡೆಯಲಿರುವ ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಗೆ ಇನ್ನು ಕೇವಲ ಮೂರು ವಾರ ಬಾಕಿಯಷ್ಟೆ. ತಮ್ಮ ತವರು ಜಿಲ್ಲೆ ಹಾವೇರಿಯಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರವಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಇದು ಪ್ರತಿಷ್ಠೆಯ ಕಣವಾಗಿದೆ.

ನಿನ್ನೆ ಮತ್ತು ಮೊನ್ನೆ ಸಿಎಂ ಬೊಮ್ಮಾಯಿಯವರು ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ್ ಅವರಿಗೆ ಸೇರಿದ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಸಭೆ ನಡೆಸಿ ಹಾನಗಲ್ ವಿಧಾನಸಭಾ ಕ್ಷೇತ್ರದ ಗೆಲುವಿಗೆ ಚುನಾವಣಾ ತಂತ್ರಗಳ ಬಗ್ಗೆ ಚರ್ಚಿಸಿದ್ದಾರೆ.

ಹಾನಗಲ್ ಕ್ಷೇತ್ರದಲ್ಲಿ ಎದ್ದಿರುವ ಭಿನ್ನಮತವನ್ನು ಶಮನಗೊಳಿಸಲು ಸಹ ಮುಖ್ಯಮಂತ್ರಿಗಳು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯ ಬಂಡಾಯ ಶಾಸಕ ಚನ್ನಪ್ಪ ಆರ್ ಬಳ್ಳಾರಿಯವರು ನಾಮಪತ್ರ ಸಲ್ಲಿಕೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡಲು ಮನವೊಲಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಹಾವೇರಿ ಸಂಸದ ಶಿವಕುಮಾರ್ ಉದಾಸಿಯವರ ಪತ್ನಿ ರೇವತಿ ಉದಾಸಿಯವರಿಗೆ ಟಿಕೆಟ್ ಸಿಗುವ ನಿರೀಕ್ಷೆಯಿತ್ತು, ಹಾಗಾಗಿ ಅವರಿಗೂ ಅಸಮಾಧಾನವಾಗಿದೆ, ಅವರ ಅಸಮಾಧಾನವನ್ನು ಕೂಡ ಶಮನಗೊಳಿಸಲು ಸಿಎಂ ಪ್ರಯತ್ನಿಸುತ್ತಿದ್ದಾರೆ. ಹಾನಗಲ್ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಶಿವರಾಜ್ ಸಜ್ಜನರ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಶಾಸಕರಾಗಿದ್ದ ಸಿಎಂ ಉದಾಸಿಯವರ ನಿಧನದಿಂದ ಇಲ್ಲಿಗೆ ಉಪ ಚುನಾವಣೆ ಅನಿವಾರ್ಯವಾಗಿದೆ.

ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಬೊಮ್ಮಾಯಿಯವರು ಈಗಾಗಲೇ ಹಲವು ಸುತ್ತಿನ ಗುಪ್ತ ಮಾತುಕತೆ, ಸಭೆಗಳನ್ನು ಪಂಚಮಸಾಲಿ ನಾಯಕರುಗಳಾದ ಬಿ ಸಿ ಉಮಾಪತಿ ಮತ್ತು ಚಂದ್ರಶೇಖರ ಪೂಜಾರ್, ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್, ಸ್ವತಂತ್ರ ಅಭ್ಯರ್ಥಿ ಚನ್ನಪ್ಪ ಆರ್ ಬಳ್ಳಾರಿ, ಸಂಸದ ಸಿದ್ದೇಶ್ವರ್ ಮತ್ತು ಶಿವಕುಮಾರ್ ಉದಾಸಿ ಹಾಗೂ ಸಚಿವರುಗಳಾದ ಸುನಿಲ್ ಕುಮಾರ್, ಬಿ ಸಿ ಪಾಟೀಲ್ ಮತ್ತು ಆರ್ ಮುನಿರತ್ನ ಅವರೊಂದಿಗೆ ನಡೆಸಿದ್ದಾರೆ.

ನಾನು ಎರಡು ವಿಷಯಗಳನ್ನು ಮಾತನಾಡಲು ದಾವಣಗೆರೆಗೆ ಬಂದಿದ್ದೇನೆ, ಒಂದು ದಾವಣಗೆರೆಯ ಅಭಿವೃದ್ಧಿ. ಜಿಲ್ಲೆಯ ಚುನಾವಣಾ ಪ್ರತಿನಿಧಿಗಳ ಜೊತೆ ಈ ಕುರಿತು ಮಾತನಾಡಿದ್ದೇನೆ. ಎರಡನೆಯದಾಗಿ ಹಾನಗಲ್ ಕ್ಷೇತ್ರದ ಉಪ ಚುನಾವಣೆ ಗೆಲ್ಲಲು ಚುನಾವಣಾ ಕಾರ್ಯತಂತ್ರ ಬಗ್ಗೆ ಚರ್ಚಿಸಲು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಚನ್ನಪ್ಪ ಬಳ್ಳಾರಿಯವರ ಸ್ಪರ್ಧೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನಾವು ಹಳೆಯ ಸ್ನೇಹಿತರು, ನಾಮಪತ್ರ ಹಿಂಪಡೆಯಲು ಅವರನ್ನು ಕೇಳಿಕೊಂಡಿದ್ದೇನೆ. ತಮ್ಮ ಸಮುದಾಯದ ನಾಯಕರು ಮತ್ತು ಇತರರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ ಎಂದರು.

ನಾನು ಟಿಕೆಟ್ ನಿರೀಕ್ಷೆ ಮಾಡಿದ್ದೆ. ಪಕ್ಷ ನನಗೆ ಟಿಕೆಟ್ ಏಕೆ ನಿರಾಕರಿಸಿದೆ ಎಂದು ಗೊತ್ತಾಗುತ್ತಿಲ್ಲ, ಪಂಚಮಸಾಲಿ ಲಿಂಗಾಯತ ಸಮುದಾಯದ ಜನರು ನಾನು ಸ್ಪರ್ಧಿಸುವುದನ್ನು ಬಯಸಿದ್ದರು. ಹಾಗಾಗಿ ನಾನು ನಾಮಪತ್ರ ಸಲ್ಲಿಸಿದ್ದೇನೆ. ನಾಮಪತ್ರ ಹಿಂಪಡೆತ ಬಗ್ಗೆ ಇಂದು ತೀರ್ಮಾನ ಮಾಡುತ್ತೇನೆ ಎಂದು ಚನ್ನಪ್ಪ  ಬಳ್ಳಾರಿ ಹೇಳಿದ್ದಾರೆ.

ಸಿಎಂ ಬೊಮ್ಮಾಯಿ ನನಗೆ ಆತ್ಮೀಯ ಸ್ನೇಹಿತ. ಉಪ ಚುನಾವಣೆ ಫಲಿತಾಂಶ ಬಿಜೆಪಿಗೆ ವಿರುದ್ಧವಾಗಿ ಬಂದರೆ ಬೊಮ್ಮಾಯಿಯವರಿಗೆ ಸಮಸ್ಯೆಯಾಗುತ್ತದೆ. ಆ ಬಗ್ಗೆ ಕೂಡ ನಾನು ಯೋಚನೆ ಮಾಡುತ್ತಿದ್ದೇನೆ. ನನ್ನ ಸೋದರ ವಿರುಪಾಕ್ಷಪ್ಪ ಬಳ್ಳಾರಿ ಬ್ಯಾಡಗಿ ಕ್ಷೇತ್ರದ ಬಿಜೆಪಿ ಶಾಸಕ. ಹೀಗಾಗಿ ನಾನು ಸ್ವತಂತ್ರ ಶಾಸಕನಾಗಬಾರದೇಕೆ ಎಂದು ಚನ್ನಪ್ಪ ಬಳ್ಳಾರಿ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com