ದೇವೇಗೌಡರೂ ವಿರೋಧ ಪಕ್ಷ ನಾಯಕರಾಗಿದ್ದರು; 'ಪುಟಗೋಸಿ' ಎನ್ನುವುದು ಸಾಂವಿಧಾನಿಕ ಹುದ್ದೆಗೆ ತೋರಿಸುವ ಅಗೌರವ: ಸಿದ್ದರಾಮಯ್ಯ

ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬೀಳಲು ಹೆಚ್ ಡಿ ಕುಮಾರಸ್ವಾಮಿಯವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
Updated on

ಕಲಬುರಗಿ: ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುರಿದು ಬೀಳಲು ಹೆಚ್ ಡಿ ಕುಮಾರಸ್ವಾಮಿಯವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕಲಬುರಗಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿನ್ನೆ ಮೈಸೂರಿನಲ್ಲಿ ಹೆಚ್ ಡಿ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡುವ ಮೂಲಕ ಉತ್ತರ ಕೊಟ್ಟಿದ್ದಾರೆ.

ನನ್ನ ವಿರುದ್ಧ ಕುಮಾರಸ್ವಾಮಿ ಮಾತನಾಡುತ್ತಿರುವ ಆರೋಪಗಳು ಅಪ್ಪಟ ಸುಳ್ಳು. ಕುಮಾರಸ್ವಾಮಿಯವರಿಗೆ ಎರಡು ನಾಲಿಗೆಯಿದೆಯೇ, ಮೈತ್ರಿ ಸರ್ಕಾರ ರಚನೆಯಾಗುವುದು ಬೇಡ ಎಂದಿದ್ದರೆ ಅವರೇಗೆ ಮುಖ್ಯಮಂತ್ರಿಯಾಗುತ್ತಿದ್ದರು, ಮೈತ್ರಿ ಸರ್ಕಾರ ಬೀಳಿಸಬೇಕೆಂದಿದ್ದರೆ ಅವರು ಸಿಎಂ ಆಗುವುದಕ್ಕೆ ನಾನು ಒಪ್ಪುತ್ತಿರಲಿಲ್ಲ, ಕುಮಾರಸ್ವಾಮಿಗೆ ನನ್ನನ್ನು ಕಂಡರೆ ಭಯ ಅನಿಸುತ್ತದೆ, ಯಾರ ಮೇಲೆ ಭಯವಿರುತ್ತದೋ ಅವರನ್ನು ಟಾರ್ಗೆಟ್ ಮಾಡುತ್ತಾರೆ, ರಾಜಕೀಯವಾಗಿ ಸಿದ್ದರಾಮಯ್ಯ ಕಂಡರೆ ಭಯವಾಗುತ್ತಿದೆ. ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಾರೆ, ಕಾಲು ಕೆರೆದು ಜಗಳ ಮಾಡಿಕೊಂಡು ಬರುವುದು ಕುಮಾರಸ್ವಾಮಿ ಅಭ್ಯಾಸ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿಯಾದವರು ಹೊಟೇಲ್ ನಲ್ಲಿ ಕುಳಿತು ಆಡಳಿತ ನಡೆಸುತ್ತಾರೆಯೇ, ಕುಮಾರಸ್ವಾಮಿಯವರು ಸಿಗುತ್ತಿರಲಿಲ್ಲ, ಹೀಗಾಗಿಯೇ ಮೈತ್ರಿ ಸರ್ಕಾರ ಮುರಿದು ಬಿತ್ತು. ಬಿಜೆಪಿಗೆ ಕಾಂಗ್ರೆಸ್ ನಿಂದ 17 ಶಾಸಕರು ಹೋದರು, ಜೆಡಿಎಸ್ ನಿಂದ ಕೂಡ ಮೂವರು ಶಾಸಕರು ಹೋಗಿದ್ದಾರೆ, ಹಾಗಾದರೆ ಜೆಡಿಎಸ್ ನಿಂದ ಶಾಸಕರು ಬಿಜೆಪಿಗೆ ಹೋಗಲು ನಾನು ಕಾರಣವೇ ಎಂದು ಕುಮಾರಸ್ವಾಮಿಯನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.

ನಾನು ಐದು ದಶಕಗಳಿಂದ ರಾಜಕೀಯದಲ್ಲಿದ್ದೇನೆ, ಕುಮಾರಸ್ವಾಮಿಯವರು ರಾಜಕೀಯವಾಗಿ ಇತ್ತೀಚಿನವರು, 1996ರವರೆಗೆ ಅವರು ಎಲ್ಲಿದ್ದರು ಎಂದು ಕೂಡ ಸಿದ್ದರಾಮಯ್ಯ ತಾನು ರಾಜಕೀಯದಲ್ಲಿ ಕುಮಾರಸ್ವಾಮಿಗಿಂತ ಅನುಭವಿ ಎಂದು ಟಾಂಗ್ ಕೊಟ್ಟರು.

ಸಾಂವಿಧಾನಿಕ ಹುದ್ದೆಗೆ ಅಗೌರವ ತೋರಿಸಬಾರದು: ವಿರೋಧ ಪಕ್ಷ ನಾಯಕ ಹುದ್ದೆ ಪುಟಗೋಸಿ ಹುದ್ದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಸಾಂವಿಧಾನಿಕ ಹುದ್ದೆಗೆ ಅಗೌರವ ತೋರಿಸಿದ್ದಾರೆ, ಹಿಂದೆ ಅವರ ತಂದೆ ಹೆಚ್ ಡಿ ದೇವೇಗೌಡರು ವಿರೋಧ ಪಕ್ಷದ ನಾಯಕನಾಗಿರಲಿಲ್ಲವೇ ಹಾಗಾದರೆ ಅವರು ಪುಟಗೋಸಿ ಹುದ್ದೆ ಹೊಂದಿದ್ದರೇ, ಕುಮಾರಸ್ವಾಮಿ ಹೀಗೆ ಮಾತನಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಸಾರ್ವಜನಿಕವಾಗಿ ಒಬ್ಬ ಮುಖ್ಯಮಂತ್ರಿಯಾಗಿದ್ದವರು ಅವಮಾನವಾಗುವಂತೆ ಮಾತನಾಡುವುದು ಸರಿಯಲ್ಲ, ಎರಡೆರಡು ಬಾರಿ ಸಿಎಂ ಆಗಿದ್ದವರು ಸಾರ್ವಜನಿಕವಾಗಿ ಮಾತನಾಡುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com