ಬೆಲೆ ಏರಿಕೆಗೆ ಸರ್ಕಾರವನ್ನು ಬೊಟ್ಟು ಮಾಡಿ ತೋರಿಸಿ ದೂಷಿಸುವುದು ಸಮಂಜಸವಲ್ಲ: ಸಿಎಂ ಬೊಮ್ಮಾಯಿ

ಬೆಲೆ ಏರಿಕೆ ಎಂಬುದು ನಿರಂತರ ಪ್ರಕ್ರಿಯೆ. ಇದಕ್ಕೆ ಯಾವುದೇ ಸರ್ಕಾರವನ್ನು ನಿರ್ದಿಷ್ಠವಾಗಿ ಬೊಟ್ಟು ಮಾಡಿ ತೋರಿಸಿ ದೂಷಣೆ ಮಾಡುವುದು ಸಮಂಜಸವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಸವರಾಜ್ ಬೊಮ್ಮಾಯಿ
ಬಸವರಾಜ್ ಬೊಮ್ಮಾಯಿ
Updated on

ಬೆಂಗಳೂರು: ಬೆಲೆ ಏರಿಕೆ ಎಂಬುದು ನಿರಂತರ ಪ್ರಕ್ರಿಯೆ. ಇದಕ್ಕೆ ಯಾವುದೇ ಸರ್ಕಾರವನ್ನು ನಿರ್ದಿಷ್ಠವಾಗಿ ಬೊಟ್ಟು ಮಾಡಿ ತೋರಿಸಿ ದೂಷಣೆ ಮಾಡುವುದು ಸಮಂಜಸವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸಭೆಯಲ್ಲಿಂದು ನಿಯಮ 69ರ ಅಡಿ ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಅವರು, ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಕಾರಣ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ಸಾರಾಸಗಟಾಗಿ ಅಂಕಿ-ಅಂಶಗಳ ಸಮೇತ ಸದನದ ಮುಂದಿಟ್ಟರು. ಈ ಹಂತದಲ್ಲಿ ಆಡಳಿತರೂಢ ಬಿಜೆಪಿ ಪ್ರತಿಪಕ್ಷವಾದ ಕಾಂಗ್ರೆಸ್ ಸದಸ್ಯರ ನಡುವೆ ಬಿಜೆಪಿ ಲೂಟ್-ಕಾಂಗ್ರೆಸ್ ಲೂಟ್, ಬಿಜೆಪಿಗೆ ದಿಕ್ಕಾರ , ಕಾಂಗ್ರೆಸ್ ಗೆ ದಿಕ್ಕಾರದ ಘೋಷಣೆಗಳು ಪರಸ್ಪರರ ವಿರುದ್ಧ ಸದನದಲ್ಲಿ ಮೊಳಗಿದವು.

1973ರಿಂದ 79ರವೆಗೆ ಪೆಟ್ರೋಲ್ ಬೆಲೆ ಮೂರು ರೂ. ಹೆಚ್ಚಿಗಾಯಿತು. 79 ರಿಂದ 86ರವರೆಗೆ 3 ರೂ.ನಿಂದ 8 ರೂ.ಯಷ್ಟು ಹೆಚ್ಚಾಯಿತು. 83 ರಿಂದ 93 ರವೆಗೆ 15 ರೂ. ಹೆಚ್ಚಾಯಿತು. 1993ರಿಂದ 2000ವರೆಗೆ 28 ರೂ.ಜಾಸ್ತಿಯಾಯಿತು. 2000 ದಿಂದ 2007ವರೆಗೆ 48 ರೂ.ಯಷ್ಟು ಬೆಲೆ ಹೆಚ್ಚಿತು. ಹೀಗೆ ಎಲ್ಲಾ ಸರ್ಕಾರಗಳ ಅವಧಿಯಲ್ಲಿ ತೈಲ ಬೆಲೆ ಹೆಚ್ಚಳವಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಹಿಂದಿನ ಬೆಲೆ ಏರಿಕೆ ಮಾಡಿದ ಸರ್ಕಾರಗಳನ್ನು ಏನೆಂದು ಕರೆಯಬೇಕು? ಕ್ರಿಮಿನಲ್ ಮತ್ತು ಲೂಟ್ ಸರ್ಕಾರಗಳ ಪಟ್ಟಿಗೆ ಹಿಂದಿನ ಸರ್ಕಾರಗಳನ್ನು ಸೇರಿಸಿಕೊಳ್ಳಬೇಕಲ್ಲವೇ ಎಂದಾಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಲೂಟ್ , ಮೋದಿ ಸರ್ಕಾರ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆಕ್ರೋಶಭರಿತರಾಗಿ ಹೇಳಿದರು.

ಕೆಲ ಕಾಲ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ನಡೆಯಿತು. ದೇಶದಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಕೋವಿಡ್ ದಾಳಿ ಮಾಡಿತು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 80 ಕೋಟಿ ಜನರಿಗೆ ಉಚಿತ ಪಡಿತರ ಧಾನ್ಯ ನೀಡುವ ಮೂಲಕ ದೇಶದಲ್ಲಿ ಯಾರೂ ಹಸಿವಿನಿಂದ ಸಾಯದಂತೆ ನೋಡಿಕೊಂಡಿದ್ದು ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಎಂದು ಬೆಲೆ ಏರಿಕೆಯನ್ನು ಮುಖ್ಯಮಂತ್ರಿಗಳು ಸಮರ್ಥಿಸಿದರು.

ಬೇರೆ ಯಾವುದೇ ಸಂಪನ್ಮೂಲ ಇಲ್ಲದೇ ಇದ್ದಾಗ ಪೆಟ್ರೋಲ್ ಮತ್ತು ಡೀಸೆಲ್ ತೆರಿಗೆಯಿಂದ ಬಡವರು, ಕಾರ್ಮಿಕರು ಮತ್ತು ಕೆಲ ಮಧ್ಯಮವರ್ಗದ ಜನರು ಹಸಿವಿನಿಂದ ಬಳಲದಂತೆ ನೋಡಿಕೊಂಡರು ಎಂದು ಹೇಳಿದರು.

ಧರಣಿಯಿಂದಲೇ ಇಂದು ವಿಧಾನಸಭೆ ಕಲಾಪ ಆರಂಭ:
ಜನಪರ ವಿಷಯಗಳನ್ನು ಪ್ರಸ್ತಾಪಿಸಲು ಅವಕಾಶ ಕೊಡದೇ ಹಕ್ಕುಮೊಟಕು ಮಾಡಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಸದಸ್ಯರು ಧರಣಿ ನಡೆಸಿದ ಪ್ರಸಂಗ ವಿಧಾನಸಭೆಯಲ್ಲಿ ಸೋಮವಾರ ಜರುಗಿತು.
ಕಲಾಪ ನಿಗದಿತ ಸಮಯಕ್ಕೆ ಆರಂಭವಾಗಿ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳುತ್ತಿದ್ದಂತೆ, ಜೆಡಿಎಸ್ ನ ಹೆಚ್.ಡಿ.ರೇವಣ್ಣ, ಶಿವಲಿಂಗೇಗೌಡ, ಬಂಡೆಪ್ಪ ಕಾಶಂಪೂರ್, ಅನ್ನದಾನಿ ಮೊದಲಾದವರುಯ ವಿಷಯ ಪ್ರಸ್ತಾಪಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರಶ್ನೋತ್ತರ ಮುಗಿಯಲಿ, ಬೇರೆ ರೂಪದಲ್ಲಿ ನಿಮ್ಮ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಸಭಾಧ್ಯಕ್ಷರು ಮನವಿ ಮಾಡಿಕೊಂಡರೂ ಜೆಡಿಎಸ್ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ಇದರಿಂದ ಆಕ್ರೋಶಗೊಂಡ ಸಭಾಧ್ಯಕ್ಷರು ನನ್ನ ಮೇಲೆ ಒತ್ತಡ ಹಾಕಿ ವಿಧಾನಸಭೆಯ ಕಾರ್ಯಕಲಾಪಗಳನ್ನು ಹಾಳು ಮಾಡುವುದು ನಿಮಗೆ ಶೋಭೆ ತರುವುದಿಲ್ಲ. ಒತ್ತಡದ ತಂತ್ರಕ್ಕೆ ನಾನು ಬಗ್ಗುವುದಿಲ್ಲ ಎಂದು ಗರಂ ಆದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಜೆಡಿಎಸ್ ಸದಸ್ಯರು ಎತ್ತಿರುವ ವಿಷಯಗಳ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡಿ. ಸರ್ಕಾರ ಉತ್ತರಿಸಲು ಸಮರ್ಥವಾಗಿದೆ. ಬೆಲೆ ಏರಿಕೆ ಚರ್ಚೆ ಕುರಿತಂತೆ ಸರ್ಕಾರದ ಉತ್ತರ ಮುಗಿಯಲಿ. ಇನ್ನೂ 3-4 ದಿನ ಕಲಾಪ ನಡೆಯಲಿದೆ. ಸರ್ಕಾರ ಎಲ್ಲಾ ವಿಚಾರಗಳಿಗೂ ಉತ್ತರಿಸಲಿದೆ ಜೆಡಿಎಸ್ ಸದಸ್ಯರು ಸಹಕರಿಸಬೇಕು. ಧರಣಿ ಬಿಟ್ಟು ತಮ್ಮ ಸ್ಥಾನಗಳಿಗೆ ಹಿಂತಿರುಗುವಂತೆ ಮನವಿ ಮಾಡಿಕೊಂಡರು.
ಸಭಾಧ್ಯಕ್ಷರು ಮತ್ತು ಮುಖ್ಯಮಂತ್ರಿ ಮನವಿಗೆ ಕರಗಿದ ಜೆಡಿಎಸ್ ಸದಸ್ಯರು ಧರಣಿ ಬಿಟ್ಟು ತಮ್ಮ ತಮ್ಮ ಆಸನಗಳಿಗೆ ಮರಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com