ಮಾಜಿ-ಹಾಲಿ ಪ್ರಧಾನ ಮಂತ್ರಿಗಳು ಕೈ ಕೈ ಹಿಡಿದು ದೆಹಲಿಯಲ್ಲಿ ಮಾತನಾಡಿಕೊಂಡದ್ದೇನು, ಭೇಟಿ ಹಿಂದೆ ಇದೆಯೇ ಗೇಮ್ ಪ್ಲ್ಯಾನ್?

ಈ ಹಿಂದಿನ ಕೆಲವು ಚುನಾವಣೆಗಳಲ್ಲಿ ಹಾಗೂ ಡಿಸೆಂಬರ್ 10ರ ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ದ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡುತ್ತಿರುವುದು ನೋಡಿದರೆ 2023ರ ವಿಧಾನಸಭೆ ಚುನಾವಣೆಗೆ ಬಹುದೊಡ್ಡ ಮಟ್ಟದಲ್ಲಿ ರಾಜಕೀಯ ಲೆಕ್ಕಾಚಾರ, ಗೇಮ್ ಪ್ಲ್ಯಾನ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ದೆಹಲಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಸೌಹಾರ್ದಯುತವಾಗಿ ಬರಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ
ದೆಹಲಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಸೌಹಾರ್ದಯುತವಾಗಿ ಬರಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಈ ಹಿಂದಿನ ಕೆಲವು ಚುನಾವಣೆಗಳಲ್ಲಿ ಹಾಗೂ ಡಿಸೆಂಬರ್ 10ರ ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ದ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಜೆಡಿಎಸ್(JDS) ಬಿಜೆಪಿಗೆ ಬೆಂಬಲ ನೀಡುತ್ತಿರುವುದು ನೋಡಿದರೆ 2023ರ ವಿಧಾನಸಭೆ ಚುನಾವಣೆಗೆ ಬಹುದೊಡ್ಡ ಮಟ್ಟದಲ್ಲಿ ರಾಜಕೀಯ ಲೆಕ್ಕಾಚಾರ, ಗೇಮ್ ಪ್ಲ್ಯಾನ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಇದಕ್ಕೆ ಪುಷ್ಠಿ ನೀಡಲು ಕಾರಣ ಮಾಜಿ ಪ್ರಧಾನಿ ದೇವೇಗೌಡರು ಇತ್ತೀಚೆಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಭೇಟಿ ಮಾಡಿ ಮಾತುಕತೆ ನಡೆಸಿರುವುದು. ದೇವೇಗೌಡರು (HD Deve Gowda) ದೆಹಲಿಗೆ ಭೇಟಿ ನೀಡಿದ್ದು, ಪ್ರಧಾನಿಯವರು ಅವರನ್ನು ಬರಮಾಡಿಕೊಂಡು ಆತಿಥ್ಯ ವಹಿಸಿದ ರೀತಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದು ರಾಜಕೀಯ ಪಡಸಾಲೆಯಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. 

ಇಬ್ಬರು ನಾಯಕರ ಭೇಟಿ ಸೌಹಾರ್ದಯುತವಾಗಿದ್ದರೂ ಕೂಡ, ಹಾಸನದ ಅಭಿವೃದ್ಧಿಗೆ ಪ್ರಧಾನಿಯವರ ಜೊತೆ ಚರ್ಚೆ ನಡೆಸಿರುವುದಾಗಿ ಭೇಟಿ ಬಳಿಕ ದೇವೇಗೌಡರು ಹೇಳಿದ್ದರೂ ಕೂಡ ಈ ಭೇಟಿಗೆ ತನ್ನದೇ ಆದ ರಾಜಕೀಯ ಮಹತ್ವವಿದೆ. ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಮುಂದಿನ ನಡೆಯಲ್ಲಿ ಬದಲಾವಣೆಯನ್ನು ಇದು ತೋರಿಸುತ್ತಿದೆ. ಇಬ್ಬರೂ ಭೇಟಿ ಮಾಡಿ ಮಾತುಕತೆಯಾಡಿ ಸುಮ್ಮನಾಗುತ್ತಿದ್ದರೆ ಇದು ಅಷ್ಟೊಂದು ಸದ್ದು ಮಾಡುತ್ತಿರಲಿಲ್ಲ. ದೇವೇಗೌಡರ ಭೇಟಿಯನ್ನು ಈಗಾಗಲೇ ರಾಜ್ಯದ ಹಲವು ಬಿಜೆಪಿ ನಾಯಕರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಫೋಟೋ ಹಾಕಿ ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಈ ಭೇಟಿಗೆ ಸಾಕಷ್ಟು ರೆಕ್ಕೆಪುಕ್ಕ ಸೇರಿದೆ.

ನಿನ್ನೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (H D Kumaraswamy), ದೇವೇಗೌಡರು ದೆಹಲಿಯಿಂದ ಹಿಂತಿರುಗಿದ ನಂತರ ಬಿಜೆಪಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಂಬಲ ನೀಡುವ ಸಂಬಂಧ ಮಾತುಕತೆ ನಡೆಸುತ್ತೇನೆ ಎಂದಿರುವುದು ಇನ್ನಷ್ಟು ಕುತೂಹಲ ಕೆರಳಿಸುತ್ತಿದೆ. ದೇವೇಗೌಡರು ಮೋದಿಯವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಕೇವಲ ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ ಮಾತ್ರವಲ್ಲದೆ ಅದರಿಂದಾಚೆಗೂ ಚರ್ಚೆ ನಡೆದಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ನಿನ್ನೆ ರಾತ್ರಿ ದೇವೇಗೌಡರು ಬೆಂಗಳೂರಿಗೆ ಹಿಂತಿರುಗಿದ್ದಾರೆ. ಇಂದು ಬಿಜೆಪಿಗೆ ಬೆಂಬಲ ನೀಡುವ ಸಂಬಂಧ ಜೆಡಿಎಸ್ ಘೋಷಣೆ ಮಾಡುವ ಸಾಧ್ಯತೆಯಿದೆ. ಅಲ್ಲದೆ ಜೆಡಿಎಸ್ ನ ಸ್ಥಳೀಯ ನಾಯಕರಿಗೆ ಕೂಡ ಬಿಜೆಪಿಗೆ ಬೆಂಬಲ ನೀಡುವಂತೆ ಜೆಡಿಎಸ್ ವರಿಷ್ಠರು ಸೂಚಿಸುವ ಸಾಧ್ಯತೆಯಿದೆ.

ಚಿಕ್ಕಮಗಳೂರಿನಲ್ಲಿ ಜೆಡಿಎಸ್ ನಾಯಕರು ಈಗಾಗಲೇ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ಅಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಶಿವಮೊಗ್ಗದ ಭದ್ರಾವತಿ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಜೆಡಿಎಸ್ ಸ್ವಲ್ಪ ಮಟ್ಟಿನ ಪ್ರಭಾವ ಹೊಂದಿದೆ. ಚಿತ್ರದುರ್ಗದಲ್ಲಿ ಸ್ಥಳೀಯ ಜೆಡಿಎಸ್ ನಾಯಕರು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ತಾನು ಸ್ಪರ್ಧಿಸುವ 6 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ತಟಸ್ಥವಾಗಿರಬೇಕೆಂದು ಜೆಡಿಎಸ್ ನಿರೀಕ್ಷೆಯಿಟ್ಟುಕೊಂಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಜೆಡಿಎಸ್ 4 ಸೀಟುಗಳನ್ನು ಮತ್ತೆ ಪಡೆಯಲು ನೋಡುತ್ತಿದ್ದು, ಹಾಸನ, ಮಂಡ್ಯ, ತುಮಕೂರು, ಮೈಸೂರು, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಇಳಿಸಿದೆ.

ಜೆಡಿಎಸ್ ತಂತ್ರವೇನು?: ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆಲ್ಲದಿರುವಂತೆ ತಡೆಯುವುದು ಜೆಡಿಎಸ್ ತಂತ್ರಗಾರಿಕೆಯಾಗಿದ್ದು ಅದಕ್ಕಾಗಿ ಬಿಜೆಪಿಗೆ ಬೆಂಬಲ, ವಿಧಾನ ಪರಿಷತ್ ನಲ್ಲಿ 13 ಸೀಟುಗಳನ್ನು ಬಿಜೆಪಿ ಗೆಲ್ಲಲು ಸಹಾಯ ಮಾಡುವುದು.

2023ರ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು (Siddaramaiah) ಸೋಲಿಸುವುದು ಮುಖ್ಯ ಗುರಿಯಾಗಿರುವುದರಿಂದ ಇದೇ ತಂತ್ರವನ್ನು ಜೆಡಿಎಸ್ ಅನುಸರಿಸುವ ಸಾಧ್ಯತೆಯಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸಿದ್ದರಾಮಯ್ಯ ವಿರೋಧಿ ಅಲೆ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com