2023ರ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರವನ್ನು ಸಿದ್ದರಾಮಯ್ಯನವರಿಗೆ ಬಿಟ್ಟುಕೊಡುವುದಿಲ್ಲ: ಮಾಜಿ ಶಾಸಕ ಚಿಮ್ಮನಕಟ್ಟಿ ಹೇಳಿಕೆ

2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಕಷ್ಟು ಸಾರಿ ಹೇಳಿದ್ದಾರೆ. ಆದರೆ ಇದಕ್ಕೆ ಅವರದೇ ಪಕ್ಷದ ಮಾಜಿ ಸಚಿವ 2018ರಲ್ಲಿ ಸಿದ್ದರಾಮಯ್ಯನವರಿಗೆ ಬೇಕಾಗಿ 5 ಬಾರಿ ಶಾಸಕರಾಗಿದ್ದು ಕ್ಷೇತ್ರ ಬಿಟ್ಟುಕೊಟ್ಟ ಬಿ ಬಿ ಚಿಮ್ಮನಕಟ್ಟಿ ಸಿಡಿದೆದ್ದಿದ್ದಾರೆ.
ಮಾಜಿ ಶಾಸಕ ಬಿ ಬಿ ಚಿಮ್ಮನಕಟ್ಟಿ ಮತ್ತು ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಮಾಜಿ ಶಾಸಕ ಬಿ ಬಿ ಚಿಮ್ಮನಕಟ್ಟಿ ಮತ್ತು ಸಿದ್ದರಾಮಯ್ಯ(ಸಂಗ್ರಹ ಚಿತ್ರ)

ಬಾಗಲಕೋಟೆ: 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಸಾಕಷ್ಟು ಸಾರಿ ಹೇಳಿದ್ದಾರೆ. ಆದರೆ ಇದಕ್ಕೆ ಅವರದೇ ಪಕ್ಷದ ಮಾಜಿ ಸಚಿವ 2018ರಲ್ಲಿ ಸಿದ್ದರಾಮಯ್ಯನವರಿಗೆ(Siddaramaiah) ಬೇಕಾಗಿ 5 ಬಾರಿ ಶಾಸಕರಾಗಿದ್ದು ಕ್ಷೇತ್ರ ಬಿಟ್ಟುಕೊಟ್ಟ ಬಿ ಬಿ ಚಿಮ್ಮನಕಟ್ಟಿ(B B Chimmanakatti) ಸಿಡಿದೆದ್ದಿದ್ದಾರೆ.

2018ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ ನನ್ನ ಕ್ಷೇತ್ರವನ್ನು ಬಿಟ್ಟುಕೊಟ್ಟು ತ್ಯಾಗ ಮಾಡಿದ್ದರಿಂದ ನನ್ನ ರಾಜಕೀಯ ಭವಿಷ್ಯ ತೂಗುಯ್ಯಾಲೆಯಾಗಿದೆ. ಮುಂದಿನ ಸಲ ನಾನು ಬಿಟ್ಟುಕೊಡುವುದಿಲ್ಲ, ಅವರು 2023ರ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಅವರ ಹಿಂದಿನ ವರುಣ ಕ್ಷೇತ್ರದಿಂದಲೇ ಸ್ಪರ್ಧಿಸಲಿ. ಬಾದಾಮಿಯಿಂದ ಅವರು ಸ್ಪರ್ಧಿಸಬಾರದು. ಬಾದಾಮಿಯಿಂದ ನಾನು ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗಿ ಬರುತ್ತೇನೆ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾನು ಕೂಡ ಸಚಿವನಾಗಬಹುದಲ್ಲವೇ ಎಂದು ಚಿಮ್ಮನಕಟ್ಟಿ ಕೇಳುತ್ತಾರೆ. 

ನಿನ್ನೆ ಬಾದಾಮಿಯಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣಾ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಟ್ಟಿನಿಂದಲೇ ಮಾತನಾಡಿದ್ದಾರೆ. ಚಿಮ್ಮನಕಟ್ಟಿಯವರ ಈ ಮಾತು ಸಭಾಂಗಣದಲ್ಲಿದ್ದ ಹಲವರಿಗೆ ಅಚ್ಚರಿಯನ್ನುಂಟುಮಾಡಿತು. ಸಿದ್ದರಾಮಯ್ಯನವರು ಬಾದಾಮಿಗೆ ಬಂದ ನಂತರ ತಮ್ಮನ್ನು ಬೇಕೆಂದೇ ಪಕ್ಷದ ಚಟುವಟಿಕೆಗಳಲ್ಲಿ ಮೂಲೆಗುಂಪು ಮಾಡುತ್ತಿದ್ದಾರೆ ಎಂಬ ಸಿಟ್ಟು ಅವರದಲ್ಲಿದೆ. 

ಸಿದ್ದರಾಮಯ್ಯನವರು 2018ರಲ್ಲಿ ಮೈಸೂರಿನ ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ ಸುಲಭವಾಗಿ ಗೆಲ್ಲುತ್ತಿದ್ದರು. ಆದರೆ ಅವರು ಮಗ ಯತೀಂದ್ರಗೆ ಬೇಕಾಗಿ ಕ್ಷೇತ್ರ ಬಿಟ್ಟುಕೊಟ್ಟರು. ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಲು ಸಾಧ್ಯವಾಗುವುದಿಲ್ಲ ಎಂದಾದರೆ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಏಕೆ ಸ್ಪರ್ಧಿಸಬೇಕು ಎಂಬುದು ಚಿಮ್ಮನಕಟ್ಟಿಯವರ ಪ್ರಶ್ನೆಯಾಗಿದೆ. 

ಚಿಮ್ಮನಕಟ್ಟಿಯವರಿಗೆ ವಿಧಾನ ಪರಿಷತ್ ಸದಸ್ಯ ಅಥವಾ ಪಕ್ಷದಲ್ಲಿ ಉತ್ತಮ ಹುದ್ದೆ ಕೊಡಿಸುವ ಭರವಸೆಯನ್ನು ಕೂಡ ನೀಡಲಾಗಿತ್ತು. ಆದರೆ ಅದನ್ನು ಮಾಡಲಿಲ್ಲ, ಈ ಎಲ್ಲಾ ಬೇಸರ, ಸಿಟ್ಟು ಅವರಲ್ಲಿದೆ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ನಾಯಕರೊಬ್ಬರು ಹೇಳುತ್ತಾರೆ. 

ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಆರ್ ಬಿ ತಿಮ್ಮಾಪುರ, ಚಿಮ್ಮನಕಟ್ಟಿ ತಮ್ಮ ಅಭಿಪ್ರಾಯ ಹೇಳಿದ್ದಾರೆ, ಈ ಬಗ್ಗೆ ಪಕ್ಷದಲ್ಲಿ ಚರ್ಚೆ, ಸಮಾಲೋಚನೆ ನಡೆಯಲಿದೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇದರಿಂದ ಡಿಸೆಂಬರ್ 10ರ ವಿಧಾನ ಪರಿಷತ್ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು. 

ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಮಾತನಾಡಿರುವ ಚಿಮ್ಮನಕಟ್ಟಿ ಅವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳುತ್ತದೆಯೇ ಎಂದು ಕೇಳಿದಾಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್ ಜಿ ನಂಜಯನಮಠ, ಪಕ್ಷದ ರಾಜ್ಯ ಹೈಕಮಾಂಡ್ ವರದಿ ಕೇಳಿದರೆ ನೀಡುತ್ತೇನೆ. ಚಿಮ್ಮನಕಟ್ಟಿ ಅವರ ಮೇಲೆ ಕ್ರಮ ಕೈಗೊಳ್ಳುವುದು, ಬಿಡುವುದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ. ಇಂತಹ ವರ್ತನೆಯನ್ನು ನಾವು ಖಂಡಿಸುತ್ತೇವೆ. ಅವರಿಗೆ ಅಸಮಾಧಾನವಿದ್ದರೆ ಸೂಕ್ತ ವೇದಿಕೆಯಲ್ಲಿ ತಿಳಿಸಬೇಕಾಗಿತ್ತು, ಅದು ಬಿಟ್ಟು ಸಾರ್ವಜನಿಕವಾಗಿ ಹೇಳುವುದು ಸರಿಯಲ್ಲ ಎಂದಿದ್ದಾರೆ.

ಇನ್ನು ಈ ಬಗ್ಗೆ ಸಿದ್ದರಾಮಯ್ಯನವರನ್ನು ಪತ್ರಕರ್ತರು ಕೇಳಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಸಿದ್ದರಾಮಯ್ಯನವರು 2018ರ ವಿಧಾನಸಭೆ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಬಾದಾಮಿ ಕ್ಷೇತ್ರದಲ್ಲಿ ನಿಂತು ಅಲ್ಪ ಮತಗಳ ಅಂತರದಲ್ಲಿ ಬಿಜೆಪಿಯ ಶ್ರೀರಾಮುಲು ವಿರುದ್ಧ ಗೆಲುವು ಕಂಡಿದ್ದರು. ತಮ್ಮದೇ ಜಿಲ್ಲೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ನ ಜಿ ಟಿ ದೇವೇಗೌಡ ವಿರುದ್ಧ ಸೋಲು ಕಂಡರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com