ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ; 40 ಹಾಗೂ 10 ಪರ್ಸೆಂಟ್ ಕಮಿಷನ್ ಬಗ್ಗೆ ತನಿಖೆಯಾಗಲಿ ಎಂದ ಸಿದ್ದರಾಮಯ್ಯ

ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರವನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಗುರುವಾರ ಟ್ರ್ಯಾಕ್ಟರ್ ನಲ್ಲಿ ಪ್ರತಿಭಟನೆ ನಡೆಸಿದರು. 
ಕಾಂಗ್ರೆಸ್ ಟ್ರ್ಯಾಕ್ಟರ್ ರ್ಯಾಲಿ
ಕಾಂಗ್ರೆಸ್ ಟ್ರ್ಯಾಕ್ಟರ್ ರ್ಯಾಲಿ

ಬೆಳಗಾವಿ: ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರವನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಗುರುವಾರ ಟ್ರ್ಯಾಕ್ಟರ್ ನಲ್ಲಿ ಪ್ರತಿಭಟನೆ ನಡೆಸಿದರು. 

ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಭ್ರಷ್ಟಾಚಾರದ ಕುರಿತು ಪ್ರಮುಖವಾಗಿ ಆಪಾದನೆ ಮಾಡಿದರು. ಈ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅನೇಕ ಇಲಾಖೆಯ ಟೆಂಡರ್ ಪ್ರಕ್ರಿಯೆಯಲ್ಲಿ ಶೇಕಡಾ 40 ರಷ್ಟು ಕಮಿಷನ್ ಅನ್ನು ರಾಜ್ಯ ಸರ್ಕಾರಕ್ಕೆ ಕೊಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘದ ಕೆಂಪಣ್ಣ ಅನ್ನೋವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಗುತ್ತಿಗೆದಾರ ಸಂಘದಿಂದ ಪ್ರಧಾನಿಗೆ ಬರೆದ ಪತ್ರ ಬಿಡುಗಡೆಯಾಗಿದೆ.

ಈ ಬಗ್ಗೆ ತನಿಖೆ ಮಾಡಲು ಸದನ ಸಮಿತಿ ರಚನೆ ಮಾಡಿ. ಇದರಿಂದ ಸತ್ಯ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದ ಸಿದ್ದರಾಮಯ್ಯ, ಕಾಂಗ್ರೆಸ್ ಅವಧಿಯಲ್ಲಿ 10 ಪರ್ಸೆಂಟ್ ಲಂಚದ ಬಗ್ಗೆ ಈ ಹಿಂದೆ ಪ್ರಧಾನಿ ಮೋದಿ ಭಾಷಣ ಮಾಡಿದ್ದರು. ನಮ್ಮ ಸರ್ಕಾರದಲ್ಲಿ 10 ಪರ್ಸೆಂಟ್ ಹಾಗೂ ಪ್ರಸ್ತುತ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಸೇರಿಸಿ ತನಿಖೆ ಮಾಡಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ದುರಾಡಳಿತ ಹೆಚ್ಚಾಗಿದೆ. ಪ್ರವಾಹದಿಂದಾಗಿ ನಷ್ಟ ಅನುಭವಿಸಿದರೂ 2021ರ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಪರಿಹಾರ ದೊರೆತಿಲ್ಲ. ಕೊರೋನಾದಿಂದ ಮಡಿದವರಿಗೆ, ಪ್ರವಾಹದಲ್ಲಿ ಮನೆ ಕೆಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಈ ಬಾರಿ ರಾಜ್ಯದ 23 ಜಿಲ್ಲೆಗಳಲ್ಲಿ 3 ಬಾರಿ ಪ್ರವಾಹ ಬಂದಿದೆ. 12 ಲಕ್ಷ ಸಂತ್ರಸ್ತರಿಗೆ ಪರಿಹಾರ ಕೊಟ್ಟಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಬೆಳೆ ಹಾನಿಗೆ ಸಂಬಂಧಿಸಿದಂತೆ ಮೂರು ಪಟ್ಟು ಪರಿಹಾರ ಕೊಡಿ ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕೇಂದ್ರ ಸರ್ಕಾರದ ಧನ ಸಹಾಯವನ್ನು ನಿರೀಕ್ಷಿಸದೆ ರೈತರಿಗೆ ರಾಜ್ಯದ ಬೊಕ್ಕಸದಿಂದ ಪರಿಹಾರ ಕೊಡಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅದನ್ನು ಸರ್ಕಾರ ಮಾಡಲಿ. ತರಕಾರಿ, ಹೂವು, ಧಾನ್ಯ ಬೆಳೆದವರು ಕಷ್ಟದಲ್ಲಿದ್ದಾರೆ. 2019ರಲ್ಲಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ. ಈ ವರ್ಷ ಅಕಾಲಿಕ ಮಳೆಗೆ 39 ಸಾವಿರ ಮನೆಗಳು ಬಿದ್ದು ಹೋಗಿವೆ ಅವುಗಳಿಗೂ ಪರಿಹಾರ ಕೊಟ್ಟಿಲ್ಲ. ಪ್ರವಾಹಕ್ಕೆ ತುತ್ತಾಗುವ ಹಳ್ಳಿಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಕ್ರಮಕೈಗೊಂಡಿಲ್ಲ. ಒಂದೆಡೆ ಭ್ರಷ್ಟಾಚಾರ, ಬಿಟ್ ಕಾಯಿನ್ ಸರ್ಕಾರ, 40 ಪರ್ಸೆಂಟ್ ಎಂದು ರಾಜ್ಯ ಸರ್ಕಾರವನ್ನು ಕರೆಯಲಾಗುತ್ತಿದೆ. ರಾಜ್ಯದ ಜನರನ್ನು ಮರೆತು ಕೇವಲ ಲಂಚ ಹೊಡೆಯುತ್ತಾ ರಾಜ್ಯ ಸರ್ಕಾರ ಕುಳಿತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಿಮ್ಮ ಮೇಲೆ 10 ಪರ್ಸೆಂಟ್ ಕಮಿಷನ್ ಪಡೆಯುವ ಆಪಾದನೆ ಇದೆ ಎಂದು ಪತ್ರಕರ್ತರು ಪ್ರಶ್ನೆ ಮಾಡಿದಾಗ. ಈ ವೇಳೆ ಸುದ್ದಿಗಾರರ ಮೇಲೆ ಸಿಟ್ಟಾದ ಸಿದ್ದರಾಮಯ್ಯ, ಈ ಬಗ್ಗೆ ತನಿಖೆಯಾಗಲಿ. ಆದರೆ, 40 ಪರ್ಸೆಂಟ್ ಕಮಿಷನ್ ಬಗ್ಗೆ ಈವರೆಗೆ ರಾಜ್ಯ ಸರ್ಕಾರ ಒಪ್ಪಿಕೊಂಡಿಲ್ಲ. ಆದರೆ, ಕಾಂಗ್ರೆಸ್ ಅವಧಿಯಲ್ಲಿ ಕಮಿಷನ್ ಆರೋಪದ ಬಗ್ಗೆ ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರಾ ಎಂದು ಪ್ರಶ್ನೆಮಾಡಿದರು. ಸದ್ಯ ಈ ಎಲ್ಲ ಆರೋಪಗಳನ್ನು ಸೇರಿಸಿ ತನಿಖೆಯಾಗಲಿ ಎಂದು ಸುದ್ದಿಗಾರರ ಸಿದ್ದರಾಮಯ್ಯ ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com