ಎಂಇಎಸ್ ಅಂದರೆ ಮಹಾರಾಷ್ಟ್ರ ಹೇಡಿಗಳ ಸಮಿತಿ; ವಿಗ್ರಹ ವಿರೂಪಗೊಳಿಸಿದವರನ್ನು ಗುಂಡಿಟ್ಟು ಸಾಯಿಸಿ: ಸಚಿವ ಈಶ್ವರಪ್ಪ

ಸ್ವಾತಂತ್ರ್ಯ ಹೋರಾಟಕ್ಕಾಗಿ ಕ್ರಾಂತಿ ಹೆಜ್ಜೆ ಇಟ್ಟ ವೀರಯೋಧರ ವಿಗ್ರಹ ವಿರೂಪಗೊಳಿಸಿರುವ ಹೇಡಿಗಳಿಗೆ ಗುಂಡಿಟ್ಟು ಕೊಲ್ಲಬೇಕೆಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಕೆಎಸ್ ಈಶ್ವರಪ್ಪ
ಕೆಎಸ್ ಈಶ್ವರಪ್ಪ

ಬೆಳಗಾವಿ(ಸುವರ್ಣ ವಿಧಾನಸೌಧ): ಸ್ವಾತಂತ್ರ್ಯ ಹೋರಾಟಕ್ಕಾಗಿ ಕ್ರಾಂತಿ ಹೆಜ್ಜೆ ಇಟ್ಟ ವೀರಯೋಧರ ವಿಗ್ರಹ ವಿರೂಪಗೊಳಿಸಿರುವ ಹೇಡಿಗಳಿಗೆ ಗುಂಡಿಟ್ಟು ಕೊಲ್ಲಬೇಕೆಂದು ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ಇಂದು ವಿಧಾನಸಭೆಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಎಂಇಎಸ್ ಅನ್ನೋದು ಮಹಾರಾಷ್ಟ್ರ ಏಕೀಕರಣ ಸಮಿತಿ ಅಲ್ಲ.. ಮಹಾರಾಷ್ಟ್ರ ಹೇಡಿಗಳ ಸಮಿತಿ ಎಂದು ಆಕ್ರೋಶ ಹೊರ ಹಾಕಿದರು. ರಾತ್ರಿ ಹೊತ್ತು ಬಂದು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ.

ಜೀವಂತ ಗಂಡುಗಳಾದರೆ ಹಗಲು ಹೊತ್ತಿನಲ್ಲಿ ಬಂದು ಮುಟ್ಟಲಿ ಎಂದು ಸವಾಲು ಹಾಕಿದ ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಜೀವಂತವಾಗಿದ್ದಾಗಲೂ ಹೇಡಿಗಳು ಬ್ರಿಟಿಷರಿಗೆ ಹಿಡಿದುಕೊಟ್ಟರು. ಸತ್ತ ಮೇಲೂ ಈ ರೀತಿಯ ಹೇಡಿಗಳು ನಮ್ಮ ರಾಜ್ಯ, ದೇಶದಲ್ಲಿ ಇದ್ದಾರೆ. ಇಂತಹ ಹೇಡಿಗಳು ನಮ್ಮ ರಾಜ್ಯದಲ್ಲಿ ಇರಲು ಬಿಡಬಾರದು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಕೇಂದ್ರ ಸರ್ಕಾರಕ್ಕೆ ತಿಳಿಸಬೇಕು ಎಂದು ಆಕ್ರೋಶದಿಂದ ಹೇಳಿದರು.

ಸಂಗೊಳ್ಳಿ ರಾಯಣ್ಣ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ರಾತ್ರಿ ಹೊತ್ತಿನಲ್ಲಿ ಕೃತ್ಯಗಳನ್ನು ಮಾಡುತ್ತಿರುವ ಹೇಡಿಗಳನ್ನು ಗಡಿಪಾರು ಮಾಡುವುದಲ್ಲ. ಗುಂಡಿಕ್ಕಿ ಕೊಲ್ಲಬೇಕು. ಈ ಹೇಡಿಗಳಿಗೆ ಉತ್ತರ ಕೊಡುವ ಸಮಯ ಬಂದಿದೆ. ಕನ್ನಡ ಧ್ವಜ ಅನ್ನೋದು ಬಟ್ಟೆ ಅಲ್ಲ,  ತಾಯಿ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದರು. ಮಹಾರಾಷ್ಟ್ರದ ಹೇಡಿಗಳು ಕನ್ನಡ ನಾಡನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳಬಾರದು. ಆ ರೀತಿಯ ಕಠಿಣ ಕ್ರಮಕೈಗೊಳ್ಳುವ ಜರುಗಿಸಬೇಕಾಗಿದೆ. ಕೃತ್ಯ ನಡೆಸಿದವರ ವಿರುದ್ಧ ಸರಿಯಾದ ತನಿಖೆಯಾಗಬೇಕು.  ಅವರನ್ನು ಬಲಿ ಹಾಕಬೇಕು ಎಂದರು.

ಎಂಇಎಸ್ ಬ್ಯಾನ್ ಮಾಡಬೇಕು ಎಂಬುದು ಎಲ್ಲರ ಅಭಿಪ್ರಾಯ. ವ್ಯವಸ್ಥಿತ ಪಿತೂರಿ ನಡೆಸಿರುವವರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಬೇಕು. ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಹೊರಗೆ ಬರದಂತೆ ನೋಡಿಕೊಳ್ಳಬೇಕಾಗಿದೆ. ಕೃತ್ಯ ನಡೆಸಿದವರು ಯಾರು? ಅವರ ಉದ್ದೇಶ ಏನು? ಹೇಡಿಗಳ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಈಶ್ವರಪ್ಪ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com