ವಿಷಯಾಂತರಕ್ಕಾಗಿ ಮತಾಂತರ ನಿಷೇಧ ಕಾಯ್ದೆ: ಲವ್‌ ಮಾಡಿ ಮದುವೆಯಾದ್ರೆ ಲವ್‌ ಜಿಹಾದಾ?- ಡಿಕೆಶಿ

ಪ್ರಮುಖ ವಿಷಯಗಳಿಂದ ಎಲ್ಲರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯಿದೆ ಮಂಡಿಸಲು ಮುಂದಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಮಂಗಳವಾರ ಟೀಕಿಸಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಳಗಾವಿ: ಪ್ರಮುಖ ವಿಷಯಗಳಿಂದ ಎಲ್ಲರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯಿದೆ ಮಂಡಿಸಲು ಮುಂದಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಮಂಗಳವಾರ ಟೀಕಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತಾನಡಿದ ಅವರು, ಕಾಂಗ್ರೆಸ್‌ ಮೊದಲಿನಿಂದಲೂ ಇದನ್ನು ವಿರೋಧ ಮಾಡುತ್ತಿದೆ. ಸಂವಿಧಾನದ ವಿರುದ್ಧವಾಗಿ ಇದನ್ನು ತೆಗೆದುಕೊಳ್ಳಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಅಶಾಂತಿ ಮೂಡಿಸಲು. ರಾಜಕೀಯವಾಗಿ ಕೆಲ ವಿಷಯಗಳನ್ನ ವಿಷಯಾಂತರ ಮಾಡಲು ಈ ಮಸೂದೆ ಮಂಡನೆ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿದರು.

ಅಂಬೇಡ್ಕರ್ ಅವರು ಮಾಡಿದ ಸಂವಿಧಾನಕ್ಕೂ ಈ ತೀರ್ಮಾನ ಅನ್ವಯಿಸಲ್ಲ. ಅವರು ಬೌದ್ಧ ಧರ್ಮಕ್ಕೆ ಬಂದಿದ್ದರು. ಬೇರೆಬೇರೆ ಧರ್ಮದವರು ಬಂದು ಹರೇ ರಾಮ ಹರೇ ಕೃಷ್ಣಾ ಅಂತಾ ಭಜನೆ ಮಾಡ್ತಾರೆ. ಇದೊಂದು ಸೆಕ್ಯುಲರ್ ರಾಜ್ಯ. ಶಾಂತಿ ಭೂಮಿ, ಶಾಂತಿಯ ತೋಟ. ಶಾಂತಿ ಕೆಡಿಸಲು ಇದೊಂದು ಪ್ರಯತ್ನ ಎಂದು ಹೇಳಿದರು.

ಮೊಘಲರು, ಪರ್ಶಿಯನ್ನರು ಬಂದು ಆಳಿದರೂ ಎಲ್ಲಿ ಅವರ ಸಂಖ್ಯೆ ಜಾಸ್ತಿಯಾಯ್ತು. ಎಲ್ಲರಿಗೂ ಸೆಂಟ್ ಜೋಸೆಪ್, ಸೆಂಟ್ ಮಾರ್ಥಸ್, ಕ್ರೈಸ್ತ್  ಬೇಕು . ಎಲ್ಲರ ಮಕ್ಕಳಿಗೂ ಕಾನ್ವೆಂಟ್ ಬೇಕು.. ನಾನು ನಮ್ಮ ಹಳ್ಳಿಯಲ್ಲಿ ಕ್ರೈಸ್ತ್ ಸ್ಕೂಲ್ ನಲ್ಲಿ ಓದಿದೆ. ನನಗೆ ಯಾವತ್ತು ಅವರ ಧರ್ಮದ ಬಗ್ಗೆ ಭೋದಿಸಿಲ್ಲ ಎಲ್ಲಾದರೂ ಅವರು ಬಲವಂತ ಮಾಡಿದ್ದಾರಾ. ಅವರು ಸೇವೆ ನೀಡುತ್ತಿದ್ದಾರೆ. ಅವರಿಗೆ ಅನಗತ್ಯವಾಗಿ ಮಾನಸಿಕವಾಗಿ ಹಿಂಸೆ ಕೊಡುವ ಕೆಲಸ ಆಗ್ತಿದೆ ಎಂದು ಡಿಕೆಶಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮತಾಂತರ ನಿಷೇಧ ಕಾಯಿದೆ ಮಂಡನೆಯಿಂದ ಹೂಡಿಕೆ ಮಾಡುವವರು ಕೂಡ ಬರಲ್ಲ. ಇದು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿದೆ. ಇಷ್ಟು ವರ್ಷ ಮಾಡದಿದ್ದದ್ದು ಈಗೇಕೆ ಬಲವಂತ ಮಾಡ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.

ಮದುವೆ ಮೂಲಕ ಮತಾಂತರ ವಿಷಯವಾಗಿ ಪ್ರತಿಕ್ರಿಯಿಸಿದ ಅವರು, ಯಾರೋ ಲವ್‌ ಮಾಡಿ ಮದುವೆಯಾದ್ರೆ ಇನ್ಯಾರೋ ಹೇಗೆ ಹೊಣೆಯಾಗ್ತಾರೆ? ಬೇರೆಬೇರೆಯವರ ಹೃದಯಗಳು ಒಂದಾದರೆ ಅದು ಲವ್‌ ಜಿಹಾದಾ ಎಂದು ಪ್ರಶ್ನಿಸಿದರು. ಅಕ್ಕಿ ಒಂದು ಕಡೆ ಇರುತ್ತೆ, ಅರಿಶಿನ ಒಂದು ಕಡೆ ಇರುತ್ತೆ. ಅವೆರಡೂ ಸೇರಿ ಮಂತ್ರಾಕ್ಷತೆ ಆಗುತ್ತದೆ. ಹಾಗೆ ಬೇರೆಬೇರೆ ಧರ್ಮದವರ ಪ್ರೀತಿ, ಮದುವೆ ಎಂದು ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com