'ಜೆಡಿಎಸ್ ಮುಳುಗುತ್ತಿರುವ ಹಡಗು' ಎಂದ ಸಿದ್ದರಾಮಯ್ಯ; 'ಗೊಬೆಲಪ್ಪ ಬೂಸಿಭಜನೆ ಹೊಸದೇನೂ ಅಲ್ಲ' ಎಂದ ಕುಮಾರಸ್ವಾಮಿ
ಜೆಡಿಎಸ್ ಮುಳುಗುತ್ತಿರುವ ಹಡಗು, ಉತ್ತರ ಕರ್ನಾಟಕ ಭಾಗದಲ್ಲಿ ಅದರ ಅಸ್ತಿತ್ವವೇ ಇಲ್ಲ, ಅಶೋಕ್ ಪೂಜಾರಿಯವರಿಂದ ಸ್ವಲ್ಪ ಮಟ್ಟಿಗೆ ಸದ್ದು ಮಾಡುತ್ತಿದ್ದು, ಇಂದು ಅವರು ಅಧಿಕೃತವಾಗಿ ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
Published: 22nd December 2021 11:08 AM | Last Updated: 22nd December 2021 01:29 PM | A+A A-

ಹೆಚ್ ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ(ಸಂಗ್ರಹ ಚಿತ್ರ)
ಬೆಳಗಾವಿ/ಬೆಂಗಳೂರು: ಜೆಡಿಎಸ್ ಮುಳುಗುತ್ತಿರುವ ಹಡಗು, ಉತ್ತರ ಕರ್ನಾಟಕ ಭಾಗದಲ್ಲಿ ಅದರ ಅಸ್ತಿತ್ವವೇ ಇಲ್ಲ, ಅಶೋಕ್ ಪೂಜಾರಿಯವರಿಂದ ಸ್ವಲ್ಪ ಮಟ್ಟಿಗೆ ಸದ್ದು ಮಾಡುತ್ತಿದ್ದು, ಇಂದು ಅವರು ಅಧಿಕೃತವಾಗಿ ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರಿಂದ ಅವರ ರಾಜಕೀಯ ಭವಿಷ್ಯಕ್ಕೂ ನಮ್ಮ ಪಕ್ಷಕ್ಕೂ ಶಕ್ತಿ ಬಂದಿದೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ಬೆಳಗಾವಿಯಲ್ಲಿ ಹೇಳಿದ್ದರು.
ಅಶೋಕ್ ಪೂಜಾರಿ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುವ ಕಾರ್ಯಕ್ರಮದಲ್ಲಿ ಅವರು ಜೆಡಿಎಸ್ ನ್ನು ಟೀಕಿಸಿದ್ದರು. ಇನ್ನೂ ಹಲವು ಜೆಡಿಎಸ್ ನ ನಾಯಕರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ. ರಾಜಕೀಯದಲ್ಲಿ ಜನಶಕ್ತಿಯಿಂದ ಮಾತ್ರ ಮೇಲೆ ಬರಲು ಸಾಧ್ಯ, ಜನಶಕ್ತಿಯ ಮುಂದೆ ಯಾವ ರಾಜಕೀಯ ಶಕ್ತಿಯೂ ನಡೆಯುವುದಿಲ್ಲ ಎಂದಿದ್ದರು.
ಅದಕ್ಕೆ ಇಂದು ಸರಣಿ ಟ್ವೀಟ್ ಗಳ ಮೂಲಕ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸಿದ್ದರಾಮಯ್ಯಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದಾರೆ. ಜೆಡಿಎಸ್ ಮುಳುಗುವ ಪಕ್ಷವಾ, ತೇಲುವ ಪಕ್ಷವಾ ಎಂದು 2023ರ ವಿಧಾನಸಭೆ ಚುನಾವಣೆಯಲ್ಲಿ ನಾಡಿನ ಜನತೆ ತೋರಿಸಿಕೊಡುತ್ತಾರೆ. ಅಲ್ಲಿಯವರೆಗೂ ಸಿದ್ದಸೂತ್ರಧಾರನ ಆಪರೇಷನ್ ಹಸ್ತ ನಡೆಯುತ್ತಲೇ ಇರುತ್ತದೆ,
ಜೆಡಿಎಸ್ ಜಟ್ಟಿಗಳನ್ನು ಸೃಷ್ಟಿಸುವ ಪಕ್ಷ. ನಮ್ಮ ಜಟ್ಟಿಗಳನ್ನು ಎಗರಿಸಿಕೊಂಡು ಹೋಗುವ ʼಬ್ರೋಕರಪ್ಪʼನ ಕುತಂತ್ರಕ್ಕೆ ಹೆದರುವ ಪ್ರಶ್ನೆ ಇಲ್ಲ. ಹಿಂದೆ ದೇವರಾಜ ಅರಸು ಅವರಿಗೆ ನರಕಯಾತನೆ ನೀಡಿದ್ದ ಕಾಂಗ್ರೆಸ್, ಈಗ ʼಅಭಿನವ ಅರಸುʼ ಎಂದು ಪುಂಗಿ ಬಿಡುವ ʼಸುಳ್ಳುಸಿದ್ದಪ್ಪʼನಿಗೆ ಶರಣಾಗಿದೆ.ʼಸಿದ್ದಕಲೆʼಯ ನಿಷ್ಣಾತರಿಗೆ ಸುಳ್ಳೇ ದೇವರು, ಸುಳ್ಳೇ ಸರ್ವಸ್ವ. ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ಸುಳ್ಳು ಹೇಳಿಕೊಂಡು ಓಡಾಡುವ ʼಗೊಬೆಲಪ್ಪʼನ ʼಬೂಸಿಭಜನೆʼ ಹೊಸದೇನೂ ಅಲ್ಲ. ರಾಜಕೀಯ ಜನ್ಮಕೊಟ್ಟ ಪಕ್ಷದ ಬಗ್ಗೆಯೇ ಹಗುರವಾಗಿ ಮಾತನಾಡುವ ʼಕೃತಘ್ನʼತೆಗೆ ಇದೇ ಸಾಕ್ಷಿ ಎಂದು ಕಟುವಾಗಿ ಟೀಕಿಸಿದ್ದಾರೆ.
ಸುಳ್ಳು ಹೇಳುವ ಚಾಳಿಗೆ ಚಿಕಿತ್ಸೆ ಇಲ್ಲ. ʼಸಿದ್ದಕಲೆʼಯ ನಿಷ್ಣಾತರಿಗೆ ಸುಳ್ಳೇ ದೇವರು, ಸುಳ್ಳೇ ಸರ್ವಸ್ವ. ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ಸುಳ್ಳು ಹೇಳಿಕೊಂಡು ಓಡಾಡುವ ʼಗೊಬೆಲಪ್ಪʼನ ʼಬೂಸಿಭಜನೆʼ ಹೊಸದೇನೂ ಅಲ್ಲ. ರಾಜಕೀಯ ಜನ್ಮಕೊಟ್ಟ ಪಕ್ಷದ ಬಗ್ಗೆಯೇ ಹಗುರವಾಗಿ ಮಾತನಾಡುವ ʼಕೃತಘ್ನʼತೆಗೆ ಇದೇ ಸಾಕ್ಷಿ. 1/4
— H D Kumaraswamy (@hd_kumaraswamy) December 22, 2021