ಮತಾಂತರ ನಿಷೇಧ ಮಸೂದೆಗೆ ಎಚ್ ವಿಶ್ವನಾಥ್ ವಿರೋಧ, ಜಂಟಿ ಸದನ ಸಮಿತಿಗೆ ನೀಡುವಂತೆ ಒತ್ತಾಯ
ಬಿಜೆಪಿ ಎಂಎಲ್‌ಸಿ ಎ.ಎಚ್.ವಿಶ್ವನಾಥ್ ಅವರು ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರವಾದ ಮತಾಂತರ ನಿಷೇಧ ಮಸೂದೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಹರಿಹಾಯ್ದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Published: 24th December 2021 08:52 AM | Last Updated: 24th December 2021 08:52 AM | A+A A-

ವಿಶ್ವನಾಥ್
ಮೈಸೂರು: ಬಿಜೆಪಿ ಎಂಎಲ್‌ಸಿ ಎ.ಎಚ್.ವಿಶ್ವನಾಥ್ ಅವರು ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರವಾದ ಮತಾಂತರ ನಿಷೇಧ ಮಸೂದೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಹರಿಹಾಯ್ದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 12ನೇ ಶತಮಾನದ ಸುಧಾರಕ ಬಸವೇಶ್ವರ ಅವರು ಬೋಧಿಸಿದ ಸಮಾನತೆ ತತ್ವಗಳಿಗೆ ವಿರುದ್ಧವಾಗಿ ಜನರನ್ನು ವಿಭಜಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿವಾದಾತ್ಮಕ ಮಸೂದೆಯನ್ನು ಜಂಟಿ ಸದನ ಆಯ್ಕೆ ಸಮಿತಿಗೆ ಶಿಫಾರಸು ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ ವಿಶ್ವನಾಥ್ ಅವರು, ಸದಸ್ಯರು ವಿವಾದಾತ್ಮಕ ವಿಷಯದ ಬಗ್ಗೆ ದಾರ್ಶನಿಕರು, ಪ್ರಗತಿಪರ ಚಿಂತಕರು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಚರ್ಚಿಸಬೇಕು ಎಂದಿದ್ದಾರೆ.
ಇದನ್ನು ಓದಿ: ವಿಪಕ್ಷಗಳ ಗದ್ದಲದ ನಡುವೆ ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಬಸವೇಶ್ವರರ ಅನೇಕ ಅನುಯಾಯಿಗಳನ್ನು ಒಗ್ಗೂಡಿಸಿದ ನಂತರ ವೀರಶೈವ-ಲಿಂಗಾಯತ ನಂಬಿಕೆ ಹೊರಹೊಮ್ಮಿತು. ಆದರೆ ಲಿಂಗಾಯತ ಮಠಗಳು, ಅಹಿಂದ ಮಠಗಳ ದಾರ್ಶನಿಕರು ಈ ವಿಷಯದ ಬಗ್ಗೆ ಮೌನ ವಹಿಸಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದಿಂದ ಬಂದ ಅನುದಾನಗಳು ಮಠಗಳು ಬಹಿರಂಗವಾಗಿ ಮಾತನಾಡದಂತೆ ಮಾಡಿದೆ ಎಂದು ವ್ಯಂಗ್ಯವಾಡಿದ ವಿಶ್ವನಾಥ್, ಲೇಖಕರು ಮತ್ತು ಬುದ್ಧಿಜೀವಿಗಳು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಅವರೂ ಸಹ ರಾಜ್ಯೋತ್ಸವ ಪ್ರಶಸ್ತಿಗಳ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ ಎಂದರು.
ರಾಜ್ಯ ಸರ್ಕಾರವು ತರಾತುರಿಯಲ್ಲಿ ಮಸೂದೆಯನ್ನು ಜಾರಿಗೆತರುವ ಬದಲು, ಕಾಯ್ದೆಯ ಅಗತ್ಯತೆಯ ಬಗ್ಗೆ ಜನರಿಗೆ ತಿಳಿಸಿ, ಅನುಮಾನಗಳನ್ನು ನಿವಾರಿಸಬೇಕು ಮತ್ತು ಇದು ಯಾವುದೇ ರಹಸ್ಯ ಕಾರ್ಯಸೂಚಿಯೊಂದಿಗೆ ಜಾರಿ ತರುತ್ತಿಲ್ಲ ಎಂದು ಮನವರಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
"ರಾತ್ರೋರಾತ್ರಿ ಕರಡು ಸಿದ್ಧಪಡಿಸಿ ವಿಧಾನಸಭೆಯಲ್ಲಿ ಮಂಡಿಸುವ ಅಗತ್ಯ ಏನಿತ್ತು?" ಎಂದು ಪ್ರಶ್ನಿಸಿದ ವಿಶ್ವನಾಥ್. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾಜವನ್ನು ವಿಭಜಿಸದೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಎಂಇಎಸ್ ನಿಷೇಧಕ್ಕೆ ಆಗ್ರಹ
ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ಕನ್ನಡ ಧ್ವಜವನ್ನು ಸುಟ್ಟು, ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ ಎಂದು ಟೀಕಿಸಿದ ಅವರು, ರಾಜ್ಯ ಸರ್ಕಾರ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಬೆಳಗಾವಿಯ ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರು ಮರಾಠಿ ಭಾಷಿಕ ಜನಸಂಖ್ಯೆಯನ್ನು ಓಲೈಸಲು ಎಂಇಎಸ್ ವಿರುದ್ಧ ಮಾತನಾಡುತ್ತಿಲ್ಲ ಎಂದರು.