ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಅಸೆಂಬ್ಲಿ ಚುನಾವಣೆ: ಅರುಣ್ ಸಿಂಗ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ನೇತೃತ್ವದಲ್ಲಿಯೇ ಪಕ್ಷ ಮುಂದಿನ ಅಸೆಂಬ್ಲಿ ಚುನಾವಣೆಯನ್ನು ಎದುರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
Published: 28th December 2021 01:01 AM | Last Updated: 28th December 2021 01:10 PM | A+A A-

ಅರುಣ್ ಸಿಂಗ್
ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ನೇತೃತ್ವದಲ್ಲಿಯೇ ಪಕ್ಷ ಮುಂದಿನ ಅಸೆಂಬ್ಲಿ ಚುನಾವಣೆಯನ್ನು ಎದುರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಪಕ್ಷ ಮತ್ತು ರಾಜ್ಯ ಸರ್ಕಾರ ರಾಜ್ಯದ ಜನತೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿವೆ. ಮಂಗಳವಾರ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆ ಮತ್ತು ನಾಡಿದ್ದು ಪಕ್ಷದ ಕಾರ್ಯಕಾರಿಣಿ ಸಭೆಗಳು ನಡೆಯಲಿವೆ ಎಂದು ತಿಳಿಸಿದರು.
ಈ ಸಭೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭಾಗವಹಿಸಬೇಕಿತ್ತು. ಪಕ್ಷದ ಮುಖಂಡರನ್ನು ಉದ್ದೇಶಿಸಿ ಭಾಷಣ ಮಾಡಬೇಕಿತ್ತು. ಆದರೆ, ಕೋವಿಡ್ ನಿಯಮಾವಳಿ ಕಾರಣದಿಂದ ಅವರ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಪಕ್ಷದ ಕಾರ್ಯಕಾರಿಣಿ ಎಂದಿನಂತೆ ನಡೆಯಲಿದೆ. ಹಲವು ನಿರ್ಣಯಗಳನ್ನು ಅಂಗೀಕರಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ನಿಯಮಾವಳಿಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಪ್ರಧಾನ ಮಂತ್ರಿಯವರು 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದಾಗಿ ಪ್ರಕಟಿಸಿರುವುದು ಶ್ಲಾಘನಾರ್ಹ ಎಂದರು.