ಆಪ್ತ ಸಹಾಯಕನ ಪ್ರಕರಣದಿಂದ ಅಂತರ ಕಾಯ್ದುಕೊಂಡ ಶ್ರೀರಾಮುಲು: ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಧ್ವನಿ ಪರೀಕ್ಷೆ

ತಮ್ಮ ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ಬಂಧಿಸಿದ ಪ್ರಕರಣದಲ್ಲಿ ಸಚಿವ ಬಿ. ಶ್ರೀರಾಮುಲು ಅಂತರ ಕಾಯ್ದುಕೊಂಡಿದ್ದಾರೆ.
ವಿಜಯೇಂದ್ರ
ವಿಜಯೇಂದ್ರ

ಬೆಂಗಳೂರು: ತಮ್ಮ ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ಬಂಧಿಸಿದ ಪ್ರಕರಣದಲ್ಲಿ ಸಚಿವ ಬಿ. ಶ್ರೀರಾಮುಲು ಅಂತರ ಕಾಯ್ದುಕೊಂಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರು ನೀಡಿದ ದೂರಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ಶ್ರೀರಾಮುಲು ಅವರ ಆಪ್ತ ಸಹಾಯಕ ರಾಜಣ್ಣ ಅವರನ್ನು ಬಂಧಿಸಿದ್ದರು. ರಾಜಣ್ಣ ಶ್ರೀರಾಮುಲು ಹೆಸರನ್ನು ದುರುಪಯೋಗ ಪಡಿಸಿಕೊಂಡು ಜನರಿಗೆ ವಂಚಿಸುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದ್ದರು.

ಆದರೆ ತಮಗೆ ಈ ಸಂಬಂಧ ಯಾವುದೇ ಮಾಹಿತಿ ಇರಲಿಲ್ಲ, ರಾಜಣ್ಣ ನನಗೆ ಗೊತ್ತು, ಆದರೆ ಆತ ನನ್ನ ಆಪ್ತ ಸಹಾಯಕನಲ್ಲ, ನಾನು ಸಿಎಂ ಮತ್ತು ವಿಜಯೇಂದ್ರ ಅವರ ಜೊತೆ ಚರ್ಚಿಸಿದ್ದೇನೆ, ಪ್ರಕರಣದ ತನಿಖೆ ನಡೆಯುತ್ತಿದೆ, ಈ ಸಮಯದಲ್ಲಿ ಮಾತನಾಡುವುದು ಸರಿಯಾಗುವುದಿಲ್ಲ, ಯಾರೋಬ್ಬರು ಯಾರ ಹೆಸರನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ತಮ್ಮ ಮತ್ತು ಸಚಿವರ ಹೆಸರು ಹೇಳಿಕೊಂಡು ರಾಜಣ್ಣ ಹಲವಾರು ಮಂದಿಗೆ ವಂಚನೆ ಎಸಗಿದ್ದಾರೆ ಎಂದು ದೂರು ನೀಡಿದ್ದು ಸ್ವತಃ ಸಿಎಂ ಪುತ್ರ ವಿಜಯೇಂದ್ರ. ತಾವು ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಸಾರ್ವಜನಿಕ ಕ್ಷೇತ್ರದಲ್ಲಿರುವವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರಿಗೆ ವಂಚಿಸಬಾರದು ಎಂಬ ದೃಷ್ಟಿಯಿಂದಲೇ ದೂರು ನೀಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಅಧಿಕಾರದಲ್ಲಿರುವ ಸಾರ್ವಜನಿಕ ವ್ಯಕ್ತಿಗಳ ಹೆಸರು ಹೇಳಿಕೊಂಡು ವಂಚನೆ ಎಸಗುವವರಿಂದ ನಮಗೆ ತೊಂದರೆಯೇ, ಇದು ವಿರೋಧಿಗಳಿಗೆ ಅಪಪ್ರಚಾರ ನಡೆಸಲು ಪ್ರಮುಖ ಅಸ್ತ್ರವಾಗಬಹುದು, ಹೀಗಾಗಿ ಎಚ್ಚರ ತಪ್ಪಬಾರದು ಎಂದು ದೂರು ಕೊಟ್ಟಿದ್ದೇನೆ, ಇಂತಹ ಘಟನೆ ಮರುಕಳಿಸಬಾರದು ಎಂದಿದ್ದಾರೆ.

ಆರೋಪಿ ರಾಜಣ್ಣ ಅವರ ಧ್ವನಿ ಪರೀಕ್ಷೆಗಾಗಿ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ, ಸದ್ಯ ರಾಜಣ್ಣ ಬಿಡುಗಡೆಯಾಗಿದ್ದು, ಅಗತ್ಯಬಿದ್ದರೆ ಸಿಸಿಬಿ ಅಧಿಕಾರಿಗಳ ಎದುರು ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com