ನಾನ್ಯಾಕೆ ಕ್ಷಮೆ ಕೇಳಬೇಕು, ಸುಮಲತಾ ಬಳಿ ಕ್ಷಮೆ ಕೇಳುವ ಪದ ಬಳಕೆ ಮಾಡಿಲ್ಲ: ಹೆಚ್.ಡಿ. ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಂಸದೆ ಸಮಲತಾ ಅವರ ಮಧ್ಯೆ ಕೆಆರ್ ಎಸ್ ಜಲಾಶಯದ ವಿಚಾರದಲ್ಲಿ ವಾಕ್ಸಮರ ಮುಂದುವರಿದಿದೆ. 
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಂಸದೆ ಸಮಲತಾ ಅವರ ಮಧ್ಯೆ ಕೆಆರ್ ಎಸ್ ಜಲಾಶಯದ ವಿಚಾರದಲ್ಲಿ ವಾಕ್ಸಮರ ಮುಂದುವರಿದಿದೆ. 

ನಾನು 2018ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕೆಆರ್ ಎಸ್ ಜಲಾಶಯದ 20ಕಿಲೋ ಮೀಟರ್ ವ್ಯಾಪ್ತಿಯೊಳಗೆ ಗಣಿಗಾರಿಕೆ ನಡೆಯುತ್ತಿದ್ದರೆ ನಿಲ್ಲಿಸಬೇಕೆಂದು ನಾನು ಆದೇಶ ಮಾಡಿದ್ದೆ. ಸಂಸದೆ ಸುಮಲತಾ ಅವರು ಕಮಿಷನ್ ತೆಗೆದುಕೊಂಡು ಅಲ್ಲಿಗೆ ಇಂದು ತಪಾಸಣೆಗೆ ಹೋಗಿದ್ದಾರೆ, ಕೆಆರ್ ಎಸ್ ಗೆ ಹೋಗಬೇಕಾದವರು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಬೇರೆ ಕಡೆಗೆ ಏಕೆ ಹೋಗಿದ್ದಾರೆ, ಅಲ್ಲಿ ದುಡ್ಡು ವಸೂಲಿಗೆ ಹೋಗಿರಬಹುದು ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. 

ಸುಮಲತಾ ಅವರು ಸಂಸದರಾದ ಮೇಲೆ ಅಲ್ಲಿ ಗಣಿಗಾರಿಕೆ ನಡೆಯುತ್ತಿದೆಯೇ, 50-60 ವರ್ಷಗಳಿಂದ ಗಣಿಗಾರಿಕೆ ಆಗುತ್ತಿದೆ. ಇವತ್ತು ಅಕ್ರಮ ಅಥವಾ ಸಕ್ರಮ ಗಣಿಗಾರಿಕೆ ನಡೆಯುತ್ತಿದೆಯೋ, ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಒತ್ತಾಯಿಸಿದ್ದಾರೆ.

ನಾನೇಕೆ ಕ್ಷಮೆ ಕೇಳಲಿ?: ಸುಮಲತಾ ಅವರ ವಿರುದ್ಧ ನಾನು ತಪ್ಪು ಪದ ಬಳಕೆ ಮಾಡಿಲ್ಲ, ಅಶ್ಲೀಲ ಪದ ಬಳಸಿಲ್ಲ, ನನಗೆ ಅವರು ಸಂಸ್ಕೃತಿ, ಕನ್ನಡ ಭಾಷೆಯ ಪಾಠ ಮಾಡಿಕೊಡಬೇಕಿಲ್ಲ, ನನಗೂ ಸಂಸ್ಕೃತಿ ಗೊತ್ತಿದೆ, ಕನ್ನಡ ಭಾಷೆಯನ್ನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಅವರಲ್ಲಿ ಕ್ಷಮೆ ಕೇಳುವಂತಹ ಪದವನ್ನು ನಾನು ಬಳಕೆ ಮಾಡಿಲ್ಲ. ಸುಮಲತಾ ಅವರು ಯಾವ ಸಂಸ್ಕೃತಿಯಲ್ಲಿ ಬೆಳೆದಿದ್ದಾರೆ, ಅವರೇನು ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಹರಿಹಾಯ್ದರು.

ಪ್ರಜ್ವಲ್ ರೇವಣ್ಣ ಹೆಸರು ತಂದಿರುವುದೇಕೆ?: ನಮ್ಮಿಬ್ಬರ ಮಧ್ಯದಲ್ಲಿ ಪ್ರಜ್ವಲ್ ರೇವಣ್ಣ ಹೆಸರು ಬಳಕೆ ಮಾಡಿರುವುದು ನಮ್ಮ ಕುಟುಂಬವನ್ನು ಒಡೆಯುವ ಹುನ್ನಾರ ಎಂದು ಹೆಚ್ ಡಿ ಕುಮಾರಸ್ವಾಮಿ ಸಂಸದೆ ಸುಮಲತಾ ಅವರ ಮೇಲೆ ಕಿಡಿಕಾರಿದ್ದಾರೆ.
ಕುಟುಂಬ ಒಡೆಯುವ ಕೆಲಸ ಮಾಡಬೇಡಿ, ಪ್ರಜ್ವಲ್ ರೇವಣ್ಣ ಹೆಸರು ಹೇಳುವ ಅವಶ್ಯಕತೆಯಿರಲಿಲ್ಲ, ನಮ್ಮ ಕುಟುಂಬವನ್ನು ಒಡೆಯುವ ಕುತಂತ್ರ ನಡೆಸಿದರೆ ಅದು ಸಾಧ್ಯವಿಲ್ಲ, ಇಂತವರನ್ನು ರಾಜಕೀಯವಾಗಿ ಬೆಳೆಸಿದರೆ ನನಗಲ್ಲ, ಮಂಡ್ಯದ ಮತ್ತು ರಾಜ್ಯದ ಜನರಿಗೆ ನಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಅಂಬರೀಷ್ ಸಾವಿನ ದಿನದ ಪ್ರಸ್ತಾಪ: ಅಂಬರೀಷ್ ಅವರು ಮೃತಪಟ್ಟಾಗ ವಿಕ್ರಮ್ ಆಸ್ಪತ್ರೆಯಿಂದ ಅಂತ್ಯಸಂಸ್ಕಾರದವರೆಗೂ ನಾನು ಗೌರವಯುತಾಗಿ ಸರ್ಕಾರ ವತಿಯಿಂದ ಕಳುಹಿಸಿಕೊಟ್ಟಿದ್ದೇನೆ, ಸುಮಲತಾ ಅವರು ಮಂಡ್ಯಕ್ಕೆ ಅಂಬರೀಷ್ ಅವರ ಮೃತದೇಹವನ್ನು ತೆಗೆದುಕೊಂಡು ಹೋಗಲು ಸುತಾರಾಂ ಒಪ್ಪಿರಲಿಲ್ಲ. ಆಗ ನಾನೇ ಮುತುವರ್ಜಿ, ಕಾಳಜಿ ವಹಿಸಿ ಮಂಡ್ಯ ಜಿಲ್ಲೆಯ ಪ್ರೀತಿಯ ಋಣ ತೀರಿಸಬೇಕೆಂದು ಶರೀರವನ್ನು ತೆಗೆದುಕೊಂಡು ಹೋಗಬೇಕೆಂದು ಹೇಳಿದ್ದೆ. ಆಗಿಲ್ಲದ ಮಂಡ್ಯ ಪ್ರೀತಿಯನ್ನು ಇವತ್ತು ಸುಮಲತಾ ತೋರಿಸಿ ನಾಟಕವಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com