ಸದಾನಂದಗೌಡಗೆ ಕೊಕ್; ಶೋಭಾ, ರಾಘವೇಂದ್ರ, ಜಿಗಜಿಗಣಿಗೆ ಸ್ಥಾನ? ಎಲ್ಲರ ಚಿತ್ತ ದೆಹಲಿಯತ್ತ!

ಕರ್ನಾಟಕದಿಂದ ಹಲವು ಸಂಸದರು ತಮಗೂ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಪ್ರಧಾನಿ ಕಚೇರಿಯ ಕರೆಗಾಗಿ ಕಾಯುತ್ತಿದ್ದಾರೆ. ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ಮತ್ತು ರಮೇಶ್ ಜಿಗಜಿಣಗಿ ಈಗಾಗಲೇ ದೆಹಲಿಗೆ ತೆರಳಿದ್ದಾರೆ.
ರಮೇಶ್ ಜಿಗಜಿಣಗಿ ಮತ್ತು ಡಿವಿ ಸದಾನಂದಗೌಡ
ರಮೇಶ್ ಜಿಗಜಿಣಗಿ ಮತ್ತು ಡಿವಿ ಸದಾನಂದಗೌಡ

ಬೆಳಗಾವಿ/ಚಿತ್ರದುರ್ಗ: ಇಂದು ಸಂಜೆ ಕೇಂದ್ರ ಸಂಪುಟ ಪುನಾರಚನೆಯಾಗಲಿದ್ದು ಎಲ್ಲರ ಗಮನ ದೆಹಲಿಯ ಮೇಲೆ ನೆಟ್ಟಿದೆ.

ಕರ್ನಾಟಕದಿಂದ ಹಲವು ಸಂಸದರು ತಮಗೂ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಪ್ರಧಾನಿ ಕಚೇರಿಯ ಕರೆಗಾಗಿ ಕಾಯುತ್ತಿದ್ದಾರೆ. ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ಮತ್ತು ರಮೇಶ್ ಜಿಗಜಿಣಗಿ ಈಗಾಗಲೇ ದೆಹಲಿಗೆ ತೆರಳಿದ್ದಾರೆ.

ಹಿರಿಯ ಸಂಸದರನ್ನು ಹೊರತುಪಡಿಸಿ, ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಅವರು ಸಂಪುಟಕ್ಕೆ ಸೇರುವ ಸಾಧ್ಯತೆಯಿದೆ. ಆದರೆ ಅವರಿಗೆ ದೆಹಲಿಯಿಂದ ಕರೆ ಬಂದಿದೆಯೆ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ,  

ಕೇಂದ್ರ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ದೊರೆಯುವ ಬಗ್ಗೆ ಇನ್ನೂ ಖಚಿತತೆ ದೊರೆತಿಲ್ಲ, ಹಿರಿಯ ಸಚಿವರೊಬ್ಬರು ಕರೆ ಮಾಡಿ ದೆಹಲಿಗೆ ಬರುವಂತೆ ತಿಳಿಸಿದರು, ಆದರೆ ಪ್ರಧಾನಿ ಕಚೇರಿಯಿಂದ ಇನ್ನೂ ನನಗೆ ಕರೆ ಬಂದಿಲ್ಲ ಎಂದು ಸಂಸದ ರಮೇಶ್ ಜಿಗಜಿಣಗಿ ತಿಳಿಸಿದ್ದಾರೆ.

ಇನ್ನೂ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅವರಿಗೂ ಹಿರಿಯ ಸಚಿವರು ಕರೆ ಮಾಡಿದ್ದರು ಎಂದು ರಮೇಶ್ ಜಿಗಜಿಣಗಿ ತಿಳಿಸಿದ್ದಾರೆ, ಐದು ಬಾರಿ ಸಂಸದರಾಗಿರುವ ಜಿಗಜಿಣಗಿ ಹಿಂದಿನ ಮೋದಿ ಸರ್ಕಾರದಲ್ಲಿ ನೀರು ಮತ್ತು ನೈರ್ಮಲ್ಯೀಕರಣ ಖಾತೆ ನಿರ್ವಹಿಸಿದ್ದರು. ಅವರ ಅನುಭವ ಮತ್ತು ಜಾತಿ ಸಮೀಕರಣ ದಿಂದಾಗಿ ಮತ್ತೆ ಕೇಂದ್ರ ಸಂಪುಟಕ್ಕೆ ಸೇರುವ ಸಾಧ್ಯತೆಯಿದೆ.

ಬೆಳಗಾವಿ ಸಂಸದ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ  ಸ್ಥಾನಕ್ಕೆ ಕರ್ನಾಟಕದ ಮತ್ತೊಬ್ಬ ಸಂಸದರಿಗೆ ಅವಕಾಶ ಕೊಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಶಿವಮೊಗ್ಗ ಸಂಸದ ಸಿಎಂ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಅವರಿಗೂ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ..

ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಯುವಕರು, ವಿದ್ಯಾವಂತರು ಮತ್ತು ಆಡಳಿತದಲ್ಲಿ ಅನುಭವವಿರುವವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದೇ ವೇಳೆ ಕೇಂದ್ರ ರಸಗೊಬ್ಬರ ಸಚಿವ ಡಿವಿ ಸದಾನಂದಗೌಡ ಅವರಿಗೆ ಕೊಕ್ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕದ ಹೊಸ ಸಂಸದರಿಗೆ ಮೋದಿ ಮಣೆ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ., ಇನ್ನೂ ಬೀದರ್ ಸಂಸದ ಹಾಗೂ ಪ್ರಮುಖ ಲಿಂಗಾಯತ ನಾಯಕ ಭಗವಾನ್ ಖೂಬಾ ಅವರ ಹೆಸರು ಕೇಳಿ ಬರುತ್ತಿದೆ.ಖೂಬಾ ಅವರಿಗೆ ಆರ್ ಎಸ್ ಎಸ್ ಮತ್ತು ಬಿಜೆಪಿ ಪ್ರಮುಖ ನಾಯಕರ ಬೆಂಬಲವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com