ಸಂಸದೆ ಸುಮಲತಾ ಅವರಿಗೆ ರಾಜಕೀಯ ಅನುಭವದ ಕೊರತೆಯಿದೆ: ನಿಖಿಲ್ ಕುಮಾರಸ್ವಾಮಿ
ಕೋಲಾರ: ಸಂಸದೆ ಸುಮಲತಾ ಅವರು ವೈಯಕ್ತಿಕ ಲಾಭಕ್ಕೆ ಇನ್ನೊಬ್ಬರನ್ನು ಟೀಕಿಸುವುದನ್ನು ಬಿಟ್ಟು ಮಂಡ್ಯ ಜನತೆಯ ಋಣ ತೀರಿಸುವ ಕೆಲಸ ಮಾಡಲಿ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಕಳೆದೆರಡು ದಿನಗಳಿಂದ ಕೆಆರ್ ಎಸ್ ಜಲಾಶಯ ಮತ್ತು ಸುತ್ತಮುತ್ತ ಅಕ್ರಮ ಗಣಿಗಾರಿಕೆ ಬಗ್ಗೆ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ನಡುವೆ ತೀವ್ರ ವಾಗ್ದಾಳಿ ನಡೆಯುತ್ತಿದೆ.
ಈ ಬಗ್ಗೆ ಇಂದು ಕೋಲಾರ ಜಿಲ್ಲೆಯ ಕೊಂಡರಾಜನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಕೆಆರ್ ಎಸ್ ಜಲಾಶಯಕ್ಕೆ ಭವ್ಯ ಇತಿಹಾಸವಿದೆ, ಮೈಸೂರು ಮಹಾರಾಜರು ಒಡವೆ ಅಡವಿಟ್ಟು ಸರ್ ಎಂ ವಿಶ್ವೇಶ್ವರಯ್ಯನವರ ತಾಂತ್ರಿಕ ಕೌಶಲ್ಯದಲ್ಲಿ ಅಣೆಕಟ್ಟು ಕಟ್ಟಿಸಿದ್ದಾರೆ. ಜಲಾಶಯ ಬಿರುಕುಬಿಟ್ಟಿದ್ದರೆ ತಾಂತ್ರಿಕ ತಜ್ಞರು, ಅಧಿಕಾರಿಗಳು ಹೇಳಬೇಕಿತ್ತು, ಸರ್ಕಾರ ಅದನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು. ಆದರೆ ಸಂಸದೆ ಸುಮಲತಾ ಅವರು ಜಲಾಶಯ ಬಿರುಕು ಬಿಟ್ಟಿದೆ ಎಂದು ಹೇಳಿ ಅಲ್ಲಿನ ಜನರಲ್ಲಿ ಆತಂಕ, ಗೊಂದಲ ಸೃಷ್ಟಿಸುತ್ತಿದ್ದಾರೆ. ಜಲಾಶಯ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರ್ಕಾರ ಕ್ರಮ ಕೈಗೊಳ್ಳಲಿ ಎಂದರು.
ಸುಮಲತಾ ಅವರು ನನ್ನ ತಮ್ಮ ಪ್ರಜ್ವಲ್ ರೇವಣ್ಣರನ್ನು ಹೊಗಳಿ ರಾಜಕೀಯ ಸರ್ಟಿಫಿಕೇಟ್ ಕೊಟ್ಟಿದ್ದಾರೆ, ಕೊಡಲಿ ಅವರಿಗೆ ಅಭಿನಂದನೆ, ನಾನು ಮಂಡ್ಯದಲ್ಲಿ ಸೋತಿದ್ದರೂ ಐದೂವರೆ ಲಕ್ಷ ಜನ ನನಗೂ ಮತ ಹಾಕಿದ್ದರು. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ, ಚುನಾವಣೆಯಲ್ಲಿ ಗೆದ್ದಿರುವ ಸುಮಲತಾ ಅವರು ವೈಯಕ್ತಿಕ ಟೀಕೆ, ಆರೋಪದಲ್ಲಿ ಕಾಲಹರಣ ಮಾಡುತ್ತಿದ್ದಾರೆ, ಅವರಿಗೆ ರಾಜಕೀಯ ಅನುಭವ ಕಡಿಮೆಯಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ