ನನ್ನ ಹೋರಾಟ ಮಂಡ್ಯ ಜಿಲ್ಲೆಯ ಅಕ್ರಮ ಗಣಿಗಾರಿಕೆ ವಿರುದ್ಧ, ದ್ವೇಷದ ರಾಜಕಾರಣ ಮಾಡಲ್ಲ: ಸುಮಲತಾ ಅಂಬರೀಷ್

ಕನ್ನಂಬಾಡಿ ಕಾಳಗ ಮತ್ತು ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಜೆಡಿಎಸ್ ದಳಪತಿಗಳು ಎರಡು ದಿನಗಳಿಂದ ಸುಮ್ಮನಾಗಿದ್ದರೂ ಸಂಸದೆ ಸುಮಲತಾ ಅಂಬರೀಷ್ ಮಾತ್ರ ಸುಮ್ಮನೆ ಕುಳಿತಿಲ್ಲ, ಜೆಡಿಎಸ್ ನಾಯಕರ ವಿರುದ್ಧ ತಮ್ಮ ವಾಗ್ದಾಳಿ, ಟ್ವೀಟ್ ದಾಳಿಗಳನ್ನು ಮುಂದುವರಿಸಿದ್ದಾರೆ.
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್

ಬೆಂಗಳೂರು: ಕನ್ನಂಬಾಡಿ ಕಾಳಗ ಮತ್ತು ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಜೆಡಿಎಸ್ ದಳಪತಿಗಳು ಎರಡು ದಿನಗಳಿಂದ ಸುಮ್ಮನಾಗಿದ್ದರೂ ಸಂಸದೆ ಸುಮಲತಾ ಅಂಬರೀಷ್ ಮಾತ್ರ ಸುಮ್ಮನೆ ಕುಳಿತಿಲ್ಲ, ಜೆಡಿಎಸ್ ನಾಯಕರ ವಿರುದ್ಧ ತಮ್ಮ ವಾಗ್ದಾಳಿ, ಟ್ವೀಟ್ ದಾಳಿಗಳನ್ನು ಮುಂದುವರಿಸಿದ್ದಾರೆ.

ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಅವರು ಬೇರೆಯವರಿಗೆ ಗಂಧವನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಗಂಧವಾಗುತ್ತದೆ. ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ ಎಂದು ತಿವಿದಿದ್ದಾರೆ.

ಇತ್ತ ಅಂಬರೀಷ್ ಅಭಿಮಾನಿಗಳು ಸಹ ಜೆಡಿಎಸ್ ನಾಯಕರ ವಿರುದ್ಧ ತೀವ್ರ ಮಟ್ಟದಲ್ಲಿ ಹೋರಾಟ, ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೊದ ಅಂಬರೀಷ್ ಸಮಾಧಿ ಮುಂದೆ ಜೆಡಿಎಸ್ ನಾಯಕರ ವಿರುದ್ಧ ಘೋಷಣೆ ಕೂಗಿ ಸುಮಲತಾ ಅಂಬರೀಷ್ ಅವರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.

ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಷ್, ಜೆಡಿಎಸ್ ನಾಯಕರು ಹೋಗುವ ದಾರಿಯಲ್ಲಿ ನಾವು ಹೋಗುವುದು ಬೇಡ, ದ್ವೇಷ ರಾಜಕಾರಣ ಮಾಡುವುದು ಬೇಡ, ನ್ಯಾಯಯುತವಾಗಿಯೇ ಶಾಂತಿಯುತವಾಗಿ ಅಕ್ರಮ ಗಣಿಗಾರಿಕೆ ಮತ್ತು ಕೆಆರ್ ಎಸ್ ಡ್ಯಾಂ ರಕ್ಷಣೆ ಬಗ್ಗೆ ಹೋರಾಡೋಣ ಎಂದು ಅಂಬರೀಷ್ ಅಭಿಮಾನಿಗಳಿಗೂ ಹೇಳುತ್ತೇನೆ ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿರುದ್ಧವಾಗಲಿ, ಜೆಡಿಎಸ್ ನಾಯಕರ ವಿರುದ್ಧವಾಗಲಿ ನಾನು ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ, ನಾನು ಯಾರನ್ನೂ ಟಾರ್ಗೆಟ್ ಮಾಡುವುದಿಲ್ಲ, ನನ್ನ ಹೋರಾಟ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ, ಅದನ್ನು ನಾನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ ಎಂದರು.

ಇದೇ ವಾರ ಆರಂಭವಾಗಲಿರುವ ಸಂಸತ್ತು ಅಧಿವೇಶನದಲ್ಲಿ ಕೂಡ ಅಕ್ರಮ ಗಣಿಗಾರಿಕೆ ಬಗ್ಗೆ ಪ್ರಸ್ತಾಪಿಸುತ್ತೇನೆ, ಈ ಹಿಂದೆ ಕೂಡ ಸಂಸತ್ತಿನಲ್ಲಿ ಮಾತನಾಡಿದ್ದೇನೆ. ಈಗಷ್ಟೇ ರಾಜಭವನದಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿಯವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ, ಇನ್ನೆರಡು ಮೂರು ದಿನಗಳಲ್ಲಿ ಸಮಯಾವಕಾಶ ನೀಡುತ್ತೇನೆ, ಯಾವಾಗ ಬೇಕಾದರೂ ಬನ್ನಿ ಎಂದು ಹೇಳಿದ್ದಾರೆ ಎಂದರು.

ಅಕ್ರಮ ಗಣಿಗಾರಿಕೆ ಬಗ್ಗೆ ದಾಖಲೆ ಕೊಡಬೇಕಾಗಿರುವುದು ನಾನಲ್ಲ, ಗಣಿಗಾರಿಕೆ ಇಲಾಖೆಯ ಅಧಿಕಾರಿಗಳು ನೀಡಬೇಕು. ಹಾಗಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com